ಶನಿವಾರ, ಏಪ್ರಿಲ್ 4, 2020
19 °C

‌ಒಕ್ಕಲಿಗರ ಸಂಘಕ್ಕೆ ನಾಚಿಕೆಯಾಗಬೇಕು: ಎಚ್.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಮೂರು, ಆರು ತಿಂಗಳಿಗೊಮ್ಮೆ ಅಧ್ಯಕ್ಷರ ಚುನಾವಣೆ ನಡೆಸುವ ರಾಜ್ಯ ಒಕ್ಕಲಿಗರ ಸಂಘಕ್ಕೆ ನಾಚಿಕೆಯಾಗಬೇಕು. ಕೆಎಲ್‌ಇ ಸೇರಿದಂತೆ ಇತರೆ ಲಿಂಗಾಯತ ಸಂಸ್ಥೆಗಳು ಹೇಗೆ ನಡೆಯುತ್ತಿವೆ ಎಂಬುದನ್ನು ನೋಡಿ ಕಲಿಯಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಕಿವಿಮಾತು ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಅಶೋಕ್‌ ಆನಂದ ಅವರನ್ನು ಸರ್ಕಾರ ಬದಲಾವಣೆ ಮಾಡಿ, ಶಂಕರಲಿಂಗೇಗೌಡ ಅವರನ್ನು ನೇಮಿಸಿದೆ. ಶಂಕರಲಿಂಗೇಗೌಡರ ನೇಮಕಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ದಕ್ಷ ಅಧಿಕಾರಿಯಾಗಿದ್ದ ಅಶೋಕ್‌ ಅವರು ಸಂಸ್ಥೆಗೆ ಮರು ಜೀವ ನೀಡಿದ್ದರು. ಆದರೆ, ಅವರ ವಿರುದ್ಧ ಯಾರು ಆರೋಪ ಮಾಡಿದ್ದಾರೆ ಎಂಬುದನ್ನು ಸರ್ಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

‘ನನ್ನ ಅಧಿಕಾರವಧಿಯಲ್ಲೇ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂಬ ಸಲಹೆ ಬಂತು. ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಧ್ಯ ಪ್ರವೇಶದಿಂದ ಆ ಪ್ರಸ್ತಾವ ಕೈ ಬಿಡಲಾಯಿತು. ಸಂಘದಲ್ಲಿ ಏನೇನು ನಡೆದಿದೆ ಎಂಬುದು ಗೊತ್ತು. ಒಂದು ವಿಧಾನಸಭಾ ಕ್ಷೇತ್ರದ ಚುನಾವಣೆಗಿಂತ ನಿರ್ದೇಶಕರ ಚುನಾವಣೆಗೆ ಹಣ ಖರ್ಚು ಮಾಡುತ್ತಾರೆ. ಯಾರಿಗೂ ಸಂಘವನ್ನು ಬಲ ಪಡಿಸುವ ಇಚ್ಛಾಶಕ್ತಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮೊದಲ ಬಾರಿಗೆ ಬೆಂಗಳೂರಿನಿಂದ ಹಾಸನಕ್ಕೆ ಪ್ಯಾಸೆಂಜರ್‌ ರೈಲಿನಲ್ಲಿ ಬಂದ ದೇವೇಗೌಡರನ್ನು ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.

ಇದೇ ವೇಳೆ ಮಾತನಾಡಿದ ಗೌಡರು, ‘ಎತ್ತಿನಹೊಳೆ ಯೋಜನೆಯಿಂದ ಯಾವುದೇ ಭಾಗಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಮೊದಲು ಕೋಲಾರಕ್ಕೆ ಕುಡಿಯುವ ನೀರು ಕೊಡಬೇಕು. ಈ ಯೋಜನೆಯನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಈ ವಿಷಯದಲ್ಲಿ ಸುಮ್ಮನೆ ಕೂರುವುದಿಲ್ಲ, ಹೋರಾಟ ಮಾಡುತ್ತೇನೆ’ ಎಂದರು.

ಶಾಸಕ ಜಿ.ಟಿ.ದೇವೇಗೌಡ ಪಕ್ಷ ಬಿಟ್ಟು ಹೋದರು ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತೆ ಪಕ್ಷ ಕಟ್ಟುವುದು ಹೇಗೆ ಎಂಬುದು ಗೊತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು