ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಿಂದ ಹಂಪಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ

ಸತತ ನಾಲ್ಕು ವರ್ಷಗಳ ನಂತರ ಕುಸಿದ ಪ್ರವಾಸಿಗರ ಸಂಖ್ಯೆ
ಅಕ್ಷರ ಗಾತ್ರ

ಹೊಸಪೇಟೆ: ಬರದಿಂದ ಹಂಪಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದೆ.

2014–15ರಿಂದ 2017–18ರ ವರೆಗೆ ಸತತ ನಾಲ್ಕು ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಬಂದಿದೆ. ಆದರೆ, 2018–19ನೇ ಸಾಲಿನಲ್ಲಿ ಏಕಾಏಕಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಅದರಲ್ಲೂ ವಿದೇಶಿಯರ ನೆಚ್ಚಿನ ತಾಣವೆಂದೆ ಗುರುತಿಸಿಕೊಂಡಿರುವ ಹಂಪಿಗೆ ಹೊರದೇಶದ ಜನ ಕಡಿಮೆ ಸಂಖ್ಯೆಯಲ್ಲಿ ಭೇಟಿ ನೀಡಿರುವುದು ಅಂಕಿ ಅಂಶದಿಂದ ತಿಳಿದು ಬರುತ್ತದೆ.

ಈ ಹಿಂದಿನ ವರ್ಷಗಳ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಪ್ರತಿ ವರ್ಷ 35 ಸಾವಿರದಿಂದ 50 ಸಾವಿರ ಆಸುಪಾಸಿನಲ್ಲಿ ವಿದೇಶಿಯರು ಭೇಟಿ ನೀಡಿರುವುದು ಗೊತ್ತಾಗುತ್ತದೆ. ಆದರೆ, 2018–19ನೇ ಸಾಲಿನಲ್ಲಿ ಈ ಸಂಖ್ಯೆ 20 ಸಾವಿರ ಗಡಿ ಕೂಡ ದಾಟಿಲ್ಲ. 17,949 ವಿದೇಶಿಯರು ಹಂಪಿಯನ್ನು ಕಣ್ತುಂಬಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ.

ಅಷ್ಟೇ ಅಲ್ಲ, ಆ ವರ್ಷ ದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ಕುಸಿತ ಕಂಡು ಬಂದಿದೆ. 5,21,817 ಭಾರತೀಯರು ಹಂಪಿಗೆ ಭೇಟಿ ನೀಡಿದ್ದಾರೆ. ಹೋದ ವರ್ಷ 6,31,991 ಜನ ಭೇಟಿ ಕೊಟ್ಟಿದ್ದಾರೆ. ನಾಲ್ಕು ವರ್ಷಗಳಲ್ಲೇ ದಾಖಲೆ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗಿದ್ದಾರೆ. ನಾಲ್ಕು ವರ್ಷಗಳಿಂದ ಪ್ರವಾಸಿಗರ ಸಂಖ್ಯೆ ಏರುಮುಖದಲ್ಲಿತ್ತು. ಆದರೆ, ಐದನೇ ವರ್ಷ ಏಕಾಏಕಿ ಇಳಿಕೆಯಾಗಿದೆ.

ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಬರ ಇದೆ. 2018–19ನೇ ಸಾಲಿನಲ್ಲಿ ಬರದ ಭೀಕರತೆ ಮತ್ತಷ್ಟು ಹೆಚ್ಚಾಯಿತು. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಮಳೆಗಾಲದಲ್ಲೇ ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದವು. ತಾಪಮಾನ ಕೂಡ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿತ್ತು. ಈ ಎಲ್ಲ ಕಾರಣಗಳಿಂದ ಪ್ರವಾಸಿಗರ ಸಂಖ್ಯೆ ಕುಸಿಯಲು ಪ್ರಮುಖ ಕಾರಣವಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್‌.ಐ.) ಅಧಿಕಾರಿಗಳು ಕೂಡ ಈ ಮಾತನ್ನು ಒಪ್ಪುತ್ತಾರೆ. ‘ಬಳ್ಳಾರಿ ಜಿಲ್ಲೆಯೊಂದೆ ಅಲ್ಲ. ರಾಜ್ಯದ ಬಹುತೇಕ ಕಡೆಗಳಲ್ಲಿ ಬರ ಇತ್ತು. ಪರಿಸ್ಥಿತಿ ಹೀಗಿದ್ದಾಗ ಆರ್ಥಿಕ ಸ್ಥಿತಿ ಸರಿ ಇರುವುದಿಲ್ಲ. ಶೈಕ್ಷಣಿಕ ಪ್ರವಾಸ ಕೈಗೊಳ್ಳುವವರು, ದೂರದ ಊರುಗಳಿಂದ ಜನ ಹೆಚ್ಚಾಗಿ ಹಂಪಿಗೆ ಬರಲಿಲ್ಲ’ ಎಂದು ಎ.ಎಸ್‌.ಐ. ಹಂಪಿ ವೃತ್ತದ ಸಹಾಯಕ ಸರ್ವೇಕ್ಷಣ ಎಂಜಿನಿಯರ್‌ ಸೋಮ್ಲ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಲೆನಾಡಿನಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದಾಗಿ ತುಂಗಭದ್ರಾ ಜಲಾಶಯ ತುಂಬಿತ್ತು. ಹಂಪಿಗೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿಯಲ್ಲೂ ನೀರಿತ್ತು. ಅದನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ಹೊರ ಜಿಲ್ಲೆ, ಹೊರ ರಾಜ್ಯದವರು ಹೆಚ್ಚಾಗಿ ಬರಲಿಲ್ಲ’ ಎಂದು ಹೇಳಿದರು.

‘ವಿದೇಶಿಯರು ಹಂಪಿ ಸೇರಿದಂತೆ ಯಾವುದೇ ಪ್ರವಾಸಿ ತಾಣಕ್ಕೆ ಹೋಗಬೇಕಾದರೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ. ಪ್ರಮುಖವಾಗಿ ಅಲ್ಲಿನ ವಾತಾವರಣದ ಬಗ್ಗೆ ತಿಳಿದುಕೊಂಡೇ ಪ್ರವಾಸಕ್ಕೆ ಯೋಜನೆ ರೂಪಿಸುತ್ತಾರೆ. 2018–19ನೇ ಸಾಲಿನಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಪ್ರವಾಸಕ್ಕೆ ಸೂಕ್ತ ಕಾಲವಾಗಿರಲಿಲ್ಲ. ಹೀಗಾಗಿ ವಿದೇಶಿಯರು ಪ್ರವಾಸದಿಂದ ಹಿಂದೆ ಸರಿದಿರುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT