ಮಂಗಳವಾರ, ಮಾರ್ಚ್ 9, 2021
26 °C
* ತರಬೇತಿಗೆ ಬಾರದ ಕಾಳೆಯ ನಂಬಿಕಸ್ಥ * ತಪ್ಪಿದ ಗೌರಿ ಲಂಕೇಶ್ ಹತ್ಯೆ ಮುಹೂರ್ತ

ಮಿಸ್ಕಿನ್ ತಂದೆ ಸತ್ತಿದ್ದಕ್ಕೆ ‘ಮಿಷನ್’ ಮುಂದೋಯ್ತು!

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

ಬೆಂಗಳೂರು:‌ ‘ದಾಭೋಲ್ಕರ್ ಮತ್ತು ಕಲಬುರ್ಗಿ ಹತ್ಯೆ ನಡೆದದ್ದು ಆಗಸ್ಟ್‌ನಲ್ಲಿ. ಹೀಗಾಗಿ, ಆಗಸ್ಟ್‌ ತಿಂಗಳಿನಲ್ಲೇ ಗೌರಿ ಲಂಕೇಶ್ ಅವರನ್ನೂ ಮುಗಿಸುವುದು ನಮ್ಮ ಯೋಜನೆಯಾಗಿತ್ತು. ಅದಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಗೆಳೆಯ ಗಣೇಶ್ ಮಿಸ್ಕಿನ್‌ ತಂದೆ ತೀರಿಕೊಂಡರು. ಹೀಗಾಗಿ, ಕಾರ್ಯಾಚರಣೆಯನ್ನು ಬಾಯ್‌ಸಾಬ್ ಸೆಪ್ಟೆಂಬರ್‌ಗೆ ಮುಂದೂಡಿದ್ದರು...’

ಆರೋಪಿ ಅಮಿತ್ ಬದ್ದಿ ಎಸ್‌ಐಟಿ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ ಇದು. ‘ಬಾಯ್‌ಸಾಬ್ ಎಂದರೆ ಅಮೋಲ್ ಕಾಳೆ. 2013ರ ಆ.20ರಂದು ನರೇಂದ್ರ ದಾಭೋಲ್ಕರ್ ಹತ್ಯೆ ನಡೆದಿತ್ತು. ಇದೇ ಜಾಲದ ಸದಸ್ಯರು 2015ರ ಆ.30ರಂದು ಎಂ.ಎಂ. ಕಲಬುರ್ಗಿ ಅವರನ್ನು ಕೊಂದಿದ್ದರು. 2017ರ ಆ.20 ರಿಂದ ಆ.30ರ ನಡುವೆ ಗೌರಿ ಅವರನ್ನೂ ಕೊಲ್ಲುವ ಮೂಲಕ ಒಂದೇ ಗ್ಯಾಂಗ್ ಕೃತ್ಯ ಎಸಗುತ್ತಿದೆ ಎಂಬ ಮುದ್ರೆ ಒತ್ತುವುದು ಅವರ ಉದ್ದೇಶವಾಗಿತ್ತು’ ಎಂದು ಎಸ್‌ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕಾಲಮಿತಿಯೊಳಗೆ ಯೋಜನೆ ಕಾರ್ಯಗತಗೊಳಿಸಲೆಂದೇ ಮಿಸ್ಕಿನ್, ಅಮಿತ್, ಪರಶುರಾಮ ವಾಘ್ಮೋರೆ, ಭರತ್‌ ಕುರ್ನೆ ಹಾಗೂ ಇನ್ನೂ ಇಬ್ಬರು ಯುವಕರಿಗೆ ಮೇ ತಿಂಗಳಿನಿಂದಲೇ ಕಾಳೆ ಶಸ್ತ್ರಾಸ್ತ್ರ ತರಬೇತಿ ಕೊಡಿಸುತ್ತಿದ್ದ. ಆದರೆ, ಸದಸ್ಯರಿಗೆ ಇನ್ನೂ ಕೆಲಸಗಳನ್ನು ಹಂಚಿಕೆ ಮಾಡಿರಲಿಲ್ಲ. ಹೀಗಾಗಿ, ಬೈಕ್ ಯಾರು ಓಡಿಸಬೇಕು? ಗೌರಿ ಲಂಕೇಶ್‌ಗೆ ಯಾರು ಗುಂಡು ಹೊಡೆಯಬೇಕು ಎಂಬುದು ಯಾರಿಗೂ ಗೊತ್ತಿರಲಿಲ್ಲ.’

‘ಜೂನ್‌ 25ಕ್ಕೆ ಮೊದಲ ಹಂತದ ತರಬೇತಿ ಪೂರ್ಣಗೊಳಿಸಿದ್ದ ಮಿಸ್ಕಿನ್, ಜುಲೈ 1ರಿಂದ 20ರವರೆಗೆ ಎರಡನೇ ಹಂತದ ತರಬೇತಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಜೂನ್ 28ರಂದು ಆತನ ತಂದೆ ಅಸುನೀಗಿದರು. ಆ ನೋವಿನಲ್ಲಿ ಆತ, ‘ನಾನು ಒಂದು ತಿಂಗಳು ತರಬೇತಿಗೆ ಬರುವುದಿಲ್ಲ’ ಎಂದಿದ್ದ.

ಕಲಬುರ್ಗಿ ಹತ್ಯೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಮಿಸ್ಕಿನ್, ಜಾಲದ ಮುಖ್ಯಸ್ಥರ ನಂಬಿಕಸ್ಥ ವ್ಯಕ್ತಿಯಾಗಿದ್ದ. ಆತನನ್ನು ಬಿಟ್ಟು ಈ ಮಿಷನ್ ನಡೆಸುವುದು ಕಾಳೆಗೆ ಇಷ್ಟವಿರಲಿಲ್ಲ. ಹೀಗಾಗಿ, ‘15 ದಿನ ವಿಶ್ರಾಂತಿ ಪಡೆದು, ಆದಷ್ಟು ಬೇಗ ತರಬೇತಿಯಲ್ಲಿ ಭಾಗಿಯಾಗು’ ಎಂದು ಆತನಿಗೆ ಸೂಚಿಸಿದ್ದ. ಆದರೆ, ಇಡೀ ತಿಂಗಳು ಕಾಳೆ ಕೈಗೆ ಸಿಗದ ಮಿಸ್ಕಿನ್, ಆ.1ರಂದು ಮತ್ತೆ ಜಾಲವನ್ನು ಸೇರಿದ್ದ’ ಎಂದು ಮೂಲಗಳು ಮಾಹಿತಿ ನೀಡಿವೆ.

ಪಿಸ್ತೂಲ್ ತಂದ ಕಾಳೆ: ‘ರಾಜೇಶ್ ಬಂಗೇರನಿಂದ ಮಿಸ್ಕಿನ್‌ಗೆ 15 ದಿನ ಪ್ರತ್ಯೇಕ ತರಬೇತಿ ಕೊಡಿಸಿದ ಕಾಳೆ, ಆ.21ರಂದು ಪುಣೆಗೆ ತೆರಳಿ ಕಲಬುರ್ಗಿ ಹತ್ಯೆಗೆ ಬಳಸಿದ್ದ ಪಿಸ್ತೂಲ್‌ನೊಂದಿಗೆ ವಾಪಸಾಗಿದ್ದ. ಅದನ್ನು ವಾಘ್ಮೋರೆ ಕೈಗಿಟ್ಟು, ‘ಇದರಿಂದಲೇ ಗೌರಿಯನ್ನು ಹೊಡೆಯಬೇಕು. ಆ ಕೆಲಸ ಆಗಬೇಕಿರುವುದು ನಿನ್ನಿಂದ’ ಎಂದಿದ್ದ. ಆ.27ರಂದು ಕುರ್ನೆ ಶೆಡ್‌ನಲ್ಲೇ ಕೊನೆ ಸಭೆ ನಡೆಸಿ, ಬೆಳಗಾವಿಯಿಂದ ಎಲ್ಲರೂ ಚದುರಿದ್ದರು‘ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಗೌರಿ –ದಾಭೋಲ್ಕರ್‌ ಹತ್ಯೆ ಆರೋಪಿಗಳಿಗೆ ನಂಟು!

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್‌ ಮತ್ತು ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣಗಳ ಆರೋಪಿಗಳ ನಡುವೆ ಪರಸ್ಪರ ನಂಟು ಇರುವುದು ಖಚಿತವಾಗಿದೆ.

ದಾಭೋಲ್ಕರ್‌ ಹತ್ಯೆ ಪ್ರಕರಣದ ಆರೋಪಿ ಸಚಿನ್‌ ಅಂಧುರೆಯನ್ನು ಭಾನುವಾರ ಪುಣೆಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಬಿಐ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಸಿಬಿಐ ವಶದಲ್ಲಿದ್ದ ಆರೋಪಿ ಬಂಧನ ಅವಧಿಯನ್ನು ನ್ಯಾಯಾಲಯ ಆಗಸ್ಟ್‌ 30ರವರೆಗೆ ವಿಸ್ತರಿಸಿದೆ.

‘ಗೌರಿ ಹತ್ಯೆ ಪ್ರಕರಣದ ಆರೋಪಿಯೊಬ್ಬ 7.65 ಎಂ.ಎಂ ನಾಡ ಪಿಸ್ತೂಲ್‌ ಮತ್ತು ಮೂರು ಗುಂಡು ನೀಡಿದ್ದಾಗಿ ಅಂಧುರೆ ಬಾಯ್ಬಿಟ್ಟಿದ್ದಾನೆ’ ಎಂದು ಸಿಬಿಐ ಅಧಿಕಾರಿಗಳು  ತಿಳಿಸಿದ್ದಾರೆ.

ಮುಂಬೈ, ಪುಣೆ, ಸೊಲ್ಲಾಪುರ ಹಾಗೂ ಸತಾರಾದಲ್ಲಿ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸಿದ್ದ ಶರದ್‌ ಕಳಾಸ್ಕರ್ ಎಂಬಾತನನ್ನು ಮಹಾರಾಷ್ಟ್ರ ಎಟಿಎಸ್‌ ಬಂಧಿಸಿತ್ತು. ಆತ ಅಂಧುರೆಯ ಹೆಸರು ಬಾಯ್ಬಿಟ್ಟಿದ್ದ. ದಾಭೋಲ್ಕರ್‌ ಅವರತ್ತ ಗುಂಡುಹಾರಿಸಿದ ನಂತರ ಅಂಧುರೆ ಜತೆಗೆ ಬೈಕಿನಲ್ಲಿ ಪರಾರಿಯಾಗಿದ್ದಾಗಿ ಕಳಾಸ್ಕರ್‌ ಎಸ್‌ಐಟಿ ಎದುರು ಒಪ್ಪಿಕೊಂಡಿದ್ದ.

ಪಿಸ್ತೂಲ್ ಬಗ್ಗೆ ಬಾಯ್ಬಿಟ್ಟ ಸುಧನ್ವ

ಶುಕ್ರವಾರ ಮಹಾರಾಷ್ಟ್ರಕ್ಕೆ ತೆರಳಿದ್ದ ಎಸ್‌ಐಟಿ ಡಿಸಿಪಿ ಎಂ.ಎನ್. ಅನುಚೇತ್ ನೇತೃತ್ವದ ತಂಡ, ಎಟಿಎಸ್ ವಶದಲ್ಲಿರುವ ಸುಧನ್ವ ಗೊಂಧಾಳೇಕರ್‌ನನ್ನು ವಿಚಾರಣೆ ನಡೆಸಿದೆ. ‘ಗೌರಿ ಹತ್ಯೆ ನಡೆದ ಹತ್ತು ದಿನಗಳ ಬಳಿಕ ಕುಣಿಗಲ್‌ ಸುರೇಶ್‌ನ ಮನೆಗೆ ಹೋಗಿ ಪಿಸ್ತೂಲ್ ತೆಗೆದುಕೊಂಡು ಬಂದಿದ್ದು ನಾನೇ. ಎಟಿಎಸ್ ಅಧಿಕಾರಿಗಳು ಜಪ್ತಿ ಮಾಡಿರುವ 16 ಪಿಸ್ತೂಲ್‌ಗಳಲ್ಲಿ ಅದೂ ಇದೆ’ ಎಂದು ಆತ ಹೇಳಿದ್ದಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು