ಶನಿವಾರ, ಫೆಬ್ರವರಿ 29, 2020
19 °C

ಲಿಂಗಾಯತರೇ ಎಚ್ಚರಗೊಳ್ಳಿ, ಯಡಿಯೂರಪ್ಪಗೆ ಬಿಜೆಪಿ ಅನ್ಯಾಯ ಮಾಡಲಿದೆ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲಿಂಗಾಯತ ಸಮಾಜದವರು ನನ್ನನ್ನು ಕೈಬಿಡುತ್ತೀರಾ ಎಂದು ಕೇಳುತ್ತೀರಲ್ಲಾ ಯಡಿಯೂರಪ್ಪನವರೇ, ಹಳ್ಳಿ ಹಳ್ಳಿಗೆ ಹೋಗಿ ಕೇಳಿ, ನಿಮ್ಮ ಬಗ್ಗೆ ಏನು ಹೇಳುತ್ತಾರೆ ಕೇಳಿನೋಡಿ’ ಎಂದು ಹೇಳಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಯಡಿಯೂರಪ್ಪನವರಿಗೂ ಬಿಜೆಪಿ ಕೈಕೊಡಲಿದೆ ಎಂದು ಲಿಂಗಾಯತರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಪಕ್ಷದ ರಾಜ್ಯ ಸಮಾವೇಶದಲ್ಲಿ ಮಾತನಾಡಿದರು.

‘ರಾಜಭವನಕ್ಕೆ ಹೋದರೆ ಮುಖ್ಯಮಂತ್ರಿಗೆ ಪ್ರವೇಶ ಇಲ್ಲ. ಹುಬ್ಬಳ್ಳಿಗೆ ಹೋದಾಗ ಬಿಎಸ್‌ವೈ ಅವರಿಗೆ ಗುಡ್‌ ಬೈ ಹೇಳಿ, ದಾವೋಸ್‌ಗೆ ಹೋಗಿ ಅಂತ ಕಳುಹಿಸಿದರು. ಮುಖ್ಯಮಂತ್ರಿಯಾದವನಿಗೆ ಈ ಪರಿಸ್ಥಿತಿ ಯಾಕೆ ಬೇಕು, ಮಾಧ್ಯಮದವರ ಪಾಲಿಗೆ ಮಾತ್ರ ಅವರು ರಾಜಾಹುಲಿ, ಲಿಂಗಾಯತ ನಾಯಕನೊಬ್ಬನ ವಿಚಾರದಲ್ಲಿ ಆ  ಪಕ್ಷದ ಧೋರಣೆ ಇದರಿಂದ ಗೊತ್ತಾಗುತ್ತದೆ’ ಎಂದರು.

‘ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ರಾಜ್ಯಕ್ಕೆ ಬಂದಾಗ ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರೈತರ ಸಾಲ ವಾಪಸ್ ತೆಗೆದುಕೊಳ್ಳಿ ಎಂಬ ಆದೇಶವನ್ನೂ ಹೊರಡಿಸುತ್ತೀರಿ. ಈ ರೀತಿ ಮಾಡಿದವರನ್ನು ಬಸವಣ್ಣ ಮೆಚ್ಚುತ್ತಾನೆಯೇ, ರೈತರಿಗೆ ಅನ್ಯಾಯ ಮಾಡುವ ವ್ಯಕ್ತಿಗಳನ್ನು, ಪಕ್ಷಗಳನ್ನು ಜಾತಿ ಹೆಸರು ಹೇಳಿ ಇನ್ನೆಷ್ಟು ದಿನ ಬೆಂಬಲಿಸುತ್ತೀರಿ?’ ಎಂದು ಮಾರ್ಮಿಕವಾಗಿ ನುಡಿದರು.

‘ಜೆಡಿಎಸ್‌ ಕಾರ್ಯಕರ್ತರು ಇದೆಲ್ಲವನ್ನೂ ಜನರಿಗೆ ತಿಳಿಸಬೇಕು, ನಿಮ್ಮ ಜತೆ ಹಳ್ಳಿ ಹಳ್ಳಿಗೆ ಬರುವುದಕ್ಕೆ ನಾನು ಸಿದ್ಧ ಇದ್ದೇನೆ’ ಎಂದು ಅವರು ಹೇಳಿದರು.

‘ನಾವು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಅಧಿಕಾರಕ್ಕಾಗಿ‌ ಯಾರ ಕಾಲೂ ಕಟ್ಟುವುದಿಲ್ಲ. ನಾನು ಅಧಿಕಾರದಲ್ಲಿ ಇರಬೇಕು ಎಂಬ ಮನಸ್ಸು ಮಾಡಿದ್ದರೆ ಖಜಾನೆಯಿಂದ ₹200ಕೋಟಿಯಿಂದ ₹300 ಕೋಟಿ ಲೂಟಿ ಮಾಡಿ 10 ಜನ ಶಾಸಕರನ್ನು ಖರೀದಿ ಮಾಡಬಹುದಿತ್ತು. ಆದರೆ ಆ ಕೆಲಸ ನಾನು ಮಾಡಿಲ್ಲ’ ಎಂದರು.

ನೆಹರೂ ನೀತಿ ತಿದ್ದುತ್ತಾರೆಯೇ: ‘ನೆಹರೂ ನಿಧನರಾಗುವಾಗ ಅಮಿತ್‌ ಶಾ ಇನ್ನೂ ಹುಟ್ಟಿರಲಿಲ್ಲ, ಅವರು ನೋಡುವುದಕ್ಕೆ ದಷ್ಟಪುಷ್ಟ ಇರುವುದರಿಂದ ಸ್ವಲ್ಪವಯಸ್ಸಾದಂತೆ ಕಾಣುತ್ತಾರೆ ಅಷ್ಟೇ, ನೆಹರೂ ಒಬ್ಬರೇ ಯಾವ ನಿರ್ಧಾರವನ್ನೂ ಕೈಗೊಂಡಿರಲಿಲ್ಲ, ಮಹಾತ್ಮ ಗಾಂಧಿ ಸಹಿತ ಹಲವರೊಂದಿಗೆ ಸಮಾಲೋಚನೆ ನಡೆಸಿಯೇ ಕೆಲವು ಪ್ರಮುಖ ನಿರ್ಧಾರ ಕೈಗೊಂಡಿದ್ದರು, ಅದನ್ನು ಇವರು ತಿದ್ದುತ್ತಾರೆಯೇ’ ಎಂದರು.

ಕನಕಪುರಕ್ಕೂ, ಪ್ರಭಾಕರ ಭಟ್ಟರಿಗೂ ಏನು ಸಂಬಂಧ?
‘ಸಮಾಜ ಒಡೆಯಬೇಕು, ರಕ್ತ ಹರಿಯಬೇಕು ಎಂಬುದು ಬಿಜೆಪಿ ಉದ್ದೇಶ, ಮಂಗಳೂರಿಗೂ, ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಕೇಳುತ್ತೀರಿ, ಹಾಗಿದ್ದರೆ ಕನಕಪುರಕ್ಕೂ ಪ್ರಭಾಕರ ಭಟ್ಟರಿಗೂ ಏನು ಸಂಬಂಧ?’ ಎಂದು ಕುಮಾರಸ್ವಾಮಿ ಚುಚ್ಚಿದರು.

‘ಮುಸ್ಲಿಮರು 2ನೇ ದರ್ಜೆ ನಾಗರಿಕರು’
‘ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಪರಿಗಣಿಸಲಾಗುತ್ತಿದೆ. ಇದನ್ನು ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಕಾಶ್ಮೀರದಲ್ಲಿ ಮುಖಂಡರನ್ನು ಆರು ತಿಂಗಳಿಂದ ಗೃಹಬಂಧನದಲ್ಲಿ ಇಟ್ಟಿದ್ದಾರೆ. ಕೇಂದ್ರ ಸರ್ಕಾರದ ಅತ್ಯಂತ ಕೆಟ್ಟ ನಿರ್ಣಯ ಇದು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಮೂರು ನಿರ್ಣಯಗಳು
ಪೌರತ್ವ (ತಿದ್ದುಪಡಿ) ಕಾಯ್ದೆ ಹಿಂಪಡೆಯಬೇಕು, ನೆರೆ ಪರಿಹಾರ ಕಾರ್ಯ ಅಸಮರ್ಪಕವಾಗಿದ್ದು, ತಕ್ಷಣ ₹5 ಸಾವಿರ ಕೋಟಿ ಬಿಡುಗಡೆ ಮಾಡಬೇಕು, ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದು, ಇದರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು ಹಾಗೂ ಈ ಮೂರೂ ವಿಷಯಗಳ ಬಗ್ಗೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಯಿತು.

*
ಈ ಹಕ್ಕಬುಕ್ಕರು ಸಿಎಎ ಮೂಲಕ ಕೇವಲ ಮುಸ್ಲಿಮರನ್ನು ಗುರಿಯಾಗಿ ಮಾಡಿಲ್ಲ, ದಲಿತರು, ಶೂದ್ರರೆಂದು ದೂರ ಇಟ್ಟು ಹಿಂದೂಗಳಿಗೂ ಅನ್ಯಾಯ ಮಾಡುತ್ತಿದ್ದಾರೆ.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು