ಸೋಮವಾರ, ಫೆಬ್ರವರಿ 24, 2020
19 °C
₹ 3 ಲಕ್ಷ ಲಂಚ ಪಡೆಯುವಾಗ ಬಂಧನ

ಆರೋಗ್ಯ ಇಲಾಖೆ ಎಸ್‌ಡಿಎ ಎಸಿಬಿ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರೋಗ್ಯ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ನೌಕರರನ್ನು ಒದಗಿಸಲು ‘ಶಿಯಾನ್‌ ಸಿಸ್ಟಮ್ಸ್‌’ಗೆ ಮಂಜೂರಾಗಿದ್ದ ಗುತ್ತಿಗೆ ಆದೇಶ ನೀಡಲು ₹3 ಲಕ್ಷ ಲಂಚ ಪಡೆಯುತ್ತಿದ್ದ ಆರೋಗ್ಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ವಾಸುದೇವ ಶುಕ್ರವಾರ ‘ಭ್ರಷ್ಟಾಚಾರ ನಿಗ್ರಹ ದಳದ’ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಜಿಲ್ಲೆ, ಹಳೇ ಮದರಾಸ್‌ ರಸ್ತೆ ಕಚೇರಿಗೆ ಗುತ್ತಿಗೆ ಆಧಾರದಲ್ಲಿ ನೌಕರರನ್ನು ಒದಗಿಸಲು ಟೆಂಡರ್‌ ಕರೆಯಲಾಗಿತ್ತು. ಶಿಯಾನ್‌ ಸಿಸ್ಟಮ್ಸ್‌ ಸೇರಿದಂತೆ ಮಾನವ ಸಂಪನ್ಮೂಲ ಒದಗಿಸುವ ಅನೇಕ ಕಂಪನಿಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಶಿಯಾನ್‌ ಸಿಸ್ಟಮ್ಸ್‌ ಅತ್ಯಂತ ಕಡಿಮೆ ದರ ನಮೂದಿಸಿದ್ದರಿಂದ ಗುತ್ತಿಗೆ ಮಂಜೂರಾಯಿತು. ಗುತ್ತಿಗೆ ₹3 ಕೋಟಿ ಮೊತ್ತದಾಗಿದ್ದು, ಇದಕ್ಕೆ ಸಂಬಂಧಿಸಿದ ಆದೇಶ ನೀಡಲು ವಾಸುದೇವ್‌ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ತಡಮಾಡಿದ್ದರಿಂದ ಆದೇಶ ಕೊಡಲು ವಾಸುದೇವ್‌ ವಿಳಂಬ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಕಂಪನಿ ಅಧಿಕಾರಿ ಚಂದ್ರಶೇಖರ್‌ ಮೂರು ದಿನಗಳ ಹಿಂದೆ ಲಂಚ ಕೊಡುವುದಾಗಿ ಭರವಸೆ ನೀಡಿದ ಬಳಿಕ ವಾಸುದೇವ್‌ ಆದೇಶ ನೀಡಿದ್ದರು. ಆನಂತರ ಆರೋಪಿ ದೂರವಾಣಿ ಕರೆ ಮಾಡಲು ಆರಂಭಿಸಿದ್ದರು. ಲಂಚ ತಲುಪಿಸದಿದ್ದರೆ ಮುಂದಿನ ಟೆಂಡರ್‌ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಂತೆ ನೋಡಿಕೊಳ್ಳುವುದಾಗಿ ಚಂದ್ರಶೇಖರ್‌ ಹೇಳಿದ್ದರು ಎಂದೂ ಮೂಲಗಳು ವಿವರಿಸಿವೆ.

ವಾಸುದೇವ್‌ ಕಿರುಕುಳ ತಾಳಲಾರದೆ ಚಂದ್ರಶೇಖರ್‌ ಎಸಿಬಿಗೆ ದೂರು ನೀಡಿದ್ದರು. ಐಜಿಪಿ ಚಂದ್ರಶೇಖರ್‌, ಎಸ್‌ಪಿ ಡಾ. ಸಂಜೀವ್‌ ಪಾಟೀಲ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ತಮ್ಮಯ್ಯ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಲಂಚದ ಹಣ ವಶಪಡಿಸಿಕೊಂಡಿದ್ದಾರೆ. ಲಂಚ ಪ್ರಕರಣದಲ್ಲಿ ಮತ್ಯಾವ ಅಧಿಕಾರಿ ಪಾತ್ರವಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಬ್ಯಾಂಕ್‌ ದಾಖಲೆ ಪರಿಶೀಲನೆ
ಬೆಂಗಳೂರು: ಟಿಡಿಆರ್‌ ವಂಚನೆ ಹಗರಣ ಕುರಿತು ತನಿಖೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು ಶುಕ್ರವಾರ ಕಬ್ಬನ್‌ ಪೇಟೆಯಲ್ಲಿರುವ ಮಹಿಳಾ ಸಹಕಾರಿ ಬ್ಯಾಂಕ್‌ಗೆ ಭೇಟಿ ನೀಡಿ ಜೆಲವು ಖಾತೆಗಳನ್ನು ಪರಿಶೀಲಿಸಿದರು.

ಟಿಡಿಆರ್‌ ವಂಚನೆ ಹಗರಣ ಬಯಲಿಗೆ ಬಂದ ಬಳಿಕ ಎಸಿಬಿ ಅಧಿಕಾರಿಗಳು ಬ್ಯಾಂಕ್‌ಗೆ ಭೇಟಿ ಕೊಟ್ಟು ಕೆಲ ಖಾತೆಗಳಲ್ಲಿ ನಡೆದಿರುವ ವಹಿವಾಟುಗಳನ್ನು ಪರಿಶೀಲಿಸುತ್ತಿರುವುದು  ಇದು ಎರಡನೇ ಸಲ

ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನು ಮತ್ತು ಕಟ್ಟಡಗಳ ಮಾಲೀಕರಿಗೆ ಕೊಡುವ ಟಿಡಿಆರ್‌ಸಿ ಪ್ರಮಾಣ ಪತ್ರದ ಆಧಾರದಲ್ಲಿ ಸುಮಾರು 174 ಖಾತೆಗಳನ್ನು ತೆರೆಯಲಾಗಿದ್ದು, ಕೆಲ ಖಾತೆಗಳನ್ನು ಒಂದೇ ಒಂದು ವಹಿವಾಟಿನ ಬಳಿಕ ಸ್ಥಗಿತಗೊಳಿಸಲಾಗಿದೆ.

ರಾಜಸ್ಥಾನ ಮೂಲದ ರಾಜೇಶ್‌ ಕುಮಾರ್‌ ಅಲಿಯಾಸ್‌ ರಾಕೇಶ್‌ ಕುಮಾರ್‌ ಎಂಬಾತ ಬಿಬಿಎಂಪಿ ಅಧಿಕಾರಿಗಳು ಹಾಗೂ ಬ್ಯಾಂಕ್‌ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದು ಅವರ ವಿಚಾರಣೆಯೂ ನಡೆಯುತ್ತಿದೆ. ಬ್ಯಾಂಕ್‌ ಮಾನೇಜರ್‌ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು