ಲಕ್ಷದ್ವೀಪದ ನಿವಾಸಿಗಳ ವಂಶವಾಹಿ ಮೂಲದ ಅಧ್ಯಯನ

ಶನಿವಾರ, ಮೇ 25, 2019
32 °C
ಮಂಗಳೂರು ವಿ.ವಿ, ಹೈದರಾಬಾದ್‌ ಸಿಸಿಎಂಬಿ ವಿಜ್ಞಾನಿಗಳ ಮಹತ್ವದ ಸಾಧನೆ

ಲಕ್ಷದ್ವೀಪದ ನಿವಾಸಿಗಳ ವಂಶವಾಹಿ ಮೂಲದ ಅಧ್ಯಯನ

Published:
Updated:
Prajavani

ಮುಡಿಪು: ಲಕ್ಷದ್ವೀಪದ ಹೆಚ್ಚಿನ ಮೂಲನಿವಾಸಿಗಳು ದಕ್ಷಿಣ ಏಷ್ಯಾದಿಂದ ವಲಸೆ ಬಂದಿರುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ಹೈದರಾಬಾದ್‌ನ ಅಣು ಜೀವ ವಿಜ್ಞಾನ ಸಂಶೋಧನಾ ಕೇಂದ್ರದ (ಸಿಸಿಎಂಬಿ) ಡಾ. ತಂಗರಾಜ್ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿ ವಿಜ್ಞಾನ ವಿಭಾಗದ ಸಹ ಪ್ರಧ್ಯಾಪಕ ಡಾ.ಮುಸ್ತಾಕ್ ನೇತೃತ್ವದ ತಂಡ, ಲಕ್ಷದ್ವೀಪದ ಜನರ ವಂಶವಾಹಿ ಹಾಗೂ ಮೂಲದ ಬಗ್ಗೆ ಅಧ್ಯಯನ ನಡೆಸಿ ವೈಜ್ಞಾನಿಕ ಮಹಾಪ್ರಬಂಧವನ್ನು ಇದೇ 6 ರಂದು ಮಂಡಿಸಿದೆ.

ಭಾರತದ ಪಶ್ಚಿಮ ಕರಾವಳಿ ಭಾಗದಿಂದ ಸುಮಾರು 200ರಿಂದ 440 ಕಿ.ಮೀ ದೂರದಲ್ಲಿರುವ ಲಕ್ಷದ್ವೀಪದ ಒಟ್ಟು ಜನಸಂಖ್ಯೆ 65 ಸಾವಿರ. ಪುರಾತನ ಕಾಲದಿಂದಲೇ ನಾವಿಕರಿಗೆ ಈ ದ್ವೀಪದ ಪರಿಚಯವಿದ್ದರೂ, ಇಂದಿಗೂ ಅಲ್ಲಿನ ಜನರ ಮೂಲ ಆವಾಸದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

‘ಅಧ್ಯಯನದ ಪ್ರಕಾರ ಪೂರ್ವಕಾಲದಲ್ಲಿ ಅಂಡಮಾನ್ ಹಾಗೂ ಆಸ್ಟ್ರೇಲಿಯಾ ದ್ವೀಪಗಳಿಗೆ ಭಾರತದ ಪಶ್ಚಿಮ ಕರಾವಳಿಯ ಮೂಲಕವೇ ಆಫ್ರಿಕಾದಿಂದ ಜನರ ವಲಸೆ ನಡೆದಿದೆ. ಇದರಲ್ಲಿ ಲಕ್ಷದ್ವೀಪದ ಪಾತ್ರವು ಮಹತ್ವದ್ದಾಗಿದ್ದು, ಇಲ್ಲಿನ ಜನತೆಯ ವಂಶವಾಹಿಯು ಅಂಡಮಾನ್ ಮತ್ತು ಆಸ್ಟ್ರೇಲಿಯನ್ ಮೂಲನಿವಾಸಿಗಳ ವಂಶವಾಹಿಗಳ ಜತೆ ಸಾಮ್ಯತೆ ಹೊಂದಿರುವ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗಿದೆ’ ಎಂದು ಸಂಶೋಧನ ತಂಡದ ಮುಖ್ಯಸ್ಥ, ಸಿಸಿಎಂಬಿ ಹಿರಿಯ ವಿಜ್ಞಾನಿ ಡಾ.ತಂಗರಾಜ್ ತಿಳಿಸಿದ್ದಾರೆ.

‘ಅಧ್ಯಯನದಲ್ಲಿ ಲಕ್ಷದ್ವೀಪದ ಎಂಟು ಪ್ರಮುಖ ದ್ವೀಪಗಳ 557 ಜನರ ಮೈಟೋಕಾಂಡ್ರಿಯಲ್ ಡಿಎನ್‌ಎ ಮಾದರಿ ಹಾಗೂ ವೈ-ಕ್ರೋಮೋಸೋಮ್ (ವರ್ಣತಂತು) ಮಾರ್ಕರ್ ಅಧ್ಯಯನ ನಡೆಸಿದೆವು’ ಎನ್ನುತ್ತಾರೆ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿ ವಿಜ್ಞಾನ ವಿಭಾಗದ ಸಹ ಪ್ರಧ್ಯಾಪಕ ಡಾ.ಎಂ.ಎಸ್.ಮುಸ್ತಾಕ್ ಹಾಗೂ ಬನರಾಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಗ್ಯಾನೇಶ್ ಚೌಬೆ.

**
ಲಕ್ಷದ್ವೀಪ ಜನರ ವಂಶವಾಹಿಯ ಬಗೆಗಿನ ಅಧ್ಯಯನ ಅಲ್ಲಿನ ಜನರ ಆರೋಗ್ಯ, ಜೀವನ ಕ್ರಮಗಳ ಕುರಿತ ಅಧ್ಯಯನಕ್ಕೆ ಮುನ್ನುಡಿಯಾಗಲಿದೆ.
-ಡಾ.ರಾಕೇಶ್ ಕೆ.ಮಿಶ್ರ, ಸಿಸಿಎಂಬಿ ನಿರ್ದೇಶಕ

**

ನಮ್ಮ ಪ್ರಾಥಮಿಕ ಅಧ್ಯಯನದ ಪ್ರಕಾರ ಲಕ್ಷದ್ವೀಪದ ಹೆಚ್ಚಿನ ಮೂಲನಿವಾಸಿಗಳು ದಕ್ಷಿಣ ಏಷ್ಯಾದಿಂದ ವಲಸೆ ಬಂದಿರುವ ಸಾಧ್ಯತೆ ಇದೆ
-ಡಾ.ತಂಗರಾಜ್ , ಸಿಸಿಎಂಬಿ ಹಿರಿಯ ವಿಜ್ಞಾನಿ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !