ರಂಭಾಪುರಿ ಶ್ರೀ ಆಶೀರ್ವಾದ ಪಡೆದ ವಿನಯ ಕುಲಕರ್ಣಿ

ಬುಧವಾರ, ಏಪ್ರಿಲ್ 24, 2019
31 °C
‘ಕಾಲಕಾಲಕ್ಕೆ ವಿಚಾರ ಒಂದೇ ಇರುವುದಿಲ್ಲ’

ರಂಭಾಪುರಿ ಶ್ರೀ ಆಶೀರ್ವಾದ ಪಡೆದ ವಿನಯ ಕುಲಕರ್ಣಿ

Published:
Updated:
Prajavani

ಹುಬ್ಬಳ್ಳಿ: ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ ಮುಖಂಡ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನಯ ಕುಲಕರ್ಣಿ,  ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀಗಳನ್ನು ಯುಗಾದಿಯ ದಿನವಾದ ಶನಿವಾರ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಶ್ರೀಗಳು, ಸ್ವತಂತ್ರ ಲಿಂಗಾಯತ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಗ ಸಚಿವರಾಗಿದ್ದ ವಿನಯ, ಸ್ವಾಮೀಜಿಯ ನಡೆಯನ್ನು ವಿರೋಧಿಸಿದ್ದರು. ಇದೀಗ ತಾಲ್ಲೂಕಿನ ತಿರಮಲಕೊಪ್ಪ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ.

ಭಾನುವಾರ, ನಗರದ ಜೆಡಿಎಸ್‌ ಕಚೇರಿಯಲ್ಲಿ ನಡೆದ ಮೈತ್ರಿಪಕ್ಷಗಳ ಸಭೆಯಲ್ಲಿ ಈ ಬಗ್ಗೆ ವಿನಯ ಅವರನ್ನು ಪ್ರಶ್ನಿಸಿದಾಗ, ‘ಕಾಲಕಾಲಕ್ಕೆ ವಿಚಾರಗಳು ಒಂದೇ ರೀತಿ ಇರುವುದಿಲ್ಲ. ಅದು ಆಗಿನ ಸಂದರ್ಭವಷ್ಟೇ. ಮನೆಯಲ್ಲಿ ಸಹೋದರರ ನಡುವೆ ಸಣ್ಣ ವೈಮನಸ್ಸು ಸಹಜ. ಅವುಗಳನ್ನೆಲ್ಲ ನಾವು ಸರಿಪಡಿಸಿಕೊಳ್ಳುತ್ತೇವೆ’ ಎಂದರು.

ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ನಿಮ್ಮ ನಿಲುವೇನು ಎನ್ನುವ ಪ್ರಶ್ನೆಗೆ, ‘ಸದ್ಯಕ್ಕೆ ಯಾವುದರ ಬಗ್ಗೆಯೂ ನನಗೆ ನಿಲುವಿಲ್ಲ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದಷ್ಟೇ ಗುರಿ. ಚುನಾವಣೆಯಲ್ಲಿ ಆರಿಸಿ ಬರುವುದಾಗಿ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. ನಾವೀಗ ಚೆನ್ನಾಗಿದ್ದೇವೆ; ನಮ್ಮನ್ನು ಚೆನ್ನಾಗಿರಲು ನೀವು ಬಿಟ್ಟು ಬಿಡಿ’ ಎಂದರು.

ಸಭೆಯಲ್ಲಿದ್ದ ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ, ‘ಸ್ವಾಮೀಜಿಗಳನ್ನು ಭೇಟಿಯಾಗುವುದು ತಪ್ಪೇನಲ್ಲ. ಬೇಕಾದರೆ ನಿತ್ಯವೂ ಭೇಟಿಯಾಗುತ್ತೇನೆ. ಕೆಲ ಸಂದರ್ಭದಲ್ಲಿ ಕೆಲ ಘಟನೆಗಳು ನಡೆದಿರುತ್ತವೆ. ಅವುಗಳನ್ನು ಅಲ್ಲಿಯೇ ಬಿಟ್ಟುಬಿಡಬೇಕು’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಂಭಾಪುರಿ ಶ್ರೀಗಳು, ‘ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ. ಹಿಂದಿನ ಚುನಾವಣೆಯಲ್ಲಿ ಯಾರು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಸತ್ಯ, ನ್ಯಾಯ, ಪ್ರಾಮಾಣಿಕತೆಗೆ ಗೆಲುವು ಇದ್ದೇ ಇರುತ್ತದೆ. ನನ್ನ ಬಳಿ ಯಾರೇ ಬಂದರೂ ಧಾರ್ಮಿಕ ಗುರುವಾಗಿ ಆಶೀರ್ವಾದ ಮಾಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !