ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಪರದಾಟ | ‘ಚಿಮಣಿ ಎಣ್ಣಿ ಬಿಟ್ರ ಬೇರೇನೂ ಕೊಟ್ಟಿಲ್ರಿ’

ಮೂಲಸೌಕರ್ಯ ಇಲ್ಲದೇ ತಾತ್ಕಾಲಿಕ ಶೆಡ್‌ನಲ್ಲಿ ಸಂತ್ರಸ್ತರು * ವಿದ್ಯುತ್‌ ಸಂಪರ್ಕ ಇಲ್ಲ
Last Updated 28 ಸೆಪ್ಟೆಂಬರ್ 2019, 2:28 IST
ಅಕ್ಷರ ಗಾತ್ರ

ಗದಗ: ‘ಪರಿಹಾರ ಕೇಂದ್ರ ಬಂದ್‌ ಆಗಿ ಒಂದು ವಾರ ಆಗೇತಿ; ಹಿಂಗಾಗಿ ಹೊತ್ತಿನ ಊಟಕ್ಕೂ ಪರದಾಡೋ ಸ್ಥಿತಿ ಬಂದೈತಿ. ಸರ್ಕಾರದಿಂದ ಐದು ಲೀಟರ್‌ ಚಿಮಣಿ ಎಣ್ಣಿ ಬಿಟ್ರ ಬೇರೇನೂ ಸಿಕ್ಕಿಲ್ರಿ. ಯಾರೂ ನಮ್ಮತ್ತ ತಿರುಗಿಯೂ ನೋಡಿಲ್ರಿ...’

ಮಲಪ್ರಭಾ ಪ್ರವಾಹದಿಂದ ಮನೆ ಕಳೆದುಕೊಂಡು ತಗಡಿನ ಶೆಡ್‌ನಲ್ಲಿ ಆಶ್ರಯ ಪಡೆದಿರುವ ವಾಸನ ಗ್ರಾಮದ ರೇಣುಕಾ ಮುದಿಯಪ್ಪನವರ ಅಸಹಾಯಕತೆಯಿಂದ ಹೇಳಿದ ಮಾತು.

‘ಪ್ರವಾಹ ಸಂದರ್ಭದಲ್ಲಿ ನಮ್ಮನ್ನು ಇನ್ನಿಲ್ಲದಂತೆ ಉಪಚರಿಸಿದ ಅಧಿಕಾರಿಗಳು, ನಂತರ ನಮ್ಮತ್ತ ಒಮ್ಮೆಯೂ ಕಣ್ಣೆತ್ತಿ ನೋಡಿಲ್ಲ. ಮನೆಹಾನಿ ಪರಿಹಾರ ವಿತರಣೆಯಲ್ಲೂ ತಾರತಮ್ಯ ಮಾಡಿದ್ದಾರೆ’ ಎಂದು ಅವರು ದೂರುತ್ತಾರೆ.

‘ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಟ್ಟ ಜಿಲ್ಲಾಡಳಿತ, ನಂತರ ಅಲ್ಲಿ ಸಮರ್ಪಕ ಮೂಲಸೌಕರ್ಯ ಒದಗಿಸಲಿಲ್ಲ. ಶೆಡ್‌ಗಳಿಗೆ ವಿದ್ಯುತ್‌ ಸಂಪರ್ಕ ಕೊಡಲಿಲ್ಲ. ಹೀಗಾಗಿ ರಾತ್ರಿ ವೇಳೆ ಚಿಮಣಿ ಎಣ್ಣಿ ಬುಡ್ಡಿ ಅಥವಾ ದಾನಿಗಳು ನೀಡಿದ ಸೌರ ಕಂದೀಲಿನ ಬೆಳಕಿನಲ್ಲೇ ಕಾಲ ಕಳೆಯಬೇಕಾಗಿದೆ’ ಎಂದು ಬಸವ್ವ ಮಾದರ ದೂರಿದರು.

ಪರಿಹಾರ ಕೇಂದ್ರಗಳು ಸ್ಥಗಿತಗೊಂಡಿರುವುದರಿಂದ, ತಾತ್ಕಾಲಿಕ ಶೆಡ್‌ನ ಮೂಲೆಯಲ್ಲೇ ಎರಡು ಕಲ್ಲುಗಳನ್ನು ಜೋಡಿಸಿ ಸಂತ್ರಸ್ತರು ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಮಳೆಯಾದಾಗ ಶೆಡ್‌ನೊಳಗೆ ನೀರು ನುಗ್ಗಿ ಕೆಸರುಗದ್ದೆಯಂತಾಗುತ್ತದೆ. ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ, ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ರಾತ್ರಿ ಅಧ್ಯಯನ ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ವಾಸನ ಗ್ರಾಮದ ಜನತಾ ಪ್ಲಾಟ್‌ನಲ್ಲಿ ಬೀದಿ ದೀಪದ ಬೆಳಕಿನಲ್ಲೇ ಸಂತ್ರಸ್ತರು ರಾತ್ರಿ ಕಳೆಯುತ್ತಿದ್ದಾರೆ. ಮಹಿಳೆಯರ ಸ್ಥಿತಿಯೂ ಚಿಂತಾಜನಕವಾಗಿದೆ. ಸ್ನಾನ, ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಿದೆ. ‘ಇರುವ ಒಂದು ಕೊಳವೆಬಾವಿಯಲ್ಲಿ ಉಪ್ಪು ನೀರು ಬರುತ್ತಿದೆ. ಹೀಗಾಗಿ ಒಂದು ಕಿ.ಮೀ ದೂರದಲ್ಲಿರುವ ಮೂಲ ಗ್ರಾಮಕ್ಕೆ ಹೋಗಿ ಕುಡಿಯಲು ನೀರು ತುಂಬಿಕೊಂಡು ಬರುತ್ತೇವೆ’ ಎಂದು ಸಂತ್ರಸ್ತೆ ನೀಲವ್ವ ಮಡಿವಾಳರ ಹೇಳಿದರು.

‘ಹಗಲು ವೇಳೆ ನಮ್ಮ ಹೊಲಕ್ಕೆ ಹೋಗಿ ದುಡಿಯುತ್ತೇವೆ. ರಾತ್ರಿ ತಂಗಲು ಶೆಡ್‌ಗೆ ಬರುತ್ತೇವೆ. ಆರಂಭಿಕ ಪರಿಹಾರವಾಗಿ ₹10 ಸಾವಿರ ಬಂದಿದೆ. ಅಧಿಕಾರಿಗಳು ಮನೆ ಹಾನಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪರಿಹಾರ ವಿತರಿಸಿದ್ದಾರೆ’ ಎಂದು ಕೊಣ್ಣೂರು ಗ್ರಾಮದ ಬಸವರಾಜ ತಳವಾರ ಹೇಳಿದರು.

ಅಧಿಕಾರಿಗಳಿಗೆ ಕೋರ್ಟ್‌ ತರಾಟೆ
ನೆರೆ ಪೀಡಿತ ಗ್ರಾಮಗಳ ಮಹಿಳೆಯರಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ರೋಣ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ತಾಲ್ಲೂಕು ನ್ಯಾಯಾಲಯ ಇತ್ತೀಚೆಗೆ ತರಾಟೆಗೆ ತಗೆದುಕೊಂಡಿದೆ.

‘ಪ್ರವಾಹ ಪೀಡಿತ ಗ್ರಾಮಗಳಲ್ಲಿ ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಸುರಕ್ಷತೆಗೆ ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಪೌಷ್ಟಿಕ ಆಹಾರ ವಿತರಿಸಿಲ್ಲ. ಋತುಮತಿಯಾದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನೂ ವಿತರಿಸಿಲ್ಲ’ ಎಂದು ಆರೋಪಿಸಿ ರೈತ ಸಂಘದ ಮಹಿಳಾ ಘಟಕದ ಕಾರ್ಯಕರ್ತೆಯರು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ನೀಡಿದ್ದರು.

‘ಅಧಿಕಾರಿಗಳನ್ನು ಕೋರ್ಟ್‌ಗೆ ಕರೆದು ವಿವರಣೆ ಪಡೆದ ತಾಲ್ಲೂಕು ನ್ಯಾಯಾಧೀಶೆ ವಿ. ನಾಗಮಣಿ ಅವರು, ‘ಈ ಕುರಿತು ಇನ್ನಷ್ಟು ದಾಖಲೆ ತರಿಸಿಕೊಂಡು ಪರಿಶೀಲಿಸುತ್ತೇನೆ. ಘಟನೆ ನಡೆದಿರುವುದು ಖಚಿತಗೊಂಡರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿ ಕಳುಹಿಸಿದರು.

ಕೋಣೆ ಒಂದು; ತರಗತಿ ಮೂರು
ರೋಣ ತಾಲ್ಲೂಕಿನ ಪ್ರವಾಹ ಪೀಡಿತ ಹೊಳೆ ಆಲೂರು, ಕುರುವಿನಕೊಪ್ಪ, ಅಮರಗೋಳ, ಹೊಳೆಮಣ್ಣೂರು, ಹೊಳೆಹಡಗಲಿ ಗ್ರಾಮಸ್ಥರನ್ನು ನವಗ್ರಾಮಗಳ ಆಸರೆ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಅವರ ಮಕ್ಕಳಿಗಾಗಿ ಇಲ್ಲಿಯೇ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಸದ್ಯ ಆಸರೆ ಮನೆಗಳ ಕೊಠಡಿಗಳಲ್ಲೇ ತರಗತಿಗಳು ನಡೆಯುತ್ತಿವೆ. ಒಂದು ಕೋಣೆಯಲ್ಲಿ ಮೂರರಿಂದ ನಾಲ್ಕು ತರಗತಿಗಳು ನಡೆಯುತ್ತಿವೆ. ಶಾಲೆಗಳಿಗಾಗಿ ತಾತ್ಕಾಲಿಕ ಶೆಡ್‌ ಇನ್ನೂ ನಿರ್ಮಾಣ ಆಗಿಲ್ಲ.

*
ನರಗುಂದ ತಾಲ್ಲೂಕಿನ 3,968 ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ತಲಾ ₹10 ಸಾವಿರ ನೀಡಲಾಗಿದೆ. ಮನೆ ಮತ್ತು ಬೆಳೆಹಾನಿ ಪರಿಹಾರ ಇನ್ನೂ ವಿತರಿಸಿಲ್ಲ.
-ಕೆ.ಬಿ. ಕೋರಿಶೆಟ್ಟರ, ತಹಶೀಲ್ದಾರ್‌, ನರಗುಂದ

ನರಗುಂದ ತಾಲ್ಲೂಕಿನ ವಾಸನ ಗ್ರಾಮದಲ್ಲಿ ತಾತ್ಕಾಲಿಕ ಶೆಡ್‌ಗಳ ಮುಂದೆ ಮಳೆ ನೀರು ನಿಂತು ಕೆಸರುಗದ್ದೆಯಂತಾಗಿದೆ.
ನರಗುಂದ ತಾಲ್ಲೂಕಿನ ವಾಸನ ಗ್ರಾಮದಲ್ಲಿ ತಾತ್ಕಾಲಿಕ ಶೆಡ್‌ಗಳ ಮುಂದೆ ಮಳೆ ನೀರು ನಿಂತು ಕೆಸರುಗದ್ದೆಯಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT