ಮಂಗಳವಾರ, ಫೆಬ್ರವರಿ 18, 2020
16 °C

ಮಂಗಳೂರು ಬಾಂಬ್ ಪ್ರಕರಣ: ಅಣಕು ಪ್ರದರ್ಶನ ಎಂದ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾದ ಬಾಂಬ್‌ ಸ್ಫೋಟಿಸುವಂತಹ ಯಾವುದೇ ಲಕ್ಷಣಗಳು ಇರಲಿಲ್ಲ. ಇದೊಂದು ಅಣಕು ಪ್ರದರ್ಶನದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಉಳ್ಳಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಬ್ಬಿಣದ ಬಾಕ್ಸ್‌ನಲ್ಲಿ ಪಟಾಕಿಗೆ ತುಂಬುವ ಪೌಡರ್‌ ತುಂಬಿದ್ದರು ಎಂದು ಪತ್ರಿಕೆಗಳೇ ವರದಿ ಮಾಡಿವೆ. ಸುತ್ತ ತುಂಡಾಗಿದ್ದ ವಾಯರ್‌ಗಳಿದ್ದವು. ಸೋಮವಾರದ ಕಾರ್ಯಾಚರಣೆಯು ಬಾಂಬ್‌ ನಿಷ್ಕ್ರೀಯಗೊಳಿಸಲು ದೊಡ್ಡ ಕಂಟೈನರ್‌ ತಂದು, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದಲ್ಲಿ ನಡೆಸುವ ಅಣಕು ಪ್ರದರ್ಶನದಂತಿತ್ತು’ ಎಂದರು.

‘ರಾಜ್ಯದಲ್ಲಿ ಇರುವುದು ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್‌ನ ಸರ್ಕಾರವಲ್ಲ. ಆರು ಕೋಟಿ ಜನರ ಸರ್ಕಾರ. ಜನರಿಗೆ ವಾಸ್ತವಾಂಶ ತಿಳಿಸಿ. ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

‘ಸಮಾಜ, ಧರ್ಮದ ಮಧ್ಯೆ ಅಶಾಂತಿ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ವಿಶ್ವಕ್ಕೆ ಸ್ಪರ್ಧೆ ಕೊಡುವಂತಹ ಮಂಗಳೂರು ನಗರವನ್ನು ಹಾಳು ಮಾಡಿ, ಪದೇ ಪದೇ ಬೆಂಕಿ ಇಡಬೇಡಿ ಎಂದ ಅವರು, ಜನತೆಯ ಮನಸ್ಸು ಒಗ್ಗೂಡಿಸಲು ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದು ತಿಳಿಸಿದರು.

ಕಮಿಷನರ್ ಡಾ.ಹರ್ಷ ಭೇಟಿ

ಈ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌. ಹರ್ಷ ಮಾತುಕತೆ ನಡೆಸಿದರು.

ಈ ಕುರಿತು ಸ್ಪಷ್ಟನೆ ನೀಡಿರುವ ಡಾ.ಹರ್ಷ, ‘ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಸ್ಥಳಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಲಾಗಿದೆ. ಸದ್ಯದ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದ್ದೇನೆ. ಕಾನೂನು, ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.

ಜವಾಬ್ದಾರಿ ನಿಲುವು ತಾಳಿ

ಕುಮಾರಸ್ವಾಮಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌. ಹರ್ಷ, ‘ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ಸಮಾಜದ ಎಲ್ಲ ಮುಖಂಡರು ಜವಾಬ್ದಾರಿಯುತ ನಿಲುವು ತಾಳಬೇಕು’ ಎಂದು ಟ್ವಿಟ್‌ ಮಾಡಿದ್ದಾರೆ.

ಬಜ್ಪೆ ವಿಮಾನ ನಿಲ್ದಾಣದಲ್ಲಿ ದೊರೆತ ಸ್ಫೋಟಕ ವಸ್ತುವನ್ನು ಸಿಡಿಸುವ ಮೂಲಕ ವಿಲೇವಾರಿ ಮಾಡಲಾಗಿದೆ. ಲಭ್ಯವಿರುವ ಮಾಹಿತಿಯನ್ನು ಆಧರಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು