ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ವಾಸ್ತವ್ಯ’ಕ್ಕೆ ಕನಿಷ್ಠ ಖರ್ಚು: ಕುಮಾರಸ್ವಾಮಿ

ಚಂಡರಕಿ
Last Updated 24 ಜೂನ್ 2019, 15:59 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮ ವಾಸ್ತವ್ಯಕ್ಕೆ ಹಾಸಿಗೆ, ದಿಂಬು ಬಿಟ್ಟು ಬೇರೆ ಯಾವುದಕ್ಕೂ ಖರ್ಚು ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

‘ಪ್ರತಿ ಗ್ರಾಮ ವಾಸ್ತವ್ಯಕ್ಕೆ ₹ 1 ಕೋಟಿ ಖರ್ಚು ಮಾಡಲಾಗುತ್ತಿದೆ ಎಂಬುದಾಗಿ ಬಿ.ಎಸ್‌.ಯಡಿಯೂರಪ್ಪ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂಬ ಕಾರಣಕ್ಕಾಗಿ ಗ್ರಾಮದ ಸುತ್ತಮುತ್ತ ಅಥವಾ ಆಯಾ ಜಿಲ್ಲೆಯಲ್ಲಿ ಸರ್ಕಾರದ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಮ್ಮಿಕೊಳ್ಳುತ್ತಾರೆ. ಅದಕ್ಕಾಗಿ ಖರ್ಚು ಮಾಡಲಾಗಿರುತ್ತದೆ. ಅಲ್ಲಿ ಮಾಡುವ ಖರ್ಚು ಗ್ರಾಮವಾಸ್ತವ್ಯದಲ್ಲ’ ಎಂದೂ ಹೇಳಿದ್ದಾರೆ.

‘ಈ ಹಿಂದೆ ಮಾಡಿದ ಗ್ರಾಮ ವಾಸ್ತವ್ಯವಾಗಲಿ, ಈಗ ಮಾಡುತ್ತಿರುವ ಗ್ರಾಮವಾಸ್ತವ್ಯದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು, ಆಡಂಬರ ಆಗಬಾರದು ಎಂಬ ಕಾರಣಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಿಲ್ಲ’ ಎಂದೂ ಕುಮಾರಸ್ವಾಮಿ ತಿಳಿಸಿದ್ದಾರೆ.

‘ಯಡಿಯೂರಪ್ಪ ಏಕೆ ಅಭಿವೃದ್ಧಿ ಮುಂದುವರಿಸಲಿಲ್ಲ?’

'ಗ್ರಾಮ ವಾಸ್ತವ್ಯದ ಬಳಿಕ ನಾನು ಆರಂಭಿಸಿದ್ದ ಅಭಿವೃದ್ಧಿ ಯೋಜನೆಗಳನ್ನು ಬಳಿಕ ಸರ್ಕಾರ ರಚಿಸಿದ ಯಡಿಯೂರಪ್ಪ ಅವರು ಮುಂದುವರಿಸಬೇಕಿತ್ತು’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

