ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಸ್ಫೋಟ ಪ್ರಕರಣ: ಕಾರಣವಿನ್ನೂ ನಿಗೂಢ; ತನಿಖೆ ಚುರುಕು

ಇನ್ನೂ 7 ಬಾಕ್ಸ್‌ಗಳಲ್ಲಿವೆ ಸ್ಫೋಟಕ
Last Updated 22 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸ್ಫೋಟಗೊಂಡ ನಿಗೂಢ ವಸ್ತು ಯಾವುದು? ಅದನ್ನು ಎಲ್ಲಿಂದ ತರಲಾಗಿತ್ತು? ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು? ರೈಲಿನಲ್ಲಿಯೇ ಬಿಟ್ಟು ಹೋಗಿದ್ದೇಕೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಮಂಗಳವಾರವೂ ನಿಗೂಢವಾಗಿಯೇ ಉಳಿದಿವೆ.

ಬೆಂಗಳೂರು ಹಾಗೂ ಕೊಲ್ಹಾಪುರದಿಂದ ಅಧಿಕಾರಿಗಳ ತಂಡ ಬಂದಿದ್ದು, ತನಿಖೆ ಆರಂಭಿಸಿವೆ. ಆದರೆ, ನೆಲದಲ್ಲಿ ಹೂತಿಟ್ಟಿರುವ ಇನ್ನೂ ಏಳು ಬಾಕ್ಸ್‌ನಲ್ಲಿರುವ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ತಂಡ ಬೆಂಗಳೂರಿನಿಂದ ಬಾರದಿದ್ದರಿಂದ ಸ್ಫೋಟಗೊಂಡ ವಸ್ತು ಏನು ಎಂಬ ಸ್ಪಷ್ಟ ನಿರ್ಧಾರಕ್ಕೆ ಬರಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

‘ಸ್ಫೋಟಕ ವಸ್ತುವಿನ ಮಾದರಿಯನ್ನು ಬೆಂಗಳೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಿಲ್ಲ’ ಎಂದು ಆರ್‌ಪಿಎಫ್‌ನ ಉಪ ಪ್ರಧಾನ ಭದ್ರತಾ ಆಯುಕ್ತ ಅರುಣಕುಮಾರ ಚೌರಾಶಿ ತಿಳಿಸಿದ್ದಾರೆ.

ರೈಲ್ವೆ ಪೊಲೀಸ್, ಕೇಂದ್ರ ಗುಪ್ತಚರ ಇಲಾಖೆ, ಭಯೋತ್ಪಾದಕ ನಿಗ್ರಹ ದಳ ಮತ್ತು ಆರ್.ಪಿ.ಎಫ್ ಅಧಿಕಾರಿಗಳು ಸಭೆ ನಡೆಸಿದ್ದು, ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಯಾವ, ಯಾವ ದಿಕ್ಕಿನಲ್ಲಿ ತನಿಖೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಅನುಮಾನಾಸ್ಪದ ವಸ್ತು ದೊರೆತ ನಂತರ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದ ಆರ್‌ಪಿಎಫ್‌ ಸಿಬ್ಬಂದಿ, ಚಹಾ ಮಾರಾಟ ಮಾಡುವ ಹುಸೇನ್‌ಸಾಬ್‌ ಅವರಿಂದ ಸ್ಫೋಟಕ ವಸ್ತು ಪರಿಶೀಲನೆ ಮಾಡಿಸಿದ್ದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ ಅವರೂ ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಕರಣವನ್ನು ಶೀಘ್ರವೇ ಭೇದಿಸಬೇಕು ಎಂದು ಸೂಚಿಸಿದ್ದಾರೆ. ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ವ್ಯಾಪಕ ಬಂದೋಬಸ್ತ್‌ ಮಾಡಲಾಗಿದೆ. ಪ್ರತಿ ಹೆಜ್ಜೆಗೂ ತಪಾಸಣೆ ಮಾಡಲಾಗುತ್ತಿದೆ.

ಆರ್‌ಪಿಎಫ್ ಸಿಬ್ಬಂದಿ ವೈಫಲ್ಯಕ್ಕೆ ಆಕ್ಷೇಪ

ಹುಬ್ಬಳ್ಳಿ: ಅನುಮಾನಾಸ್ಪದ ವಸ್ತು ಕಂಡು ಬಂದಾಗ ಅದನ್ನು ಆರ್‌ಪಿಎಫ್‌ ಸಿಬ್ಬಂದಿಯೇ ಪರಿಶೀಲಿಸದೆ, ಚಹಾ ಮಾರಾಟ ಮಾಡುವ ವ್ಯಕ್ತಿಗೆ ಸೂಚಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಅಮರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇದ್ದ ಅನುಮಾನಾಸ್ಪದ ಬಕೆಟ್‌ ಅನ್ನು ಚಹಾ ಮಾರುವ ಹುಸೇನ್‌ ಸಾಬ್ ಅವರಿಂದ ತರಿಸಿಕೊಂಡು, ಅವರಿಗೇ ತೆಗೆದು ನೋಡಲು ಸೂಚಿಸಿದ ಆರ್‌ಪಿಎಫ್ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಮಂಟೂರು ರಸ್ತೆನಿವಾಸಿ ಅಹ್ಮದ್‌ ಹುಸೇನ್‌ ಒತ್ತಾಯಿಸಿದ್ದಾರೆ.

‘ಸ್ಫೋಟದಿಂದ ಗಾಯಗೊಂಡಿರುವಹುಸೇನ್‌ ಸಾಬ್‌ ಅವರಿಗೆ ರೈಲ್ವೆಯಲ್ಲಿ ಉದ್ಯೋಗ ನೀಡಬೇಕು. ಅವರ ಜೀವನಕ್ಕೆ ಆರ್ಥಿಕ ಸೌಲಭ್ಯ ಒದಗಿಸಬೇಕು. ಆರ್‌ಪಿಎಫ್‌ ಸಿಬ್ಬಂದಿಯ ಕಾನೂನು ಬಾಹಿರ ಕೆಲಸದಿಂದಾಗಿಯೇ ಈ ಸ್ಫೋಟ ನಡೆದಿದೆ’ ಎಂದು ರೈಲ್ವೆ ಪೊಲೀಸ್‌ ಠಾಣೆ ಎದುರು ಹುಸೇನ್‌ ಕುಟುಂಬದವರು ಹಾಗೂ ಮಂಟೂರು ರಸ್ತೆ ನಿವಾಸಿಗಳು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT