ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬಾನುಲಿ ಕೇಂದ್ರ

ಗುರುವಾರ , ಜೂಲೈ 18, 2019
22 °C

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬಾನುಲಿ ಕೇಂದ್ರ

Published:
Updated:
Prajavani

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ‘ಚೆಲುವ ಕನ್ನಡ’ ಸಮುದಾಯ ಬಾನುಲಿ ಕೇಂದ್ರ ಆರಂಭಿಸಲು ತೀರ್ಮಾನಿಸಿದೆ.

₹25 ಲಕ್ಷ ವೆಚ್ಚದಲ್ಲಿ ಈ ಕೇಂದ್ರ ಆರಂಭಗೊಳ್ಳಲಿದ್ದು, ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಆಕಾಶವಾಣಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಎಂಜಿನಿಯರ್‌ ನರಸಿಂಹಮೂರ್ತಿ, ಸಿ.ಬಿ. ಬೆಳ್ಳಕ್ಕಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ವಿಶುಕುಮಾರ ಅವರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದ್ದು, ಅವರ ಮಾರ್ಗದರ್ಶನದಲ್ಲಿ ಕೇಂದ್ರಕ್ಕೆ ಸಂಬಂಧಿಸಿದ ಕೆಲಸ ಪ್ರಗತಿಯಲ್ಲಿದೆ.

ಈಗಾಗಲೇ ಟೊಪೊಗ್ರಫಿ ಸರ್ವೇ ಪೂರ್ಣಗೊಂಡಿದೆ. ಬಾನುಲಿ ಕೇಂದ್ರದ ಕಾರ್ಯವೈಖರಿ, ಅದರ ಸ್ವರೂಪದ ಕುರಿತ ವಿವರ ಸಿದ್ಧಪಡಿಸಲಾಗುತ್ತಿದೆ. ಬಳಿಕ ಆ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಅನುಮತಿ ಪಡೆಯಲು ತೀರ್ಮಾನಿಸಲಾಗಿದೆ. 

‘ಬಾನುಲಿ ಕೇಂದ್ರ ಆರಂಭಕ್ಕೆ ಸಂಬಂಧಿಸಿದಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಅನುಮತಿ ಸಿಕ್ಕ ಬಳಿಕ ಮೂರು ತಿಂಗಳ ಒಳಗೆ ಪ್ರಾರಂಭಿಸಲಾಗುವುದು. ಒಟ್ಟು ₹25 ಲಕ್ಷ ವೆಚ್ಚದಲ್ಲಿ ಕೇಂದ್ರ ಶುರುವಾಗಲಿದ್ದು, ವಿಶ್ವವಿದ್ಯಾಲಯದಿಂದ 20 ಕಿ.ಮೀ ಸುತ್ತಮುತ್ತಲಿನ ಹಳ್ಳಿಗಳವರು ಅದರ ಪ್ರಯೋಜನ ಪಡೆಯಬಹುದು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಆರಂಭಿಸುತ್ತಿರುವ ಬಾನುಲಿ ಕೇಂದ್ರ ಆಕಾಶವಾಣಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಜನ ಅದನ್ನು ಇಂಟರ್ನೆಟ್‌ನಲ್ಲಿ ಲೈವ್‌ ಆಗಿಯೂ ನೋಡಬಹುದು, ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಸಹ ಆಲಿಸಬಹುದು. ಸಂಪೂರ್ಣವಾಗಿ ಸ್ಥಳೀಯ ಪ್ರತಿಭೆಗಳಿಂದ ಕಾರ್ಯಕ್ರಮ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರು, ಜಾನಪದ ಕಲಾವಿದರು, ಕರ ಕುಶಲಕರ್ಮಿಗಳು, ಗಿಡಮೂಲಿಕೆ, ನಾಟಿ ವೈದ್ಯರನ್ನು ಗುರುತಿಸಿ, ಅವರಿಂದ ಕಾರ್ಯಕ್ರಮ ನಡೆಸಿಕೊಡಲಾಗುವುದು. ಅಷ್ಟೇ ಅಲ್ಲ, ಶಾಲಾ–ಕಾಲೇಜು ಆರಂಭವಾಗುವಾಗ ಮಕ್ಕಳನ್ನು ಎಂತಹ ಸಂಸ್ಥೆಗಳಿಗೆ ಸೇರಿಸಬಹುದು, ಯಾವ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಉತ್ತಮ, ಬಸ್‌ ಪಾಸ್‌, ಆದಾಯ ಪ್ರಮಾಣ ಪತ್ರ ಪಡೆಯಲು ಏನು ಮಾಡುವುದು, ಆಯಾ ಋತುಮಾನಗಳಲ್ಲಿ ಹರಡುವ ಕಾಯಿಲೆಗಳ ಕುರಿತು ತಜ್ಞ ವೈದ್ಯರಿಂದ ಮಾಹಿತಿ, ವಿಶ್ವವಿದ್ಯಾಲಯದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು, ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕೆಲಸ ಆಗಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !