ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ರಿಟರ್ನ್ಸ್‌ ನಿಯಮ ಶೀಘ್ರವೇ ಸಡಿಲಿಕೆ ನಿರ್ಧಾರ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ:  ಸತತ ಆರು ತಿಂಗಳವರೆಗೆ ಉದ್ದಿಮೆ ಸಂಸ್ಥೆಯೊಂದು ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿರದಿದ್ದರೆ, ವರ್ಷಕ್ಕೆ ಎರಡು ಬಾರಿ ಮಾತ್ರ ಸರಕು ಮತ್ತು ಸೇವಾ ತೆರಿಗೆ ಲೆಕ್ಕಪತ್ರ ವಿವರ (ರಿಟರ್ನ್‌) ಸಲ್ಲಿಸುವ ಸೌಲಭ್ಯಕ್ಕೆ ಪಾತ್ರವಾಗಲಿದೆ.

ಹೊಸ ಸರಳೀಕೃತ ರಿಟರ್ನ್‌ ಸಲ್ಲಿಕೆಯ ನಿಯಮಗಳನ್ನು ಅಂತಿಮಗೊಳಿಸುತ್ತಿದ್ದಂತೆ ಈ ಪ್ರಯೋಜನ ಜಾರಿಗೆ ಬರಲಿದೆ. ಉದ್ದಿಮೆ ಸಂಸ್ಥೆಗಳು ಆರು ತಿಂಗಳ ಕಾಲ ಯಾವುದೇ ಮೊತ್ತವನ್ನು ತೆರಿಗೆ ರೂಪದಲ್ಲಿ ಪಾವತಿಸಿರದಿದ್ದರೆ ವರ್ಷಕ್ಕೆ ಎರಡು ಬಾರಿ ಮಾತ್ರ ರಿಟರ್ನ್‌ ಸಲ್ಲಿಸಲು ಅರ್ಹತೆ ಪಡೆಯಲಿವೆ. ಪ್ರತಿ ತಿಂಗಳೂ ರಿಟರ್ನ್‌ ಸಲ್ಲಿಸುವುದರಿಂದ ಇಂತಹ ವಹಿವಾಟುದಾರರು ವಿನಾಯ್ತಿ ಪಡೆಯಲಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್‌ ಸಲ್ಲಿಕೆ ಸರಳೀಕರಣಗೊಳಿಸಲು ಜಿಎಸ್‌ಟಿ ಮಂಡಳಿಯು ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಮಂಡಳಿಯ ಮುಂದಿನ ಸಭೆಯಲ್ಲಿ ರಿಟರ್ನ್‌ ಸಲ್ಲಿಸುವುದನ್ನು ಸರಳಗೊಳಿಸುವ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. 6 ತಿಂಗಳ ಕಾಲ ನಿರಂತರವಾಗಿ ಶೂನ್ಯ ತೆರಿಗೆ ಪಾವತಿಸಿದ ತೆರಿಗೆದಾರರ ಪ್ರಮಾಣ ಶೇ 40ರಷ್ಟಿದೆ. ಇವರೆಲ್ಲ ವರ್ಷದಲ್ಲಿ ಎರಡು ಬಾರಿ ರಿಟರ್ನ್‌ ಸಲ್ಲಿಸಲು ಅರ್ಹರಾಗಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

₹ 1.50 ಕೋಟಿಗಳವರೆಗೆ ವಾರ್ಷಿಕ ವಹಿವಾಟು ನಡೆಸುವ ಉದ್ಯಮಗಳು ವಹಿವಾಟಿನ ಎರಡನೇ ತಿಂಗಳ 10ರ ಒಳಗೆ ಮತ್ತು ಇತರರು 20ರ ಒಳಗೆ ರಿಟರ್ನ್‌ ಸಲ್ಲಿಸಬೇಕು. ಸಣ್ಣ ಮತ್ತು ದೊಡ್ಡ ತೆರಿಗೆದಾರರು ವರ್ಷಕ್ಕೆ 12 ಬಾರಿ ರಿಟರ್ನ್‌ ಸಲ್ಲಿಸಬೇಕು.

2017ರ ಜುಲೈ ತಿಂಗಳಿನಿಂದ ಜಾರಿಗೆ ಬಂದಿರುವ ಜಿಎಸ್‌ಟಿ ವ್ಯವಸ್ಥೆಯಡಿ, ವಹಿವಾಟುದಾರರು ತಿಂಗಳಿಗೆ ಮೂರು ರಿಟರ್ನ್ಸ್ ಮತ್ತು ಒಂದು ವಾರ್ಷಿಕ ರಿಟರ್ನ್‌  ಸಲ್ಲಿಸಬೇಕಾಗುತ್ತದೆ. ಇದರಿಂದ ವರ್ಷಕ್ಕೆ 37 ರಿಟರ್ನ್ಸ್‌ ಸಲ್ಲಿಸಬೇಕಾಗುತ್ತದೆ. ರಿಟರ್ನ್‌ ಸಲ್ಲಿಕೆಯ ಸಂಕೀರ್ಣ ಸ್ವರೂಪ ಮತ್ತು ಜಿಎಸ್‌ಟಿಎನ್‌ನಲ್ಲಿನ ತಾಂತ್ರಿಕ ದೋಷದ ಕಾರಣಕ್ಕೆ ವಹಿವಾಟುದಾರರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಕಾರಣಕ್ಕೆ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ಸಲಹೆ ನೀಡಲು ಜಿಎಸ್‌ಟಿ ಮಂಡಳಿಯು ಸಮಿತಿಯೊಂದನ್ನು ರಚಿಸಿದೆ.

‘ರಿಟರ್ನ್‌ಗಳ ಸಂಖ್ಯೆ ಕಡಿತ ಮತ್ತು ದಿನ ವಿಸ್ತರಣೆಯು ಬಹುತೇಕ ಸಮಸ್ಯೆಗಳನ್ನು ಬಗೆಹರಿಸಲಿದೆ’ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ ಪಾರ್ಟ್ನರ್‌ ರಜತ್‌ ಮೋಹನ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT