ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣಾ ನಿಯಂತ್ರಣಾ ಕಾಯ್ದೆಗೆ ಕೂಡಲೇ ನಿಯಮ ರೂಪಿಸಿ: ಸುರೇಶ್ ಕುಮಾರ್

Last Updated 17 ಏಪ್ರಿಲ್ 2020, 12:14 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಬಜೆಟ್ ಅಧಿವೇಶನದಲ್ಲಿ ಅನುಮೋದನೆಗೊಂಡಿರುವ ಶಿಕ್ಷಕರ ವರ್ಗಾವಣಾ ನಿಯಂತ್ರಣಾ ಕಾಯ್ದೆಗೆ ತುರ್ತಾಗಿ ನಿಯಮಗಳನ್ನು ರೂಪಿಸಿ ಪ್ರಸ್ತುತ ಶೈಕ್ಷಣಿಕ ಸಾಲಿನ ವರ್ಗಾವಣಾ ವೇಳಾಪಟ್ಟಿ ಪ್ರಕಟಣೆಗೆ ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಸಂಸದೀಯ ವ್ಯವಹಾರಗಳ ಇಲಾಖೆಯ ಕಾನೂನಾತ್ಮಕ ಅಭಿಪ್ರಾಯದೊಂದಿಗೆ ಕೂಡಲೇ ನಿಯಮಗಳನ್ನು ಅಂತಿಮಗೊಳಿಸಿ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಯು-ಟ್ಯೂಬ್ ಚಾನಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪುನರ್ಮನನ ತರಗತಿಗಳನ್ನು ಬಿತ್ತರಿಸಲು ಕಾರ್ಯೋನ್ಮುಖವಾಗಲು ಸೂಚಿಸಿದರು.

ಹಲವು ಶಾಲೆಗಳು ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿರುವ ಕುರಿತಂತೆ ಕೆಲವು ಮಾಧ್ಯಮಗಳು ವರದಿಗಳನ್ನು ನೀಡಿದ್ದು, ಬೇಸಿಗೆ ರಜೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಆನಂದವನ್ನು ಕಸಿದುಕೊಳ್ಳದಿರುವ ಹಾಗೂ ಪೋಷಕರಿಗೆ ಯಾವುದೇ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸಲು ಇಚ್ಛಿಸಿದಲ್ಲಿ ಅನುಮತಿಯನ್ನು ನೀಡುವಲ್ಲಿ ಪರಿಶೀಲಿಸಿ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.

ಪ್ರಸ್ತುತ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ಸಾಲಿನ ಅವಧಿಯ ಪರಿಷ್ಕರಣೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಎನ್‌ಸಿಇಆರ್‌ಟಿ ನಿಗದಿಪಡಿಸಿದ ಪಠ್ಯಕ್ರಮದ ಆಶಯಗಳಿಗೆ ಅನುಗುಣವಾಗಿ ಪಠ್ಯಕ್ರಮ ಪರಿಷ್ಕರಣೆಯ ಅವಶ್ಯಕತೆಯನ್ನು ಗ್ರಹಿಸಬೇಕಾಗಿದ್ದು, ಇದಕ್ಕಾಗಿ ತಜ್ಞರೊಂದಿಗೆ ಸಭೆಯನ್ನು ನಡೆಸುವ ಕುರಿತು ಕೂಡಲೇ ಪ್ರಸ್ತಾವನೆ ಮಂಡಿಸಬೇಕೆಂದು ಸುರೇಶ್ ಕುಮಾರ್ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT