ಭಾನುವಾರ, ಸೆಪ್ಟೆಂಬರ್ 27, 2020
21 °C

ಪರೀಕ್ಷಾ ನಕಲು ತಡೆಯಲು ‘ಡಬ್ಬ ಐಡಿಯಾ’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಪರೀಕ್ಷೆಯಲ್ಲಿ ನಕಲು ಮಾಡಬಾರದೆಂದು ನಗರದ ಭಗತ್ ಪದವಿಪೂರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿಯು ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬವನ್ನು ಹಾಕಿ ಪರೀಕ್ಷೆ ಬರೆಸಿದೆ!

ಅ.16ರಂದು ಈ ಪ್ರಸಂಗ ಜರುಗಿದ್ದು, ಕಾಲೇಜಿನ ಸಿಬ್ಬಂದಿಯೇ ಆ ದೃಶ್ಯವನ್ನು ವಿಡಿಯೊ ಮಾಡಿದ್ದಾರೆ. ಇದೀಗ ಆ ದೃಶ್ಯ ಜಾಲತಾಣಗಳಲ್ಲಿ ಹರಿದಾಡುತಿದ್ದು, ಆಡಳಿತ ಮಂಡಳಿಯ ಇಂತಹ ಆಲೋಚನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಸಿ.ಪೀರಜಾದೆ, ‘ಆ ದಿನ ರಸಾಯನವಿಜ್ಞಾನ ಪರೀಕ್ಷೆ ನಡೆಯುತ್ತಿದ್ದಾಗ ವಿದ್ಯಾರ್ಥಿಗಳ ಮುಖಕ್ಕೆ ಡಬ್ಬ ಹಾಕಿಸಿದ್ದರು‌. ಈ ವಿಚಾರ ಅದೇ ದಿನ ಮಧ್ಯಾಹ್ನ 12 ಗಂಟೆ ಸುಮಾರಿಗೆ ನನ್ನ ಗಮನಕ್ಕೆ ಬಂತು. ಕೂಡಲೇ ಕಾಲೇಜಿಗೆ ತೆರಳಿ ಆಡಳಿತ ಮಂಡಳಿ ವರ್ತನೆಯನ್ನು ಪ್ರಶ್ನಿಸಿದೆ. ನೋಟಿಸ್ ಸಹ ಜಾರಿ ಮಾಡಿದೆ’ ಎಂದರು.

‘ಪರೀಕ್ಷೆಯಲ್ಲಿ ನಕಲು ತಡೆಯಲು ಬಿಹಾರದ ಕಾಲೇಜೊಂದರಲ್ಲಿ ಇದೇ ಕ್ರಮ ಅನುಸರಿಸಿದ್ದರು. ಅದಕ್ಕೆ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ಕಾರಣಕ್ಕೆ ಆ ವ್ಯವಸ್ಥೆಯನ್ನು ನಾವೂ ಅಳವಡಿಸಿಕೊಳ್ಳಲು ಮುಂದಾಗಿದ್ದೆವು’ ಎಂದು ಕಾಲೇಜು ಆಡಳಿತ ಮಂಡಳಿ ಸದಸ್ಯ ಎಂ.ಬಿ.ಸತೀಶ್ ಹೇಳಿದರು.

‘ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ಈ ಕುರಿತು ವಿದ್ಯಾರ್ಥಿಗಳಿಗೂ ಮುಂಚೆಯೇ ತಿಳಿಸಿದ್ದೆವು. ಆದರೆ, ಅದಕ್ಕೆ ಆಕ್ಷೇಪ ವ್ಯಕ್ತವಾದ ಬಳಿಕ ಸಾಮಾನ್ಯ ರೀತಿಯಲ್ಲೇ ಪರೀಕ್ಷೆ ನಡೆಸಲಾಯಿತು’ ಎಂದರು.

ಕಾಲೇಜು ಬಂದ್‌ಗೆ ಕ್ರಮ

‘ಮಾದರಿ ವ್ಯವಸ್ಥೆ ಮಾಡುತ್ತೇವೆ ಎಂದು ಹಾವೇರಿಯ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಿದ್ದೀರಿ. ಇದು ಬಿಹಾರ ಅಲ್ಲ, ಕರ್ನಾಟಕ’ ಎಂದು ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಸಿ.ಪೀರಜಾದೆ, ‘ಈ ಕಾಲೇಜನ್ನು ಬಂದ್ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.