‘ಮತ್ತೆ ಗ್ರಾಮ ವಾಸ್ತವ್ಯ ಡ್ರಾಮಾ!’ ಎಂಬ ಕಿರುಹೊತ್ತಗೆ ಬಿಡುಗಡೆಗೊಳಿಸಿ 10 ಪ್ರಶ್ನೆಗಳನ್ನು ಮುಂದಿಟ್ಟ ಯಡಿಯೂರಪ್ಪ ಅವರಿಗೆ ಕೆಲವೇ ಗಂಟೆಗಳಲ್ಲಿ ಲಿಖಿತವಾಗಿಯೇ ಉತ್ತರ ನೀಡಿದ ಅವರು, ‘ನನ್ನ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಆ ಗ್ರಾಮದ ಅಭಿವೃದ್ಧಿ ಮಾತ್ರವಲ್ಲ. ಸ್ಥಳೀಯವಾಗಿ ಜನರ ವೈಯಕ್ತಿಕ ಸಮಸ್ಯೆಗಳಿಗೂ ಸ್ಥಳದಲ್ಲಿಯೇ ಪರಿಹಾರ ದೊರಕಿಸುವುದು, ಜನರ ಆಶಯಗಳನ್ನು ಅರ್ಥೈಸಿಕೊಂಡು ಯೋಜನೆಗಳನ್ನು ರೂಪಿಸುವುದು ಆಗಿತ್ತು. ರೈತರ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಸುವರ್ಣ ಗ್ರಾಮ ಯೋಜನೆ, ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಸ್ಥಾಪನೆ, 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ ಮೊದಲಾದವು ಗ್ರಾಮ ವಾಸ್ತವ್ಯದ ಪರಿಣಾಮಗಳು. ಚಾಲನೆ ನೀಡಲಾಗಿದ್ದ ಅಭಿವೃದ್ಧಿ ಕಾರ್ಯಗಳನ್ನು ಬಳಿಕ ಬಂದ ಸರ್ಕಾರಗಳು ಮುಂದುರಿಸಬೇಕಿತ್ತು’ ಎಂದಿದ್ದಾರೆ.

‘ಗ್ರಾಮ ವಾಸ್ತವ್ಯ ವ್ಯರ್ಥ, ಅದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಪ್ರಯಾಣ ವೆಚ್ಚ, ಶಾಲೆಯಲ್ಲಿ ಉಳಿದುಕೊಳ್ಳಲು ಕನಿಷ್ಠ ಸೌಲಭ್ಯ ಮಾತ್ರ ನನ್ನ ವೆಚ್ಚ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು ಪ್ರರಚಾದ ಗಿಮಿಕ್ ಅಲ್ಲ ಎಂದೂ ಹೇಳಿದ್ದಾರೆ.

‘ಬರ ಪರಿಸ್ಥಿತಿ ನಿಭಾಯಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮಾಡಿ ಜಿಲ್ಲೆಗಳ ಬರ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿ, ಮಾರ್ಗದರ್ಶನ ನೀಡುತ್ತಿದ್ದಾರೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ ಗುರಿ ಮೀರಿದ ಸಾಧನೆ ಮಾಡಿ, ಜನರಿಗೆ ಉದ್ಯೋಗ ಒದಗಿಸಲಾಗಿದೆ. ರೈತರ ಸಾಲಮನ್ನಾದ ಪರಿಷ್ಕೃತ ಅಂದಾಜು ₹ 16 ಸಾವಿರ ಕೋಟಿ. ಈಗಾಗಲೇ 23 ಲಕ್ಷ ರೈತರ ₹12,830 ಕೋಟಿಯನ್ನು ರೈತರ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಐಎಂಎ ಹಗರಣ;ದಾಖಲೆ ಇದ್ದರೆ ಕೊಡಲಿ: ಐಎಂಎ ಹಗರಣ ಕುರಿತು ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಎಸ್ಐಟಿ ರಚಿಸಿ, ತನಿಖೆ ನಡೆಸಲಾಗುತ್ತಿದೆ. ಯಡಿಯೂರಪ್ಪ ಅವರ ಬಳಿ ಸಚಿವರು, ಶಾಸಕರು ಭಾಗಿಯಾಗಿರುವ ಕುರಿತು ಸೂಕ್ತ ದಾಖಲೆಗಳಿದ್ದರೆ, ಎಸ್ಐಟಿಗೆ ನೀಡಲಿ. ಪ್ರಕರಣವು ತನಿಖಾ ಹಂತದಲ್ಲಿ ಇರುವಾಗ ದಾಖಲೆಗಳಿಲ್ಲದೆ, ರಾಜಕೀಯ ನಾಯಕರ ಹೆಸರನ್ನು ಪ್ರಸ್ತಾಪಿಸಿ, ತನಿಖೆಯ ಹಾದಿ ತಪ್ಪಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT