ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಭಾರಿ ಮಳೆ: ಪೆಟ್ರೋಲ್; ​ಡೀಸೆಲ್‌​ ಕೊರತೆ

ಪ್ರವಾಹದ ಪರಿಣಾಮ ಹಲವು ಮಾರ್ಗಗಳ ಸಂಚಾರ ಸ್ಥಗಿತ
Last Updated 10 ಆಗಸ್ಟ್ 2019, 19:33 IST
ಅಕ್ಷರ ಗಾತ್ರ

ಶಿವಮೊಗ್ಗ: ಭಾರಿ ಮಳೆ, ಪ್ರವಾಹದ ಪರಿಣಾಮ ಹಲವು ಮಾರ್ಗಗಳ ಸಂಚಾರ ಸ್ಥಗಿತಗೊಂಡಿರುವಪರಿಣಾಮ ಮಲೆನಾಡು ಸೇರಿ ಹಲವೆಡೆ ಪೆಟ್ರೋಲ್, ಡೀಸೆಲ್‌ಗೆ ಕೊರತೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್‌, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‌ಗೆಸೇರಿದ 105 ಬಂಕ್‌ಗಳಿವೆ. ಜಿಲ್ಲೆಗೆ ಹಾಸನ ಮತ್ತು ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್‌ ಪೂರೈಕೆಯಾಗುತ್ತದೆ. ಐದುದಿನಗಳಿಂದ ಸತತ ಮಳೆ ಸುರಿಯುತ್ತಿರುವ ಪರಿಣಾಮ ಮಂಡಗದ್ದೆ–ತೀರ್ಥಹಳ್ಳಿ ರಸ್ತೆ, ಆಗುಂಬೆ ರಸ್ತೆ, ಹೊಸನಗರ ರಸ್ತೆ, ಹೊಳೆಹೊನ್ನೂರು ರಸ್ತೆ, ಹೊನ್ನಾಳಿ ರಸ್ತೆಗಳು ಬಂದ್‌ ಆಗಿವೆ. ಹಲವೆಡೆ ಸೇತುವೆಗಳು ಕುಸಿದಿವೆ.

ಗುಡ್ಡಗಳು ಜರುಗಿವೆ. ಈ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿಲ್ಲ. ಮಂಗಳೂರಿನಿಂದ ಬರುವ ಇಂಧನ ಟ್ಯಾಂಕರ್‌ಗಳ ಸೇವೆ ಸ್ಥಗಿತ
ಗೊಂಡಿವೆ.ಇದರಿಂದ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಜಿಲ್ಲೆಗೆ ಪ್ರತಿ ದಿನ ಸರಾಸರಿ 2 ಲಕ್ಷ ಲೀಟರ್ ಪೆಟ್ರೋಲ್, 4.5 ಲಕ್ಷ ಲೀಟರ್ ಡೀಸೆಲ್‌ಗೆ ಬೇಡಿಕೆ ಇದೆ. ಶೇ 30ರಷ್ಟು ಬಂಕ್‌ಗಳಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ಸಂಗ್ರಹವಿದೆ. ಎರಡು ದಿನಗಳು ಮಳೆ ಹೀಗೆ ಮುಂದುವರಿದರೆ ಈ ಸಂಗ್ರಹವೂ ಖಾಲಿಯಾಗುವ ಸಾಧ್ಯತೆ ಇದೆ. ಬಹುತೇಕ ಬಂಕ್‌ಗಳಲ್ಲಿ ‘ನೋ ಸ್ಟಾಕ್‌’ ಫಲಕ ಹಾಕಿದ್ದಾರೆ. ಖಾಸಗಿ ಬಸ್‌, ಲಾರಿಗಳು ಸೇರಿ ಡೀಸೆಲ್ ವಾಹನಗಳ ಚಾಲಕರು ಸಂಗ್ರಹ ಇರುವ ಬಂಕ್‌ಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.

ಬಂಕ್ ಮಾಲೀಕರಿಗೆ ನಷ್ಟ: ಒಂದು ಕಡೆ ಸಮಯಕ್ಕೆ ಸರಿಯಾಗಿ ಟ್ಯಾಂಕರ್‌ಗಳು ಬಾರದೆ ವ್ಯವಹಾರ ಸ್ಥಗಿತವಾಗಿದೆ. ಮತ್ತೊಂದು ಕಡೆ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ ಹಲವು ಬಂಕ್‌ಗಳ ಟ್ಯಾಂಕ್‌ಗಳಲ್ಲಿ ನೀರು ಸೇರಿದೆ. ಟ್ಯಾಂಕ್‌ ಸ್ವಚ್ಛಗೊಳಿಸದೆ ಇಂಧನ ತುಂಬುವಂತಿಲ್ಲ. ಸ್ವಚ್ಛಗೊಳಿಸಲು ಮಳೆ ಬಿಡುತ್ತಿಲ್ಲ. ಇದರಿಂದ ಬಂಕ್‌ ಮಾಲೀಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

‘ಮಂಗಳೂರಿನಿಂದ ಶಿವಮೊಗ್ಗಕ್ಕೆ ಕೊಪ್ಪ, ಶೃಂಗೇರಿ, ಕುದುರೆಮುಖ, ಕಾರ್ಕಳ ಮಾರ್ಗ ಹೊರತುಪಡಿಸಿದರೆ ಉಳಿದ ಮಾರ್ಗಗಳು ಬಂದ್‌ ಆಗಿವೆ. ಇರುವ ಮಾರ್ಗವೂ ಕಿರಿದಾಗಿದೆ. ಆ ಮಾರ್ಗ ಸುರಕ್ಷಿತವಲ್ಲ ಎಂಬ ಕಾರಣ ನೀಡಿ ಟ್ಯಾಂಕರ್‌ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಒಂದು ವಾರದಿಂದ ನಿರೀಕ್ಷಿತ ಪ್ರಮಾಣದ ಇಂಧನ ಸರಬರಾಜು ಆಗಿಲ್ಲ’ ಎನ್ನುತ್ತಾರೆ ಪೆಟ್ರೋಲ್ ಬಂಕ್ ಮಾಲೀಕರು.

‘ಸದ್ಯ ಹಾಸನದಿಂದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ಡೀಸೆಲ್, ಪೆಟ್ರೋಲ್ ಪೂರೈಸುತ್ತಿದೆ. ಮಳೆ ಮುಂದುವರಿದು ಈ ಮಾರ್ಗದಲ್ಲೂಅಡಚಣೆಯಾದರೆ ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಜಿಲ್ಲಾ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಕಾರ್ಯದರ್ಶಿ ಡಿ.ಎಸ್. ಅರುಣ್.

**

ಭಾರಿ ಮಳೆಯ ಪರಿಣಾಮ ಹಲವು ಬಂಕ್‌ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ನಿಲ್ಲದಿದ್ದರೆ ಸಮಸ್ಯೆ ಬಿಗಡಾಯಿಸಲಿದೆ.
- ಡಿ.ಎಸ್.ಅರುಣ್, ಕಾರ್ಯದರ್ಶಿ, ಜಿಲ್ಲಾ ಪೆಟ್ರೋಲ್ ಬಂಕ್ ಮಾಲೀಕರ ಸಂಘ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT