ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಳೆಗೆ ಗ್ರಾಮಗಳು ಜಲಾವೃತ, ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌

Last Updated 7 ಆಗಸ್ಟ್ 2019, 5:42 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಾದ್ಯಂತ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿದಿದೆ. ರಾತ್ರಿಯಿಡೀ ಸುರಿದ ಮಳೆಯು ಬೆಳಿಗ್ಗೆಯೂ ಮುಂದುವರೆದಿದ್ದು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದೆ.

ರಾಜ್ಯದಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ರಸ್ತೆಯ ಮೇಲೆ ನೀರು ಪ್ರವಾಹದಂತೆ ಹರಿಯುತ್ತಿರುವುದರಿಂದ ರಸ್ತೆ ಬಂದ್‌ ಮಾಡಲಾಗಿದೆ.

ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಮಾರ್ಕಂಡೇಯ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕೇರಿ ಹರಿಯುತ್ತಿವೆ. ನದಿ ಪಾತ್ರದ ಗ್ರಾಮಗಳಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಹಲವು ರಸ್ತೆಗಳು, ಸೇತುವೆಗಳು ಜಲಾವೃತವಾಗಿದ್ದು, ಇತರ ನಗರಗಳ ಜೊತೆಗಿನ ಸಂಪರ್ಕ ಕಡಿತಗೊಂಡಿದೆ.

ಪ್ರವಾಹ ಪೀಡಿತ ಕೃಷ್ಣಾ ನದಿ ತೀರದ ಚಿಕ್ಕೋಡಿ, ಅಥಣಿ, ರಾಯಬಾಗ ತಾಲ್ಲೂಕಿನ ಹಳ್ಳಿಗಳ ಜನರನ್ನು ರಾಜ್ಯದ ಪ್ರಕೃತಿ ವಿಕೋಪ ಪರಿಹಾರ ಪಡೆಯ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದೆ. ಮಲಪ್ರಭಾ ಉಗಮಸ್ಥಳವಾಗಿರುವ ಇತರ ನಗರಗಳ ಜೊತೆ ಖಾನಾಪುರ ಪಟ್ಟಣದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಬೆಳಗಾವಿ, ಜಾಂಬೋಟಿ, ಪಾರಿಶ್ವಾಡ, ನಂದಗಡ, ಲೋಂಡಾ ರಸ್ತೆ ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ.

ಪಾಂಡರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಲೋಂಡಾ ಗ್ರಾಮದೊಳಗೆ ನೀರು ನುಗ್ಗಿದೆ. ಗ್ರಾಮವು ಭಾಗಶಃ ಜಲಾವೃತವಾಗಿದೆ.

ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಗೋಕಾಕ– ಸಂಕೇಶ್ವರ ರಸ್ತೆಯ ಲೊಳಸೂರ ಸೇತುವೆ ಮುಳುಗಡೆಯಾಗಿದೆ. ಗೋಕಾಕ ಹೊರವಲಯದ ಮೂಲಕ ಸಾಗುವ ಜತ್- ಜಾಂಬೋಟಿ ಅಂತರ್ ರಾಜ್ಯ ಹೆದ್ದಾರಿ ಭಾಗವಾಗಿರುವ ಲೋಳಸೂರ ಸೇತುವೆಯು ಬೆಳಗಿನ ಜಾವದಿಂದಲೇ ಘಟಪ್ರಭೆಯ ಪ್ರವಾಹದಲ್ಲಿ ಮುಳುಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಗೋಕಾಕದಿಂದ ಗೋಕಾಕ್ ಫಾಲ್ಸ್‌ ಕಡೆಗೆ ಸಂಪರ್ಕ ಕಲ್ಪಿಸುವ ಚಿಕ್ಕೋಳಿ ಸೇತುವೆಯ ಮೇಲೆ ನೀರು ಹರಿಯುತ್ತಿದೆ.

ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದೆ. ಮಲಪ್ರಭಾ ನದಿಗೆ ಹೆಚ್ಚಿನ ಹರಿವು ಬಂದಿದ್ದು, ನಯಾನಗರ ಬಳಿಯ ಹೊಲಗಳಿಗೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT