ಶನಿವಾರ, ಫೆಬ್ರವರಿ 4, 2023
18 °C
ಕುಮಾರಸ್ವಾಮಿ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ

ಪ್ರಧಾನಿ ಮಗ ಮುಖ್ಯಮಂತ್ರಿಯಾಗುವುದು ಸಾಧನೆಯಲ್ಲ: ಸಚಿವ ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಪ್ರಧಾನಮಂತ್ರಿಯ ಮಗ ಮುಖ್ಯಮಂತ್ರಿ ಆಗುವುದು ಸಾಧನೆಯಲ್ಲ. ಕುಮಾರಸ್ವಾಮಿಯಂತೆ ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವನಲ್ಲ. ಹೋರಾಟಗಳಿಂದ ಬೆಳೆದು ಬಂದಿದ್ದೇನೆ. ಮತ್ತೊಬ್ಬರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಸಚಿವ ಶ್ರೀರಾಮುಲು ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಕುಮಾರಸ್ವಾಮಿ ಎಂತಹ ರಾಜಕಾರಣಿ ಎಂಬುದು ಗೊತ್ತಿದೆ. ಅವರಂತೆ ಅಸಭ್ಯ ಪದಗಳನ್ನು ಬಳಕೆ ಮಾಡುವುದಿಲ್ಲ. ಸ್ವಂತ ವರ್ಚಸ್ಸಿನಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ರಾಮುಲು ತಿರುಗೇಟು ನೀಡಿದರು.

ಬಂಡಾಯ ಇಲ್ಲ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿರುವುದು ಖುಷಿಯ ವಿಚಾರ. ಮಗಳ ಮದುವೆಯ ಆಮಂತ್ರಣ ಪತ್ರಿಕೆ ಹಂಚಲು ಪಕ್ಷದ ಅನುಮತಿ ಪಡೆದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದೇನೆ. ಪಕ್ಷದೊಳಗೆ ಬಂಡಾಯ ಇಲ್ಲ ಎಂದು ರಾಮುಲು ಸ್ಪಷ್ಟಪಡಿಸಿದರು.

ಮೂಲ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ವಾದದಲ್ಲಿ ತಪ್ಪಿಲ್ಲ. ಬಿಜೆಪಿಗೆ ಶಕ್ತಿ ತುಂಬಿದ ಕರಾವಳಿಗೂ ಸಚಿವ ಸ್ಥಾನ ಸಿಗಬೇಕು. ಮುಂದೆ ಸಂಪುಟ ವಿಸ್ತರಣೆಯ ವೇಳೆ ಅವಕಾಶ ಸಿಗಲಿದೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಉಗ್ರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶರಾಗಿ ಟೀಕೆ ಮಾಡುತ್ತಿದ್ದಾರೆ. ಅನರ್ಹರು ಅರ್ಹರಾಗಿರುವುದನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ ಎಂದು ತಿರುಗೇಟು ನೀಡಿದರು. 

ಕೊರೊನಾ ಹರಡದಂತೆ ಎಚ್ಚರಿಕೆ

ಕರೋನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.

‘ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಕರಾವಳಿಯ ಬಂದರಿನಲ್ಲಿಯೂ ಎಚ್ಚರಿಕೆ ವಹಿಸಲಾಗಿದೆ ಎಂದರು.

ಕೇರಳದಿಂದ ಬರುವ ವಾಹನಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ತಡೆದು 74 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ ಕರೊನಾ ಸೋಂಕು ಪತ್ತೆಯಾಗಿಲ್ಲ ಎಂದ ಅವರು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲೂ 10 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ಎಲ್‌ಇಡಿ ವಾಹನಗಳ ಮೂಲಕ ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಮಾಸ್ಕ್‌ಗಳ ಕೊರತೆ ಇಲ್ಲ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆ ಖಚಿತ:

ರಾಜ್ಯ ಬಜೆಟ್‌ನಲ್ಲಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವ ನಿರ್ಧಾರ ಪ್ರಕಟವಾಗುವುದು ಖಚಿತ. ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತುಕೊಟ್ಟಿದ್ದು, ಈಡೇರಿಸುವ ವಿಶ್ವಾಸವಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು