ಭಾನುವಾರ, ಜೂನ್ 20, 2021
28 °C
3 ನೇ ಶನಿವಾರ ಗ್ರಾಮ ಭೇಟಿ ಮತ್ತು ವಾಸ್ತವ್ಯ ಕಾರ್ಯಕ್ರಮ

ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ: ವಿನೂತನ ಕಾರ್ಯಕ್ರಮಕ್ಕೆ ಸರ್ಕಾರ ಮುಂದಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮಗಳ ಮಟ್ಟದಲ್ಲಿ ಆಡಳಿತದಲ್ಲಿ ಇನ್ನಷ್ಟು ಚುರುಕು ಮುಟ್ಟಿಸಲು ‘ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ’ ಎಂಬ ವಿನೂತನ ಕಾರ್ಯಕ್ರಮವನ್ನು ಸರ್ಕಾರ ಆರಂಭಿಸಲಿದೆ. 

ಪ್ರತಿ ತಿಂಗಳ ಮೂರನೇ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳೂ ಒಂದೊಂದು ಗ್ರಾಮವನ್ನು ಆಯ್ದುಕೊಂಡು ಅಲ್ಲಿಗೆ ಹೋಗಿ, ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕಾಗುತ್ತದೆ. ಹಳ್ಳಿ ವಾಸ್ತವ್ಯವನ್ನೂ ಮಾಡಬಹುದು ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ವಿಡಿಯೊ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲಾಧಿಕಾರಿಗಳ ಜತೆ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರೂ ಹಳ್ಳಿಗೆ ಹೋಗಬೇಕಾಗುತ್ತದೆ. ನಂತರದ ಹಂತದಲ್ಲಿ ಉಪವಿಭಾಗಾಧಿಕಾರಿಗಳು ತಿಂಗಳಲ್ಲಿ ಎರಡು ದಿನ, ತಹಶೀಲ್ದಾರರು ನಾಲ್ಕು ದಿನಗಳ ಕಾಲ ಹಳ್ಳಿಗಳಿಗೆ ಕಳುಹಿಸುವ ಚಿಂತನೆ ಇದೆ ಎಂದರು.

ಮುಖ್ಯವಾಗಿ, ಬಾಲ್ಯ ವಿವಾಹದ ಬಗ್ಗೆ ಅರಿವು, ಸ್ಮಶಾನಕ್ಕೆ ಜಾಗ ಮೀಸಲು, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು, ಪೌತಿ ಖಾತೆ, ಜಾತಿ ಪ್ರಮಾಣ ಪತ್ರ ಮತ್ತಿತರ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಶೇ 90 ರಷ್ಟು ಕೆಲಸಗಳನ್ನು ಮಾಡಲಾಗುವುದು. ಬೇರೆ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾದರೆ, ಆಯಾ ಇಲಾಖೆಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆ ಜನಸ್ನೇಹಿ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುವುದು.  ನಾನೂ ಯಾವುದಾದರೂ ಒಂದು ಜಿಲ್ಲೆಯ ಒಂದು ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.

ಜನಗಣತಿ: ಎಂಟನೇ ಜನ ಗಣತಿ ಮತ್ತು ಮನೆ ಗಣತಿಯನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದು ಎಂಟನೇ ಜನಗಣತಿಯಾಗಿದ್ದು, ಆ್ಯಪ್‌ ಮೂಲಕ ಗಣತಿ ಕಾರ್ಯ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಏಪ್ರಿಲ್ 15 ರಿಂದ ಮೇ 29 ರವರೆಗೆ ಮನೆಗಳ ಗಣತಿ ನಡೆಯಲಿದ್ದು, 2021ರ ಫೆಬ್ರುವರಿಯಲ್ಲಿ ಜನಗಣತಿ ನಡೆಯಲಿದೆ. ಆ್ಯಪ್‌ನಲ್ಲಿ ಸಂಗ್ರಹಿಸಿದ ಮಾಹಿತಿ ಸರ್ವರ್‌ಗೆ ರವಾನೆಯಾಗುತ್ತದೆ. ಇದು ಕಾಗದ ರಹಿತ ಗಣತಿಯಾಗಿದೆ ಎಂದು ಅಶೋಕ ತಿಳಿಸಿದರು.‌

3 ತಿಂಗಳ ಗಡುವು ನೀಡಿದ ಸಚಿವರು

ರಾಜ್ಯದ ಪ್ರವಾಹ ಪೀಡಿತ ಪ್ರದೇಶದಲ್ಲಿ ಈಗಾಗಲೇ ಆರಂಭಿಸಿರುವ ಮನೆ ನಿರ್ಮಾಣ ಕಾರ್ಯವನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆರ್‌.ಅಶೋಕ ಅವರು ನಿರ್ದೇಶನ ನೀಡಿದ್ದಾರೆ.

ವಿಡಿಯೊ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಲ್ಲೆಲ್ಲಿ ತಳಪಾಯಗಳನ್ನು ಹಾಕುತ್ತಿದ್ದಾರೋ ಅಲ್ಲಿ 15 ದಿನಗಳ ಒಳಗೆ ಶೇ 50 ರಷ್ಟು ಗುರಿಯನ್ನು ಮುಟ್ಟಬೇಕು. ಆಗ ಮಾತ್ರ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು. ಈಗಾಗಲೇ ತಲಾ ₹1 ಲಕ್ಷ ಬಿಡುಗಡೆ ಮಾಡಲಾಗಿದ್ದು, ಎರಡನೇ ಕಂತಿನ ಹಣವನ್ನು ತಳಪಾಯ ಹಾಕುವ ಕೆಲಸ ಪೂರ್ಣಗೊಳಿಸಿದ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಎ ಮತ್ತು ಬಿ ಕೆಟಗರಿಯ ಮನೆಗಳನ್ನು ಕೆಲವು ಪೂರ್ಣ ನೆಲಸಮ ಮಾಡಿ ಹೊಸದಾಗಿ ಕಟ್ಟಲು ಒಪ್ಪುತ್ತಿಲ್ಲ. ಇದ್ದ ಮನೆಯನ್ನು ಭಾಗಶಃ ರಿಪೇರಿ ಮಾಡುವವರಿಗೆ ₹3 ಲಕ್ಷ ಮತ್ತು, ಪೂರ್ಣ ಹೊಸದಾಗಿ ಕಟ್ಟುವವರಿಗೆ ₹5 ಲಕ್ಷ ನೀಡಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು