ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಕ್ಷೇತ್ರ ನೋಟ: ಜೆಡಿಎಸ್‌ಗೆ ‘ಮೈತ್ರಿ’ ಒಳ ಏಟಿನ ಆತಂಕ

ಪ್ರಜ್ವಲ್‌ ರೇವಣ್ಣ– ಎ.ಮಂಜು ನಡುವೆ ನೇರಾ ಹಣಾಹಣಿ
Last Updated 2 ಮೇ 2019, 15:21 IST
ಅಕ್ಷರ ಗಾತ್ರ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿದೆ. ಸತತ ಗೆಲುವು ಕಂಡಿದ್ದ ಜೆಡಿಎಸ್‌ಗೆ ಈ ಬಾರಿ ಅದು ಸುಲಭದ ತುತ್ತಲ್ಲ.

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ (ಮೈತ್ರಿ ಅಭ್ಯರ್ಥಿ) ಅವರನ್ನು ಅಖಾಡಕ್ಕೆ ಇಳಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ದೊಡ್ಡಗೌಡರ ವಿರುದ್ಧ ತೊಡೆತಟ್ಟಿದ್ದ ಎ.ಮಂಜು, ಬಿಜೆಪಿ ಹುರಿಯಾಳಾಗಿದ್ದಾರೆ.

ಜಿಲ್ಲೆಯಲ್ಲಿ ದಶಕಗಳಿಂದಲೂ ಕಾಂಗ್ರೆಸ್‌– ಜೆಡಿಎಸ್‌ ನಡುವೆ ಸೆಣಸಾಟ ನಡೆದುಕೊಂಡೇ ಬಂದಿದೆ. ಬದಲಾದ ಸಂದರ್ಭದಲ್ಲಿ ಜೆಡಿಎಸ್‌ ಜತೆ ಕೈ ಜೋಡಿಸುವ ಅನಿವಾರ್ಯತೆ ಕೈ ಪಡೆಗೆ ಎದುರಾಗಿದೆ. ಅಕ್ರಮ ಗಣಿಗಾರಿಕೆ, ತೆಂಗು, ಅಡಿಕೆ, ಕಾಫಿ ಬೆಳೆ ನಾಶ, ಕಾಡಾನೆ ಹಾವಳಿ ಮತ್ತಿತರ ಸಮಸ್ಯೆಗಳ ಸುಳಿಯಲ್ಲಿ ಜಿಲ್ಲೆ ನಲುಗಿದೆ. ಆದರೆ, ಇವು ಚುನಾವಣೆಯಲ್ಲಿ ಪ್ರಮುಖ ವಿಷಯಗಳೇ ಅಲ್ಲ. ಜಾತಿ ಪ್ರೀತಿ, ಕುಟುಂಬ ರಾಜಕಾರಣವನ್ನು ಮುನ್ನೆಲೆಗೆ ತಂದು ಮತ ಕೇಳಲಾಗುತ್ತಿದೆ. ಕುಟುಂಬ ರಾಜಕೀಯ ಆರೋಪದ ನಡುವೆಯೂ ಪ್ರಜ್ವಲ್ ರೇವಣ್ಣ, ದೇವೇಗೌಡರ ನಾಮಬಲದ ಮೇಲೆ ಮತ ಕೇಳುತ್ತಿದ್ದಾರೆ. ಜೆಡಿಎಸ್‌ ಕಾರ್ಯಕರ್ತರ ಪಡೆ, ಕ್ಷೇತ್ರದ ಮೇಲೆ ಹಿಡಿತ ಹೊಂದಿರುವುದು, ತಂದೆ ರೇವಣ್ಣ ಅವರ ಅಭಿವೃದ್ಧಿ ಕಾರ್ಯ, ಆರು ಕ್ಷೇತ್ರಗಳಲ್ಲಿ ಪಕ್ಷದ ಶಾಸಕರಿರುವುದು ಅವರಿಗೆ ಸಹಕಾರಿ ಆಗಬಹುದು.

ಗ್ರಾಮ ಪಂಚಾಯಿತಿಯಿಂದ‌ ವಿಧಾನಸೌಧದವರೆಗೆ ಚುನಾವಣೆಯಲ್ಲಿ‌ ಸ್ಪರ್ಧಿಸಿದ ಅನುಭವ ಇಲ್ಲ. ಹಿರಿಯ ನಾಯಕರು, ಕಾರ್ಯಕರ್ತರನ್ನು ಒರಟಾಗಿ ಮಾತನಾಡಿಸುತ್ತಾರೆ ಎನ್ನುವ ಆರೋಪಗಳಿವೆ. ಮಾಜಿ ಪ್ರಧಾನಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಮೊಮ್ಮಗನನ್ನು ಪಕ್ಷದೊಳಗೆ ನಾಯಕನ್ನಾಗಿ ಪೂರ್ಣಪ್ರಮಾಣದಲ್ಲಿ ಒಪ್ಪಿಕೊಂಡಿಲ್ಲ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಕಳೆದ ಬಾರಿಯ ಸೋಲಿನ ಅನುಕಂಪ. ಪ್ರಧಾನಿ ನರೇಂದ್ರ ಮೋದಿ ನಾಮಬಲ, ಇಬ್ಬರು ಪಕ್ಷದ ಶಾಸಕರು, ಬಿಜೆಪಿಯ ಸಾಂಪ್ರದಾಯಿಕ ಮತಗಳು ಕೈ ಹಿಡಿಯಲಿವೆ ಎಂಬುದು ಎ.ಮಂಜು ಲೆಕ್ಕಾಚಾರ. ಕಳೆದ ಲೋಕಸಭೆ ಚುನಾವಣೆಯಲ್ಲಿ 4.09 ಲಕ್ಷ ಮತ ಪಡೆದಿದ್ದು, ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದ್ದಾರೆ. ಪಕ್ಷಾಂತರಿ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

ಮತದಾನದ ದಿನ ಸಮೀಪಿಸುತ್ತಿದ್ದರೂ ಕಾಂಗ್ರೆಸ್– ಜೆಡಿಎಸ್‌ ದೋಸ್ತಿಯಲ್ಲಿ ಸ್ಥಳೀಯ ಕಾರ್ಯಕರ್ತರ ನಡುವೆ ಭಿನ್ನಮತ ಶಮನಗೊಂಡಿಲ್ಲ. ಮುಖ ಕಂಡರೂ ಆಗದ ಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ಮುಖಂಡರ ಮನೆಗೆ ಎಡತಾಕುತ್ತಿರುವ ಸಚಿವ ರೇವಣ್ಣ, ಮಗನ ಗೆಲುವಿಗಾಗಿ ಈಗಎಲ್ಲರನ್ನೂ ಆಲಂಗಿಸುತ್ತಿದ್ದಾರೆ.

ಮೇಲ್ಮಟ್ಟದಲ್ಲಿ ಭಿನ್ನಮತದ ಬೇಗುದಿ ಶಮನವಾದಂತೆ ಕಂಡುಬಂದರೂ, ತಳಮಟ್ಟದಲ್ಲಿಒಳಬೇಗುದಿ ಬೂದಿ‌ಮುಚ್ಚಿದ ಕೆಂಡದಂತಿದೆ. ಇದು ಕಾಂಗ್ರೆಸ್‌– ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಪದೇ ಪದೇ ಬಹಿರಂಗಗೊಳ್ಳುತ್ತಲೂ ಇದೆ. ಕಾಂಗ್ರೆಸ್‌ ಕಾರ್ಯಕರ್ತರು, ‘ಇದು ಅಪವಿತ್ರ ಮೈತ್ರಿ’ ಎಂದು ಪ್ರಚಾರದಲ್ಲಿ ಹೆಚ್ಚು ಕಾಣಿಸಿಕೊಳ್ಳದೇ ಇರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

ಒಕ್ಕಲಿಗರು ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲಿ ದಲಿತ, ಕುರುಬ, ಲಿಂಗಾಯತ ಸಮುದಾಯದ ಮತಗಳು ಫಲಿತಾಂಶ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳು ಜಾತ್ಯತೀತ ಸಿದ್ಧಾಂತಕ್ಕೆ ಕಟ್ಟು ಬಿದ್ದರೆ, ಮಂಜು ಹಾದಿ ಕಠಿಣವಾಗಲಿದೆ.

ನೋಟು ರದ್ದತಿ, ಜಿಎಸ್‌ಟಿಯಿಂದ ಕೇಂದ್ರ ಸರ್ಕಾರದ ಬಗ್ಗೆ ಇರುವ ಆಡಳಿತ ವಿರೋಧಿ ಅಲೆ, ರೈತರ ಸಾಲ ಮನ್ನಾ ಕೈ ಹಿಡಿಯುವ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ.

ಕಣದಲ್ಲಿ ಆರು ಅಭ್ಯರ್ಥಿಗಳಿದ್ದರೂ ಬಿಎಸ್‌ಪಿ ಅಭ್ಯರ್ಥಿ ವಿನೋದ್ ರಾಜ್‌ ಅವರನ್ನು ಕಡೆಗಣಿಸುವಂತಿಲ್ಲ. ದಲಿತ, ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಬಲವಾಗಿ ನಂಬಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಹೊಡೆತ ನೀಡಲೂ‌ಬಹುದು. ನೋಟಾ ಗಣನೀಯ ಸಂಖ್ಯೆಯಲ್ಲಿ ಚಲಾವಣೆಯಾಗುವ ಲಕ್ಷಣ ಕಾಣುತ್ತಿದೆ.

ಮೈತ್ರಿ ಧರ್ಮ ಪಾಲಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗೆ ಇದ್ದರೂ, ಪ್ರಜ್ವಲ್‌ ಪರ ನಿಲ್ಲುತ್ತದೆಯೇ ಎಂಬ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ.

ಭರ್ಜರಿ ಪ್ರಚಾರ: ಹೈ ವೋಲ್ಟೇಜ್‌ ಕ್ಷೇತ್ರ ಎಂದೇ ಬಿಂಬಿತವಾಗಿರುವ ಹಾಸನ ಲೋಕಸಭಾ ಕ್ಷೇತ್ರದತ್ತ ಇಡೀ ರಾಜ್ಯದ ದೃಷ್ಟಿ ನೆಟ್ಟಿದೆ. ಗೆಲುವಿಗಾಗಿ ಜಿದ್ದಾಜಿದ್ದಿ ನಡೆಸಿರುವ ಪಕ್ಷಗಳ ವರಿಷ್ಠರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಪ್ರಜ್ವಲ್‌ ಪರ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತಯಾಚಿಸಿದ್ದು, ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತಿತರರು ಪ್ರಚಾರ ನಡೆಸಿದ್ದಾರೆ.

***

ದೇವೇಗೌಡರ ಕುಟುಂಬ ರಾಜಕಾರಣ ಕೊನೆಗಾಣಿಸಬೇಕು. ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.

-ಎ.ಮಂಜು,ಬಿಜೆಪಿ ಅಭ್ಯರ್ಥಿ

ಎಂಟು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಜನರ ಕಷ್ಟ, ಸುಖ ಅರಿತಿದ್ದೇನೆ. ಜನರ ನಡುವೆ ಬೆಳೆದಿರುವ ನಾನು, ಜಿಲ್ಲೆಯ ಜನರ ಗೌರವ ಕಾಪಾಡುತ್ತೇನೆ.

-ಪ್ರಜ್ವಲ್‌ ರೇವಣ್ಣ, ಮೈತ್ರಿ ಕೂಟದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT