ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಾನ್ವೇಷಣೆಯ ಜಾಡು ಹಿಡಿದು...

Last Updated 6 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬಾಹ್ಯಾಕಾಶಕ್ಕೆ ಹಾರಬೇಕು, ಚಂದ್ರನ ಮೇಲೆ ಇಳಿಯಬೇಕು ಎಂಬ ಮಾನವನ ಆಸೆ ಇಂದು ನಿನ್ನೆಯದಲ್ಲ. ಮಾನವನ ಈ ಕನಸು ನನಸಾಗುವುದರ ಹಿಂದೆ ಸಾವಿರಾರು ವಿಜ್ಞಾನಿಗಳ, ದಶಕಗಳ ಹೋರಾಟದ ಕತೆ ಇದೆ. ಅದೆಷ್ಟೋ ಸೋಲುಗಳ ನಂತರ ಮನುಷ್ಯನಿಗೆ ಚಂದ್ರನ ಮೇಲೆ ಅಡಿ ಇಡಲು ಸಾಧ್ಯವಾಗಿದೆ. ಆದರೆ ಚಂದ್ರ ಸಂಪೂರ್ಣವಾಗಿ ಇನ್ನೂ ಮಾನವನ ಅಳತೆಗೆ ಸಿಕ್ಕಿಲ್ಲ. ಆತನನ್ನು ಅರಿಯುವ ಪ್ರಯತ್ನಗಳು ನಡೆಯುತ್ತಲೇ ಇವೆ

* ಚಂದ್ರನ ಅಧ್ಯಯನಕ್ಕಾಗಿ ‘ಮಿಷನ್‌ ಆರ್ಬಿಟರ್‌’ ಆರಂಭಿಸಿದ ಅಮೆರಿಕದ ವಾಯುಪಡೆಯು 1958ರ ಆಗಸ್ಟ್‌ 17ರಂದು ಮೊದಲಬಾರಿಗೆ ಉಪಗ್ರಹವನ್ನು ಕಳುಹಿಸುವ ಪ್ರಯತ್ನ ಮಾಡಿತು. ಆದರೆ ಉಡಾವಣೆ ಯಶಸ್ವಿಯಾಗಲಿಲ್ಲ

* ಅದೇ ವರ್ಷ ಸೆಪ್ಟೆಂಬರ್‌ 23ರಂದು ರಷ್ಯಾ ‘ಮಿಷನ್‌ ಇಂಪ್ಯಾಕ್ಟರ್‌’ ಅಡಿ ಉಪಗ್ರಹ ಉಡ್ಡಯನದ ಪ್ರಯತ್ನ ಮಾಡಿತು. ಅದೂ ವಿಫಲವಾಯಿತು

* ಆ ನಂತರ ರಷ್ಯಾ ಮತ್ತು ಅಮೆರಿಕಗಳು ಜಿದ್ದಿಗೆ ಬಿದ್ದವರಂತೆ ಉಪಗ್ರಹಗಳನ್ನು ಕಳುಹಿಸುವ ಪ್ರಯತ್ನ ಮಾಡುತ್ತಲೇ ಸಾಗಿದವು

* 1959ರ ಜನವರಿ 2ರವರೆಗೆ ಅಮೆರಿಕ ಮತ್ತು ರಷ್ಯಾ, ಉಪಗ್ರಹ ಉಡಾವಣೆಯ ತಲಾ ನಾಲ್ಕು ಪ್ರಯತ್ನಗಳನ್ನು ಮಾಡಿದವು. ಎಲ್ಲವೂ ವಿಫಲವಾಗಿದವು

* 1959ರ ಮಾರ್ಚ್‌ 3ರಂದು ನಾಸಾ ನಡೆಸಿದ ಪ್ರಯತ್ನಕ್ಕೆ ಭಾಗಶಃ ಯಶಸ್ಸು ಲಭಿಸಿತು. ಈ ಉಪಗ್ರಹವು ಭೂಮಿಯ ಕಕ್ಷೆಯಿಂದ ಆಚೆಗೆ ಚಿಮ್ಮುವಲ್ಲಿ ಯಶಸ್ವಿಯಾಯಿತು

ಚಂದ್ರನನ್ನು ಸುತ್ತು ಹಾಕಿದ ಮೊದಲ ಬಾಹ್ಯಾಕಾಶ ನೌಕೆ ಆರ್ಬಿಟರ್‌
ಚಂದ್ರನನ್ನು ಸುತ್ತು ಹಾಕಿದ ಮೊದಲ ಬಾಹ್ಯಾಕಾಶ ನೌಕೆ ಆರ್ಬಿಟರ್‌

* ಅದೇ ವರ್ಷ ಜೂನ್‌ ತಿಂಗಳಲ್ಲಿ ರಷ್ಯಾ ನಡೆಸಿದ ಪ್ರಯತ್ನ ಪುನಃ ವಿಫಲವಾಯಿತು. ಆದರೆ ಸೆಪ್ಟೆಂಬರ್‌ 12ರಂದು ರಷ್ಯಾ ಇನ್ನೊಂದು ಪ್ರಯತ್ನ ನಡೆಸಿತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾನವನಿಗೆ ಲಭಿಸಿದ ಮೊದಲ ಯಶಸ್ಸು ಅದಾಗಿತ್ತು. ರಷ್ಯಾದ ‘ಇಂಪ್ಯಾಕ್ಟರ್‌’ ಚಂದ್ರನ ಮೇಲ್ಮೈಯನ್ನು ತಲುಪಿತು. ಆದರೆ ಇದು ಸುರಕ್ಷಿತ ಇಳಿಕೆ ಆಗಿರಲಿಲ್ಲ

* 1959ರ ಅಕ್ಟೋಬರ್‌ 4ರಂದು ರಷ್ಯಾ ಇನ್ನೊಂದು ಉಪಗ್ರಹವನ್ನು ಕಳುಹಿಸಿತು. ಅದೂ ಯಶಸ್ವಿಯಾಯಿತು. ಆದರೆ ಈ ಯಶಸ್ಸಿನ ನಂತರವೂ ರಷ್ಯಾ ಸರಣಿ ವೈಫಲ್ಯದ ಕಹಿ ಸವಿಯಬೇಕಾಯಿತು

* 1959ರಿಂದ 1964ರವರೆಗಿನ ಅವಧಿಯಲ್ಲಿ ರಷ್ಯಾ ಮತ್ತು ಅಮೆರಿಕ ತಲಾ 7 ಪ್ರಯತ್ನಗಳನ್ನು ನಡೆಸಿದ್ದವು ಒಂದೆರಡಕ್ಕೆ ಭಾಗಶಃ ಯಶಸ್ಸು ಲಭಿಸಿದ್ದು ಬಿಟ್ಟರೆ ಎಲ್ಲವೂ ವಿಫಲವೆನಿಸಿದವು

* 1964ರ ಜುಲೈ 28ರಂದು ಅಮೆರಿಕಕ್ಕೆ ಮೊದಲ ಯಶಸ್ಸು ಲಭಿಸಿತು. 1965ರ ಫೆಬ್ರುವರಿಯಲ್ಲಿ ಅಮೆರಿಕ ಇನ್ನೊಂದು ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಮೇಲ್ಮೈಗೆ ಕಳುಹಿಸಿತು

* ಆ ನಂತರ 1966ರವರೆಗೂ ಎರಡೂ ರಾಷ್ಟ್ರಗಳು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಹೋದವು. ಸೋಲು– ಗೆಲುವಿನ ಮಿಶ್ರಣ ನಡೆಯುತ್ತಲೇ ಇತ್ತು. ಈ ಅವಧಿಯಲ್ಲಿ ಬಾಹ್ಯಾಕಾಶ ಸಂಶೋಧನೆಯನ್ನು ರಷ್ಯಾ ತುಂಬ ಗಂಭೀರವಾಗಿ ಪರಿಗಣಿಸಿತ್ತು

* 1966ರ ಜನವರಿ 31ರಂದು ರಷ್ಯಾ ಉಡಾವಣೆ ಮಾಡಿದ ಉಪಗ್ರಹವು ಫೆಬ್ರುವರಿ 3ರಂದು ಚಂದ್ರನ ಮೇಲೆ ಇಳಿಯಿತು. ಅದು ಮಾನವನ ಬಹುದೊಡ್ಡ ಹೆಜ್ಜೆಯಾಯಿತು. ಆ ಮೂಲಕ ಚಂದ್ರನ ಮೇಲೆ ಮೊದಲಿಗೆ ಸುರಕ್ಷಿತವಾಗಿ ನೌಕೆ ಇಳಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು

* 1966ರ ನಂತರ ಈ ಕ್ಷೇತ್ರದಲ್ಲಿ ಅಮೆರಿಕದ ಹೆಜ್ಜೆಗಳು ದಟ್ಟವಾಗಲು ತೊಡಗಿದವು. ರಷ್ಯಾದ ಪ್ರಯತ್ನಗಳು ಮುಂದುವರಿದಿದ್ದರೂ ನಿರೀಕ್ಷಿತ ಮಟ್ಟದ ಯಶಸ್ಸು ಲಭಿಸಲಿಲ್ಲ. ಇನ್ನೊಂದೆಡೆ ಅಮೆರಿಕ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಸಾಗಿತು

* 1968ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕವು ಬಹದೊಡ್ಡ ಹೆಜ್ಜೆ ಗುರುತನ್ನು ದಾಖಲಿಸಿತು. ಡಿಸೆಂಬರ್‌ 21ರಂದು ಅಮೆರಿಕವು ಮಾನವಸಹಿತ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಅದು ಚಂದ್ರನಿಗೆ ಸುತ್ತುಹಾಕಿ, ಡಿ.27ರಂದು ಮರಳಿ ಭೂಮಿಗೆ ಬಂದಿಳಿಯಿತು

ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿದ ಮೊದಲ ನೌಕೆ ರಷ್ಯಾದ ಲೂನಾ–9
ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿದ ಮೊದಲ ನೌಕೆ ರಷ್ಯಾದ ಲೂನಾ–9

* ಇದಾಗಿ ಸುಮಾರು ಒಂದು ವರ್ಷದ ನಂತರ 1969ರ ಜುಲೈ 16ರಂದು ಅಮೆರಿಕ ಮಾನವಸಹಿತ ಉಪಗ್ರಹವನ್ನು ಕಳುಹಿಸಿತು. ಅದು ಜುಲೈ 20ರಂದು ಚಂದ್ರನ ಮೇಲೆ ಇಳಿಯುವ ಮೂಲಕ ಚಂದ್ರನ ಶೋಧದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆಗುರುತು ಮೂಡಿದ ದಿನ ಅದು

* 1969ರಿಂದ 72ರವರೆಗಿನ ಅವಧಿಯಲ್ಲಿ ಅಮೆರಿಕವು ಆರು ಬಾರಿ ಮಾನವಸಹಿತ ಉಪಗ್ರಹಗಳನ್ನು ಕಳುಹಿಸಿದೆ. ಒಟ್ಟಾರೆ 12 ಮಂದಿ ಚಂದ್ರನ ಮೇಲೆ ನಡೆದಾಡಿದ್ದಾರೆ

* ಇದಾದ ನಂತರ ಚೀನಾ, ಭಾರತ, ಜಪಾನ್‌, ಇಸ್ರೇಲ್‌ ಹಾಗೂ ಯುರೋಪ್‌ನ ಸಂಸ್ಥೆಗಳು ಚಂದ್ರನ ಅಧ್ಯಯನವನ್ನು ಆರಂಭಿಸಿದವು

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT