ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಲೂಟಿಗೆ ‘ರಹದಾರಿ’

ಪಿಪಿಇ ಕಿಟ್, ಕೊರೊನಾ ಪರೀಕ್ಷಾ ಕಿಟ್‌ ಖರೀದಿಯಲ್ಲಿ ಅಕ್ರಮ: ಲೆಕ್ಕಪತ್ರಗಳ ಸಮಿತಿಯಿಂದ ತನಿಖೆ
Last Updated 27 ಮೇ 2020, 19:20 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಹರಡುವಿಕೆ ತಡೆಯಲು ಸಕಲರು ಒಂದಾಗಿ ಶ್ರಮಿಸುತ್ತಿದ್ದರೆ, ಈ ಅವಕಾಶ ದುರ್ಬಳಕೆ ಮಾಡಿಕೊಂಡ ಕೆಲವು ಮಂದಿ ಸೋಂಕು ಪರೀಕ್ಷಾ ಕಿಟ್‌, ಪಿಪಿಇ ಕಿಟ್, ಸ್ಯಾನಿಟೈಸರ್‌ ಖರೀದಿ ಹೆಸರಿನಲ್ಲಿ ತಮ್ಮ ಜೇಬು ತುಂಬಿಸಿಕೊಳ್ಳುವ ಅಡ್ಡದಾರಿಯಲ್ಲಿ ಸಕ್ರಿಯರಾಗಿದ್ದಾರೆ.

ಆತಂಕಕಾರಿಯಾಗಿ ಬಂದೆರಗಿದ ಕೊರೊನಾ ತಡೆಗೆ ತುರ್ತಾಗಿ ಬೇಕಿದ್ದ ಕಾರಣ ಉಪಕರಣ, ಸಾಮಗ್ರಿಗಳ ಖರೀದಿಗೆ ಕೆಟಿಟಿಪಿ (ಸಾರ್ವಜನಿಕ ಸಂಗ್ರಹದಲ್ಲಿ ಪಾರದರ್ಶಕತೆ) ಕಾಯ್ದೆಯಡಿ ಸರ್ಕಾರ ವಿನಾಯಿತಿ ನೀಡಿದೆ. ಖರೀದಿಯ ಹೊಣೆಯನ್ನು ಸರ್ಕಾರದ ಅಧೀನ ಸಂಸ್ಥೆಯಾದ ಕರ್ನಾಟಕ ಡ್ರಗ್ಸ್‌ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಗೆ (ಕೆಡಿಎಲ್‌ಡಬ್ಲ್ಯೂಎಸ್‌) ವಹಿಸಲಾಗಿದೆ. ಇಂತಹ ಅವಕಾಶ ಬಳಸಿಕೊಂಡ ಕೆಲವು ಪಟ್ಟಭದ್ರರು ಖರೀದಿಯಲ್ಲಿ ಭಾರಿ ಅಕ್ರಮ ನಡೆಸಿ ಲಾಭ ಮಾಡಿಕೊಂಡಿರುವ ದಾಖಲೆಗಳು ಈಗ ಮುನ್ನೆಲೆಗೆ ಬಂದಿವೆ.

‘ಕೊರೊನಾ ಹೆಸರಿನಲ್ಲಿ ಖರೀದಿಯ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಮತ್ತು ಕಳಪೆ ದರ್ಜೆಯ ಸಲಕರಣೆಗಳನ್ನು ಖರೀದಿ ಮಾಡಲಾಗಿದೆ’ ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಕರ್ನಾಟಕ ರಾಷ್ಟ್ರ ಸಮಿತಿ ದೂರು ನೀಡಿದೆ.

ಎಚ್‌.ಕೆ. ಪಾಟೀಲ ಅಧ್ಯಕ್ಷತೆಯಲ್ಲಿರುವ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು (ಪಿಎಸಿ) ಖರೀದಿ ಅಕ್ರಮದ ಬಗ್ಗೆ ತನಿಖೆ ಆರಂಭಿಸಿದೆ. ಆರೋಗ್ಯ ಇಲಾಖೆ ಹಾಗೂ ಕೆಡಿಎಲ್‌ಡಬ್ಲ್ಯೂಎಸ್‌ನಿಂದ ವಿವರಣೆಯನ್ನೂ ಕೇಳಿದೆ.

ಅಕ್ರಮದ ಜಾಡು: ಮಹಾರಾಷ್ಟ್ರದ ಅಮರಾವತಿ ಮೂಲದ ಕಂಪನಿಯಿಂದ ಖರೀದಿ ಮಾಡಲಾಗಿದ್ದ ಪಿಪಿಇ ಕಿಟ್ ಕಳಪೆ ಗುಣಮಟ್ಟದ್ದು ಎಂದು ವೈದ್ಯರು ಆರೋಪಿಸಿದ್ದರು. ಆದರೂ, ಅದೇ ಕಂಪನಿಯಿಂದ ಮತ್ತುಕೃಷಿ ಆಧಾರಿತ ಉಪಕರಣಗಳ ತಯಾರಿಕಾ ಕಂಪನಿಯಿಂದ ಕಿಟ್ ಖರೀದಿ ಮಾಡಲಾಗಿದೆ. ಅಲ್ಲದೇ ಮೊದಲು ಖರೀದಿ ಮಾಡಿದ್ದ ಕಿಟ್‌ ದರಕ್ಕೂ, ಎರಡನೇ ಬಾರಿ ಖರೀದಿಸಿದ ದರಕ್ಕೂ ಅಜಗಜಾಂತರ ಇದೆ.

ಚೀನಾದ ಕಂಪನಿಯಿಂದ ಕೊರೊನಾ ಪರೀಕ್ಷಾ ಕಿಟ್‌ ಖರೀದಿ ಮಾಡಲಾಗಿದೆ. ಈ ಕಿಟ್‌ಗಳು ಕಳಪೆ ಎಂಬ ಕಾರಣಕ್ಕೆ ರಾಜಸ್ಥಾನ ಸರ್ಕಾರವು ಅವುಗಳ ಬಳಕೆ ನಿಲ್ಲಿಸಿತ್ತು. ಈ ವಿಷಯ ಗೊತ್ತಾದ ನಂತರವೂ ಅದೇ ಕಂಪನಿಯ ಕಿಟ್‌ಗಳನ್ನುಕೆಡಿಎಲ್‌ಡಬ್ಲ್ಯೂಎಸ್‌ ಖರೀದಿ ಮಾಡಿದೆ. ಕಳಪೆ ಎಂಬುದು ಮತ್ತೊಮ್ಮೆ ಮನವರಿಕೆ ಆದ ನಂತರ ಆರೋಗ್ಯ ಇಲಾಖೆ ಕೂಡ ಈ ಕಿಟ್‌ಗಳ ಬಳಕೆ ನಿಲ್ಲಿಸಿದೆ.ಕೆಡಿಎಲ್‌ಡಬ್ಲ್ಯೂಎಸ್ ಮಾಡಿದ ಎಡವಟ್ಟಿನಿಂದ ರಾಜ್ಯದಲ್ಲಿ ಕೊರೊನಾ ಪರೀಕ್ಷೆಗಳು ವ್ಯಾಪಕವಾಗಿ ನಡೆಯಲಿಲ್ಲ. ರಾಜ್ಯದ ಬೊಕ್ಕಸಕ್ಕೂ ನಷ್ಟವಾಯಿತು ಎಂಬುದು ಕರ್ನಾಟಕ ರಾಷ್ಟ್ರ ಸಮಿತಿಯ ಪ್ರಮುಖ ಆರೋಪ.

‘ಸಿರಿಂಜ್, ಸಿರಿಂಜ್ ಪಂಪ್ ಮತ್ತು ಇತರೆ ವೈದ್ಯಕೀಯ ಉಪಕರಣಗಳನ್ನೂ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಲಾಗಿದೆ’ ಎಂದೂ ಸಮಿತಿ ದೂರಿದೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ‘ಸಚಿವರು ಬೇರೆ ಸಭೆಯಲ್ಲಿದ್ದಾರೆ. ಪ್ರತಿಕ್ರಿಯೆಗೆ ಇಂದು ಸಿಗಲಾರರು’ ಎಂದು ಅವರ ಆಪ್ತ ಸಹಾಯಕರು ಹೇಳಿದರು.

ಹೆಚ್ಚು ದರದಲ್ಲಿ ಗ್ಲೂಕೋಸ್ ಖರೀದಿ

ಕೇರಳ, ಒಡಿಶಾ ಮತ್ತು ರಾಜಸ್ಥಾನ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿರುವ ಗುಜರಾತ್‌ನ ಕಂಪನಿಯಿಂದಲೇ ₹4 ಕೋಟಿ ಮೌಲ್ಯದ ಗ್ಲೂಕೋಸ್ ಖರೀದಿ ಮಾಡಲಾಗಿದೆ.

ಈ ಹಿಂದೆ ಸಮಯಕ್ಕೆ ಸರಿಯಾಗಿ ಗ್ಲೂಕೋಸ್ ಪೂರೈಕೆ ಮಾಡಿಲ್ಲ ಎಂಬ ಕಾರಣಕ್ಕೆ ಕೆಡಿಎಲ್‌ಡಬ್ಲ್ಯೂಎಸ್ ಸಂಸ್ಥೆಯೇ ಆ ಕಂಪನಿಗೆ ನೋಟಿಸ್ ನೀಡಿ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿತ್ತು. ಈಗ ಅದೇ ಕಂಪನಿಯಿಂದ ಖರೀದಿ ಮಾಡಲಾಗಿದೆ. ಅಲ್ಲದೇ, ಕಡಿಮೆ ದರ ನಮೂದಿಸಿದ್ದ ಎರಡು ಕಂಪನಿಗಳನ್ನು ಕೈಬಿಟ್ಟು ಹೆಚ್ಚು ದರ ನಮೂದಿಸಿದ್ದ ಕಂಪನಿಯಿಂದ ಖರೀದಿಸಲಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಳಸಿದ್ದ ವೆಂಟಿಲೇಟರ್‌ಗಳ ಖರೀದಿ

ಕೊರೊನಾ ಚಿಕಿತ್ಸೆಗೆ ಅಗತ್ಯವಾದ ವೆಂಟಿಲೇಟರ್‌ಗಳನ್ನು ದೆಹಲಿ ‌ಸಂಸ್ಥೆಯೊಂದರಿಂದ ₹3.88 ಕೋಟಿ ಮೊತ್ತ ಪಾವತಿಸಿ ಖರೀದಿ ಮಾಡಲಾಗಿದೆ. 2007ರಲ್ಲಿ ಆ ಸಂಸ್ಥೆಯೂ ಇವುಗಳನ್ನು ಖರೀದಿಸಿದ್ದು, 45 ಸಾವಿರ ಗಂಟೆಗಳ ಕಾಲ ಅವುಗಳನ್ನು ಬಳಸಿದೆ.

‘ವೆಂಟಿಲೇಟರ್‌ಗಳು 7ರಿಂದ 8 ವರ್ಷ ಬಾಳಿಕೆ ಬರಲಿದ್ದು, 13 ವರ್ಷ ಹಳೆಯದಾದ ಈ ವೆಂಟಿಲೇಟರ್‌ಗಳನ್ನು ಖರೀದಿ ಮಾಡಲಾಗಿದೆ. ಐಎಸ್‌ಒ ಅಥವಾ ಇನ್ನಾವುದೇ ದೃಢೀಕರಣವನ್ನೂ ಪಡೆದಿಲ್ಲ’ ಎಂಬುದು ರಾಷ್ಟ್ರ ಸಮಿತಿಯ ಆರೋಪ.

ಎರಡೂವರೆ ಪಟ್ಟು ಹೆಚ್ಚಿನ ದರಕ್ಕೆ ಸ್ಯಾನಿಟೈಸರ್

2019ರಲ್ಲಿ ಟೆಂಡರ್ ಮೂಲಕ ಸ್ಯಾನಿಟೈಸರ್ ಖರೀದಿ ಪ್ರಕ್ರಿಯೆ ನಡೆಸಿದ್ದ ಕೆಡಿಎಲ್‌ಡಬ್ಲ್ಯೂಎಸ್ 500 ಎಂಎಲ್‌ ಬಾಟಲಿಗಳಲ್ಲಿ 47 ಸಾವಿರ ಯುನಿಟ್‌ಗಳನ್ನು ಪೂರೈಸುವ ಕಾರ್ಯಾದೇಶವನ್ನು ಎಂ.ಎಸ್‌ ಫಾರ್ಮಸಿಟಿಕಲ್‌ಗೆ ನೀಡಿತ್ತು. ಆಗ ಪ್ರತಿ ಬಾಟಲಿಗೆ ₹97.44 ದರ ನೀಡಲಾಗಿತ್ತು.

ಬೇಡಿಕೆಯಲ್ಲಿ ಶೇ 50ರಷ್ಟು ಸ್ಯಾನಿಟೈಸರ್ ಪೂರೈಸಿದ್ದ ಚೆನ್ನೈನ ಆ ಕಂಪನಿಯು, ಬಾಕಿ ಉತ್ಪನ್ನ ಪೂರೈಕೆ ಮಾಡುವುದಿಲ್ಲ ಎಂದು ತಿಳಿಸಿತ್ತು. ಟೆಂಡರ್ ನಿಯಮದ ಉಲ್ಲಂಘಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಂಡು ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳುವ ಬದಲು, ಅದೇ ಕಂಪನಿಯಿಂದ ಇತ್ತೀಚೆಗೆ ₹250 ದರದಲ್ಲಿ ಸ್ಯಾನಿಟೈಸರ್ ಖರೀದಿಸಲಾಗಿದೆ. ಇದರಲ್ಲೂ ಅಕ್ರಮ ನಡೆದಿದೆ ಎಂಬುದು ಸಮಿತಿಯ ದೂರು.

ಕಡಿಮೆ ದರಕ್ಕೆ ಉಪಕರಣ ಮಾರಾಟ

2015–16ರಲ್ಲಿ ಸುಮಾರು ₹2 ಕೋಟಿಗೂ ಹೆಚ್ಚು ದರಕ್ಕೆ ಖರೀದಿಸಿದ್ದ ಡಯಾಲಿಸಿಸ್ ಉಪಕರಣಗಳನ್ನು ಈಗ ಕೇವಲ ₹24 ಲಕ್ಷಕ್ಕೆ ಕೆಡಿಎಲ್‌ಡಬ್ಲ್ಯೂಎಸ್ ಮಾರಾಟ ಮಾಡಿದೆ. ಇದರಿಂದಲೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ.

ಪ್ರತಿಕ್ರಿಯೆ

ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಇದರ ಸಂಬಂಧವೇ ಲೆಕ್ಕಪತ್ರಗಳ ಸಮಿತಿಯ ಸಭೆಯನ್ನು ಗುರುವಾರ ಕರೆಯಲಾಗಿದೆ. ಸಭೆಯ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದುಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ ಹೇಳಿದರು.

ಕೆಡಿಎಲ್‌ಡಬ್ಲ್ಯೂಎಸ್‌ನಲ್ಲಿ ನಡೆದಿರುವ ಸಂಪೂರ್ಣ ವಹಿವಾಟಿನ ಬಗ್ಗೆ ತನಿಖೆ ನಡೆಸಬೇಕು. ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದುಕರ್ನಾಟಕ ರಾಷ್ಟ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT