ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ತೊರೆದರು ಭಾಗವತಜ್ಜ ಜನರನ್ನಲ್ಲ...

Last Updated 7 ಜನವರಿ 2020, 17:18 IST
ಅಕ್ಷರ ಗಾತ್ರ

ಸಾವು ಎಂಬ ಪದ ಭಯ ತರಿಸುವುದಿಲ್ಲ, ಆದರೆ, ಸಾವು ನಿಶ್ಚಿತ. ಸತ್ತರೆ ಮತ್ತೆ ಹಿಂದಿರುಗಲಾರೆವು ಎನ್ನುವುದು ಸಂಕಟ. ಕೆಲವರು ಜೀವನದ ಹೊಸ್ತಿಲಲ್ಲೇ ಸತ್ತಿರುತ್ತಾರೆ, ಇನ್ನು ಕೆಲವರು ಸತ್ತರೂ ಜೀವಿಸುತ್ತಾರೆ ಎಲ್ಲರ ಮನಸ್ಸಿನಲ್ಲಿ, ತಾವು ಉಸಿರಿರುವಾಗ ಮಾಡಿದ ಸತ್ಕಾರ್ಯಗಳಿಂದ.

ಹೊಸ್ತೋಟ ಮಂಜುನಾಥ ಭಾಗವತರು ದೇಹ ಮಾತ್ರವಾಗಿ ದೂರ ಸರಿದಿದ್ದಾರೆ. ಅವರ ಕನಸುಗಳ ಬುಟ್ಟಿಯನ್ನು ನಮ್ಮಲ್ಲಿಯೇ ಇಟ್ಟಿದ್ದಾರೆ. ಯಕ್ಷಲೋಕದ ಧ್ರುವ ನಕ್ಷತ್ರ. ಯಕ್ಷ ಸೇವೆಯಲ್ಲೇ ದೇಹ ಸವೆಸಿ, ಯಕ್ಷರಂಗಕ್ಕೆ ಸಿರಿಗಂಧದ ಕಂಪನ್ನು ಪೂಸಿದ್ದಾರೆ.

ಹೊಸ್ತೋಟರು ಯಕ್ಷಕಲೆಯ ರೊಬೋಟ್ ಅಂದರೆ ತಪ್ಪಾಗಲಿಕ್ಕಿಲ್ಲ! ಈ ರೀತಿ ಬದುಕುವುದು ಸಾಮಾನ್ಯರಿಗೆ ಕಷ್ಟ, ಅವಧೂತರಿಗೆ ಮಾತ್ರ ಸಾಧ್ಯ. ಒಂದೇ ಗುರಿ, ನಡೆ, ನೇರ- ದಿಟ್ಟ, ಬೇಕು- ಬೇಡಗಳು ತನ್ನದಲ್ಲವೆಂಬಂತೆ, ಎಲ್ಲವನ್ನೂ ಯಕ್ಷರಂಗಕ್ಕೆ ಮುಡಿಪಾಗಿಡಬೇಕು ಎಂಬ ಅವರ ಅಚಲ ನಿರ್ಧಾರ, ಹಾಗೇ ಆದದ್ದು ಕೂಡ ಪವಾಡವೇ!

ಯಕ್ಷಗುರು, ಯಕ್ಷಋಷಿ, ಯಕ್ಷ ಭೀಷ್ಮ ಮುಂತಾಗಿ ಗುರುತಿಸಿಕೊಂಡಿದ್ದ ಅವರಿಗೆ ಮನೆಯೇ ಇಲ್ಲ, ಅವರು ಅದನ್ನು ಬಯಸಿದವರೂ ಅಲ್ಲ. ಶಿರಸಿಯ ಹತ್ತಿರ ಮೋತಿಗುಡ್ಡದ ಅರಳೀಕಟ್ಟೆ ಪಕ್ಕದ ಕುಟೀರದಲ್ಲಿ ವಾಸ. ಇಲ್ಲಿಂದ ಸ್ವಲ ದೂರವಿರುವ ಬೆಣ್ಹೆಕಾನು, ಒಂದೇ ಮನೆಯಿರುವ ಒಂದು ಊರು. ಅಲ್ಲಿ ಅವರದು ನಿತ್ಯ ಮಧ್ಯಾಹ್ನದ ಊಟ. ಕೊನೆಯ ತನಕ ತುಂಬಾ ಪ್ರೀತಿಯಿಂದ ಸೇವೆ ಮಾಡಿ, ಜೊತೆಗಿತ್ತು ಆ ಕುಟುಂಬ. ಆಹಾರಕ್ಕಾಗಿ ಪರಾವಲಂಬಿಯಾಗಿದ್ದಕ್ಕೆ, ಒಂದೇ ಊಟದಲ್ಲಿ ದಿನ ಮುಗಿಸುತ್ತಿದ್ದರು. ಕೇಳಿದರೆ, ‘ರಾಗಿ ಕುಡಿಯುತ್ತೇನೆ, ಅದು ದೇಹಕ್ಕೆ ತಂಪು’ ಎಂದು ತೇಲಿಸಿ ಬಿಡುತ್ತಿದ್ದರು. ಧರಿಸುವ ಬಟ್ಟೆಯ ಬಗ್ಗೆಯೂ ಅಷ್ಟೇ ತಾತ್ಸಾರ, ಹೇಗಿದ್ದರೂ ನಡೆದೀತು.

ಹವ್ಯಕ ಮಹಾಸಭಾ ‘ಹವ್ಯಕ ವಿಭೂಷಣ ಪ್ರಶಸ್ತಿ’ ಕೊಡುವಾಗ ಮದುಮಗನಂತೆ ರೆಡಿ ಮಾಡಿ, ತಲೆ ಬಾಚಿ, ಶಲ್ಯ ಹೊದೆಸಿ ಕಳುಹಿಸಿದ ತೃಪ್ತಿ ನನಗೆ. ಆಗಲೂ ಬೇಡ ಎಂದು ಹಠ ಮಾಡಿದ್ದರು. ಮೊಬೈಲ್ ಬಳಸಲು ಕೊನೆಗೂ ನಿರಾಕರಿಸಿದರು. ಸಂಚಾರಿ ಜೀವನ ಶೈಲಿ ಅವರದ್ದು.

ಎಲ್ಲಿ ತನ್ನ ಅಗತ್ಯ ಇದೆಯೋ ಅಲ್ಲಿಯೇ ಉಳಿದು, ಮಾತುಕೊಟ್ಟ ಕೆಲಸ ಮುಗಿಸಿಯೇ ಮತ್ತೆ ಅಲ್ಲಿಂದ ವಾಪಸ್ಸಾಗುತ್ತಿದ್ದರು.

ಎಷ್ಟೋ ಬಾರಿ ಅವರು ಎಲ್ಲಿದ್ದಾರೆಂಬುದನ್ನು ತಿಳಿಯುವುದೇ ಕ್ಲಿಷ್ಟವಾಗಿತ್ತು. ಆಗಾಗ ಸಿಟ್ಟು, ಹಠ, ತುಸು ಹೆಚ್ಚಾಗಿಯೇ ಬರುತ್ತಿತ್ತು. ಕೆಲವರ ಮಾತಿಗೆ ಮಾತ್ರ ಹೂಂ ಎನ್ನುತ್ತಿದ್ದರು, ಅವರಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರೂ ಸೇರಿದ್ದರು.

ಅವರ ಜೀವನ ಶೈಲಿ ಸರಳವಾಗಿದ್ದರೂ, ವ್ಯಕ್ತಿತ್ವ ಮಾತ್ರ ಗಂಭೀರ. ಸಲುಗೆಯಾದ ಮೇಲೆ ಅವರ ಆತ್ಮೀಯತೆ ತಿಳಿ ಹಾಲ ಸಾಗರದಂತೆ. ಯಕ್ಷಲೋಕದಲ್ಲಿ ಈಜಿದಷ್ಟು ಇನ್ನೂ ದಣಿಯದ ಶ್ರೀಮಂತ ತೃಪ್ತಿ ಅವರಲ್ಲಿತ್ತು. ಯಕ್ಷಗಾನ ಅನುಗ್ರಹಕಾರಕ ಒಡನಾಡಿ ಅವರಿಗೆ. ಮಾತು- ಕೃತಿ-ಕಾರ್ಯ- ಲಿಪಿ- ಹರಟೆ ಎಲ್ಲಾ ಯಕ್ಷಮಯ. ಈ ಕಲೆ ಕನ್ನಡದ ಕಣ್ಮಣಿ, ಕನ್ನಡ ಭಾಷೆ ಬೆಳೆಸಲು ಕೇಂದ್ರ ಸ್ತಂಭವಾಗಬೇಕೆಂಬುದು ಅವರ ಕನಸು. 80ರ ವಯಸ್ಸಿನಲ್ಲೂ ಅರಾಮಿದ್ದೆ ಎನ್ನುವ ನಿರಾಳತೆ, ಏನೇ ಆದರೂ ಇನ್ನೂ ಬದುಕಬೇಕು, ಬರೆಯಬೇಕು ಅನ್ನುವ ಹಂಬಲ ಬಿಟ್ಟಿರಲಿಲ್ಲ. ತೀರಾ ಇತ್ತೀಚೆಗೆ ಪ್ರೊ. ಎಂ.ಎ.ಹೆಗಡೆಯವರ ಬಳಿ, ‘ನನಗೆ ಬರೆಯಬೇಕು, ಹೀಗೆ ಸುಮ್ಮನೆ ಮಲಗಿರಲು ಆಗದು’ ಎಂದಿದ್ದರಂತೆ.

ಪ್ರಶಸ್ತಿಗಳು ಅವರನ್ನು ಹಿಂಬಾಲಿಸಿದವೇ ವಿನಾ ಅವರು ಪ್ರಶಸ್ತಿ ಹಿಂದೆ ಹೋಗಿಲ್ಲ. ದುಡ್ಡು ಕೊಟ್ಟಾದರೂ ಪ್ರಶಸ್ತಿ ಪಡೆಯಬೇಕು ಎನ್ನುವವರ ಮಧ್ಯೆ ಇಂತಹ ನಿಸ್ವಾರ್ಥಿಗಳು ಬದುಕಿದ್ದರೆಂಬುದಕ್ಕೆ ಹೆಮ್ಮೆ ಇದೆ. ನಮ್ಮ ‘ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್’ ವತಿಯಿಂದ ಅವರ ಕೆಲವು ಬರಹಗಳನ್ನು ಪುಸ್ತಕ ರೂಪಕ್ಕೆ
ತರುವ ಪುಣ್ಯ ದೊರಕಿದ್ದು ದೇವಕೃಪೆಯೇ ಸರಿ.

ಪುರಾಣದಿಂದ- ಸಾಫ್ಟ್‌ವೇರ್‌ವರೆಗೂ ತಮ್ಮ ಜ್ಞಾನದ ಪ್ರಖರತೆಯನ್ನು, ಎಳೆಯರಿಂದ- ವಯಸ್ಕರವರೆಗೆ ಭಾವ ವಿಸ್ಮತೆಯನ್ನ ಲೀಲಾಜಾಲವಾಗಿ ಅರಿತವರು ಹೊಸ್ತೋಟರು.

ಮನೆಯ ಹಿರಿಯ ಅಗಲಿದಾಗ, ಉಳಿದವರಿಗೆ ಜವಾಬ್ದಾರಿ ಹೇಗಲೇರುತ್ತದೆ. ಹಾಗೇ ಯಕ್ಷರಂಗದಲ್ಲಿ ಭಾಗವತರ ಕನಸನ್ನು, ಸಾಧನೆಯ ಬೆಳಕನ್ನು ಪಾಲನೆ ಮಾಡುವುದು ಇಂದಿನ ಯಕ್ಷ ಪೀಳಿಗೆಯ ಜವಾಬ್ದಾರಿ.

ಅವರು ಮಣಿಪಾಲ್ ಆಸ್ಪತ್ರೆಯಲ್ಲಿರುವಾಗ, ಆರೋಗ್ಯ ವಿಚಾರಿಸಲು ಬರುವವರನ್ನು ಕಂಡು, ‘ಕಾಯಿಲೆ ಬಂದಿದ್ದರಿಂದ ನನಗೆ ಯಾರ್ಯಾರು ಅಭಿಮಾನಿಗಳಿದ್ದಾರೆ ಎಂದು ತಿಳಿಯಿತು’ ಎಂದು ತಮಾಷೆ ಮಾಡಿದ್ದರಂತೆ. ಯಕ್ಷಮಾತೆಯ ಸೇವೆ ಮಾಡಿದ್ದಕ್ಕಾಗಿ ಈ ಅಭಿಮಾನ- ಆತಿಥ್ಯ ಬರಿಯ ಸಂಸಾರಿ ಆಗಿದ್ದರೆ ಸಿಗುತ್ತಿರಲಿಲ್ಲ ಎಂದು ನೆನಪಿಸಿದ್ದರು. ಅವರ ಅಭಿಮಾನಿಗಳು, ಒಡನಾಡಿ ಗಳು ಕಾಳಜಿಯಿಂದ ಸೇವೆ ಮಾಡಿ, ಭಾಗವತರ ಯಕ್ಷಸೇವೆಯ ಪರಿಯನ್ನು ಮೆರೆದಿದ್ದಾರೆ. ಜೀವ ತೊರೆದರು, ಜನರನ್ನ ತೊರೆಯಲಿಲ್ಲ ನಮ್ಮ ಭಾಗವತಜ್ಜ.

ಹೊಸ್ತೋಟ ಮಂಜುನಾಥ ಭಾಗವತರು ಇನ್ನಿಲ್ಲ

ಯಕ್ಷಗಾನದ ಸವ್ಯಸಾಚಿಯಾಗಿದ್ದ ತಾಲ್ಲೂಕಿನ ಹೊಸ್ತೋಟದ ಮಂಜುನಾಥ ಭಾಗವತ (80) ಮಂಗಳವಾರ ನಿಧನರಾದರು.

ಅವರಿಗೆ ಇಬ್ಬರು ಸಹೋದರರು, ಸಹೋದರಿ ಇದ್ದಾರೆ. ಅಧ್ಯಾತ್ಮದ ಒಲವು ಹೊಂದಿದ್ದ ಅವರು, 1966ರಲ್ಲಿ ರಾಮಕೃಷ್ಣ ಆಶ್ರಮದಲ್ಲಿ ಪರಿವ್ರಾಜಕ ವ್ರತ ಸ್ವೀಕರಿಸಿದ್ದರು. ಭಾಗವತರು ತಮ್ಮ ಇಡೀ ಜೀವನವನ್ನು ಯಕ್ಷಗಾನಕ್ಕೆ ಮುಡಿಪಾಗಿಟ್ಟಿದ್ದರು.

ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸೋಂದಾ ಬಾಡಲಕೊಪ್ಪದ ಶ್ರೀಪಾದ ಜೋಶಿ ಅವರ ಮನೆಯಲ್ಲಿದ್ದರು. ಅವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ,ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಇಲ್ಲಿನ ವಿದ್ಯಾನಗರದ ರುದ್ರಭೂಮಿ ಯಲ್ಲಿ ಮೃತರ ಅಂತ್ಯಕ್ರಿಯೆ ಸಂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT