ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಅಂಕಪಟ್ಟಿ ಸಲ್ಲಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ., ಪಿಎಚ್‌.ಡಿ.

ಅಬ್ದುಲ್‌ ಹಕೀಂ ವಿರುದ್ಧ ಪ್ರಕರಣ ದಾಖಲು
Last Updated 30 ಜೂನ್ 2019, 16:25 IST
ಅಕ್ಷರ ಗಾತ್ರ

ಹೊಸಪೇಟೆ: ಖೊಟ್ಟಿ ಅಂಕ ಪಟ್ಟಿ ಸಲ್ಲಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್‌.ಡಿ. ಪೂರ್ಣಗೊಳಿಸಿರುವ ಪತ್ರಕರ್ತ ಅಬ್ದುಲ್‌ ಹಕೀಂ ವಿರುದ್ಧ ತಾಲ್ಲೂಕಿನ ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯದ ಕುಲಸಚಿವ ಎ.ಸುಬ್ಬಣ್ಣ ರೈ ಅವರು ಜೂನ್28ರಂದು ನೀಡಿದ ದೂರಿನ ಮೇರೆಗೆ ಐಪಿಸಿಕಲಂ 464, 465, 468, 470, 474, 417, 420, 504, 506ರ (ದುರುದ್ದೇಶದಿಂದ ನಕಲಿ ದಾಖಲೆ ಸಲ್ಲಿಕೆ, ಶಾಂತಿಭಂಗ, ಬೆದರಿಕೆ ಹಾಕುವುದು) ಅಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಕೀಂ ಅವರು ಉತ್ತರ ಪ್ರದೇಶದ ಝಾನ್ಸಿ ಬುಂದೇಲ್‌ ಖಂಡ್‌ ವಿಶ್ವವಿದ್ಯಾಲಯದ್ದು ಎನ್ನಲಾದ ಖೊಟ್ಟಿ (ನಕಲಿ)ಪದವಿದಾಖಲೆಗಳನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, 2012–13ರಲ್ಲಿ ಎಂ.ಎ ಪತ್ರಿಕೋದ್ಯಮ (ದೂರಶಿಕ್ಷಣ) ಹಾಗೂ 2014–15ರಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪಿಎಚ್‌.ಡಿ. ಮುಗಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇದೇ ಖೊಟ್ಟಿ ದಾಖಲೆಗಳನ್ನು ಕೊಟ್ಟು ಎಂ.ಎ. ಪೂರ್ಣಗೊಳಿಸಿದ್ದರು.

ಹಕೀಂ ವಿರುದ್ಧ 2017ರ ಜನವರಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿ ಎಚ್‌.ಎಂ. ಸೋಮನಾಥ ಎಂಬುವರು ಕನ್ನಡ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಪಿಎಚ್‌.ಡಿ. ಸಂಬಂಧ ಹಕೀಂ ಅವರು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ವಿ.ಸಿ. ಸವಡಿಅವರಿಗೆ ಮತ್ತುಪ್ರಾಧ್ಯಾಪಕ ಎಂ. ಚಂದ್ರ ಪೂಜಾರಿ ಅವರಿಗೂ ಬೆದರಿಕೆ ಹಾಕಿದ್ದರು.

ಈ ಎಲ್ಲಬೆಳವಣಿಗೆಗಳ ನಂತರ 2017ರ ಜೂನ್‌ನಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರು ಕಂಪ್ಲಿ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್‌ಗೆಪತ್ರ ಬರೆದು, ಅಂಕಪಟ್ಟಿಗಳ ನೈಜತೆಯ ತನಿಖೆ ನಡೆಸುವಂತೆ ಕೋರಿದ್ದರು. ಬುಂದೇಲ್‌ ಖಂಡ್‌ ವಿಶ್ವವಿದ್ಯಾಲಯದ ಕುಲಸಚಿವರಿಗೂ ಪತ್ರ ಬರೆದು ಮಾಹಿತಿ ಕೇಳಿದ್ದರು. ‘ಅಬ್ದುಲ್‌ ಹಕೀಂ ಎಂಬುವರು ವಿ.ವಿ.ಯಲ್ಲಿ ಪ್ರವೇಶ ಪಡೆದಿಲ್ಲ. ಅವರ ಅಂಕಪಟ್ಟಿ ಖೊಟ್ಟಿ’ ಎಂದು ಬುಂದೇಲ್‌ ಖಂಡ್‌ ಕುಲಸಚಿವರು ತಿಳಿಸಿದ್ದರು.

ಈ ವಿಷಯದ ಕುರಿತು ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ, ಜೂ.28ರಂದು ಹಕೀಂ ವಿರುದ್ಧ ಠಾಣೆಗೆ ದೂರು ಕೊಡಲಾಯಿತು. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಎಂ.ಎ., ಪಿಎಚ್‌.ಡಿ. ಪದವಿಯನ್ನು ರದ್ದುಗೊಳಿಸಲಾಗಿದೆ.

‘ನಾನು ಬುಂದೇಲ್‌ ಖಂಡ್‌ ವಿಶ್ವವಿದ್ಯಾಲಯದ ಅಂಕಪಟ್ಟಿಗಳನ್ನೇ ಲಗತ್ತಿಸಿಲ್ಲ. ಹೀಗಿರುವಾಗ ಖೊಟ್ಟಿ ಅಂಕಪಟ್ಟಿ ಲಗತ್ತಿಸುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಅಬ್ದುಲ್‌ ಹಕೀಂ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನನ್ನದೇನೂ ತಪ್ಪಿಲ್ಲ: ಅಬ್ದುಲ್ ಹಕೀಂ

‘ನಾನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯನಾಗಿದ್ದಾಗ, ಅಲ್ಲಿನ ಸಿಬ್ಬಂದಿ ಎಚ್‌.ಎಂ. ಸೋಮನಾಥ ವಿರುದ್ಧ ಅಶಿಸ್ತಿನ ಕಾರಣಕ್ಕಾಗಿ ಕ್ರಮ ಜರುಗಿಸಲು ಒತ್ತಾಯಿಸಿದ್ದೆ. ಅದೊಂದೇವಿಷಯಕ್ಕಾಗಿ ಸೋಮನಾಥ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಇದೆಲ್ಲ ಆಗುತ್ತಿರುವುದು ಅವರಿಂದಲೇ’ ಎಂದು ಹೇಳಿದರು.

‘ನಾನು ಪ್ರವೇಶ ಪಡೆಯುವ ವೇಳೆ ಬೆಂಗಳೂರು ವಿಶ್ವವಿದ್ಯಾಲಯದ ಅಂಕಪಟ್ಟಿಗಳನ್ನು ಲಗತ್ತಿಸಿದ್ದೆ. ಆದರೆ, ಅವುಗಳನ್ನು ಮರೆಮಾಚಿ ಖೊಟ್ಟಿ ದಾಖಲೆಗಳನ್ನು ಹಚ್ಚಿದ್ದಾರೆ. ನಾನು ಕೊಟ್ಟಿರುವ ದಾಖಲೆಗಳು ಖೊಟ್ಟಿಯಲ್ಲ ಎಂದು ಬೆಂಗಳೂರಿನ ಮಡಿವಾಳ ಠಾಣೆ ಪೊಲೀಸರು ತನಿಖಾ ವರದಿ ಕೊಟ್ಟಿದ್ದಾರೆ. ಈ ಸಂಬಂಧ ಎಲ್ಲ ಅಗತ್ಯ ದಾಖಲೆಗಳನ್ನು ನಾನೇ ಖುದ್ದಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋಗಿ ಸಲ್ಲಿಸಲು ಸಿದ್ಧನಿದ್ದೇನೆ. ಈ ಕುರಿತು ಅಲ್ಲಿನವರ ಜತೆ ಮಾತು ಸಹ ಆಡಿದ್ದೇನೆ. ಆದರೆ, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಕೇವಲ ಸೋಮನಾಥ ಅವರ ಮಾತುಗಳನ್ನಷ್ಟೇ ಅವರು ಕೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT