ಮಂಗಳವಾರ, ಆಗಸ್ಟ್ 3, 2021
23 °C
ಮೂರು ತಿಂಗಳಲ್ಲಿ ₹17,202 ಕೋಟಿ ನಷ್ಟ

ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಕಷ್ಟ l 3 ಲಕ್ಷ ಉದ್ಯೋಗಕ್ಕೆ ಕುತ್ತು

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳ ಅವಧಿಯಲ್ಲಿ ರಾಜ್ಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ₹17,202 ಕೋಟಿ ನಷ್ಟ ಉಂಟಾಗಿದ್ದು, ಇದನ್ನೇ ನೆಚ್ಚಿಕೊಂಡಿರುವ 3 ಲಕ್ಷ ಉದ್ಯೋಗಿಗಳ ಸ್ಥಿತಿ ಅನಿಶ್ಚಿತವಾಗಿದೆ.

ದೇವಸ್ಥಾನದ ಮುಂದೆ ಹೂ, ಕಾಯಿ ಮಾರುವವರಿಂದ ಹಿಡಿದು ಆತಿಥ್ಯ ವಲಯದ ಮಾಲೀಕರವರೆಗೆ ಎಲ್ಲರದೂ ಒಂದೇ ಸ್ಥಿತಿ. ಬಿಡಿಗಾಸು ಆದಾಯವಿಲ್ಲದೆ ಭವಿಷ್ಯ ಮಂಕಾಗಿದೆ. ಲಾಕ್‌ಡೌನ್‌ ಸಂಕಷ್ಟದಲ್ಲಿ ಹೂತು ಹೋಗಿರುವ ‘ಪ್ರವಾಸೋದ್ಯಮ ಬಂಡಿ’ಯ ಚಕ್ರವನ್ನು ಮೇಲಕ್ಕೆತ್ತಿ ಸರಾಗವಾಗಿ ಚಲಿಸುವಂತೆ ಮಾಡುವುದು ಸರ್ಕಾರಕ್ಕೆ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

‘ಪ್ರವಾಸೋದ್ಯಮ ಇಲಾಖೆ ನಷ್ಟದ ಅಂದಾಜು ಮಾಡಲು ಪ್ರಾಥಮಿಕ ಸ್ವರೂಪದ ಅಧ್ಯಯನ ನಡೆಸಿದೆ. ಅದರ ಪ್ರಕಾರ ಹೋಟೆಲ್‌, ಲಾಡ್ಜ್‌ಗಳನ್ನು ಒಳಗೊಂಡಂತೆ ಆತಿಥ್ಯ ವಲಯ ಅತಿ ಹೆಚ್ಚು ನಷ್ಟ ಅನುಭವಿಸಿದೆ.  ಟೂರ್‌‌ ಮತ್ತು ಟ್ರಾವೆಲ್ಸ್‌ ಕ್ಷೇತ್ರ ಮತ್ತು ಪ್ಯಾಕೇಜ್‌ ಟೂರ್‌ ನಿರ್ವಹಣೆ ಕ್ಷೇತ್ರಗಳೂ ಕುಸಿತ ಕಂಡಿವೆ’ ಎಂದು ಹೆಸರು ಹೇಳಲು ಬಯಸದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ಸೋಂಕು ತಗಲೀತು ಎಂಬ ಭೀತಿ ಬಿಟ್ಟು ಜನರು ಪ್ರವಾಸ ಹೊರಡದ ಹೊರತು ಪ್ರವಾಸೋದ್ಯಮ ಹಳಿಗೆ ಬರುವ ಲಕ್ಷಣ ಕಾಣುತ್ತಿಲ್ಲ’ ಎಂದು ಅವರು ಹೇಳಿದರು.

‘ಪ್ರವಾಸೋದ್ಯಮಕ್ಕೆ ನೇರವಾಗಿ ಹೊಂದಿಕೊಂಡಿರುವ ಆತಿಥ್ಯ ವಲಯದಿಂದ ಹಿಡಿದು ಎಲ್ಲ ಕ್ಷೇತ್ರಗಳಿಂದ ಸೇರಿ 3 ಲಕ್ಷ ಉದ್ಯೋಗಗಳು ಅಪಾಯದಂಚಿನಲ್ಲಿವೆ. ಅಂದರೆ, ಇವೆಲ್ಲ ಕ್ಷೇತ್ರಗಳು ಪುನರಾರಂಭಗೊಂಡರೆ ಮಾತ್ರ ಮತ್ತೆ ಉದ್ಯೋಗ ಸಿಗುತ್ತದೆ’ ಎಂದು ಅಧಿಕಾರಿ ಹೇಳಿದರು.

‘ಪ್ರವಾಸೋದ್ಯಮ ಕ್ಷೇತ್ರದ ಎಲ್ಲ ಪ್ರಮುಖರಿಗೆ ಪ್ರಶ್ನಾವಳಿಗಳನ್ನು ಕಳಿಸಿ ಸಮೀಕ್ಷೆ ನಡೆಸಿ ಅದರ ಅಂಕಿಸಂಖ್ಯೆಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದೇವೆ. ಖಾಸಗಿ ಕ್ಷೇತ್ರದವರೂ ಪ್ರತ್ಯೇಕ ಅಧ್ಯಯನ ನಡೆಸಿದ್ದಾರೆ’ ಎಂದರು.

ಭವಿಷ್ಯ ಅನಿಶ್ಚಿತ: ಸಿ.ಟಿ. ರವಿ
‘₹17,202 ಕೋಟಿ ಸರ್ಕಾರದ ತೆರಿಗೆ ನಷ್ಟ ಅಲ್ಲ. ಖಾಸಗಿ ಹೋಟೆಲ್‌, ಟ್ರಾವೆಲ್ಸ್‌, ಟ್ಯಾಕ್ಸಿ, ಅಮ್ಯೂಸ್‌ಮೆಂಟ್‌ ಪಾರ್ಕ್ ಇತ್ಯಾದಿಗಳಿಗೆ ಸಂಬಂಧಿಸಿದ್ದು. ಈಗ ಹೋಟೆಲ್‌ಗಳು ತೆರೆದಿದ್ದರೂ ಶೇ 10 ರಷ್ಟು ರೂಮ್‌ಗಳು ಕೂಡ ಭರ್ತಿಯಾಗುತ್ತಿಲ್ಲ. ಅಂದರೆ 100 ರೂಮ್‌ಗಳಿದ್ದರೆ 6 ರಿಂದ 7 ರೂಮ್‌ಗಳಲ್ಲಿ ಮಾತ್ರ ಜನ ವಾಸ್ತವ್ಯ ಹೂಡುತ್ತಿದ್ದಾರೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರು ಬರಲಾರಂಭಿಸಿದರೆ ಪರಿಸ್ಥಿತಿ ಬದಲಾಗುತ್ತದೆ. ಪುನಶ್ಚೇತನ ಪರಿಸ್ಥಿತಿಯನ್ನು ಅವಲಂಬಿಸಿದೆ. ಮೂರು ತಿಂಗಳೂ ಆಗಬಹುದು, ಇದೇ ರೀತಿ ಇನ್ನಷ್ಟು ತಿಂಗಳುಗಳು ಮುಂದುವರೆಯಲೂಬಹುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು