ಗುರುವಾರ , ಜನವರಿ 23, 2020
26 °C

ಕ್ಯಾಂಪಸ್‌ನಲ್ಲಿ ಸಿದ್ಧಾಂತ ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಎಡ–ಬಲ ಸಿದ್ಧಾಂತಗಳ ಸಂಘರ್ಷ ಜೆಎನ್‌ಯುನಲ್ಲಿ ತಾರಕಕ್ಕೇರಿದೆ. ಇಲ್ಲಿನ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಯಾವ ಮಟ್ಟದಲ್ಲಿ ಇದೆ ಎಂಬುದರತ್ತ ಒಂದು ನೋಟ

ಗುಲಬರ್ಗಾ ವಿಶ್ವವಿದ್ಯಾಲಯ

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎಡ–ಬಲ ಎಂಬ ತಾತ್ವಿಕ ಭಿನ್ನಾಭಿಪ್ರಾಯಗಳಿಲ್ಲ. ವಿವಿಧ ಸಿದ್ಧಾಂತವನ್ನಿಟ್ಟುಕೊಂಡು ವಿಶ್ವವಿದ್ಯಾಲಯದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಸಂಘಟನೆಗಳಿಗೆ ಅವಕಾಶ ನೀಡಿಲ್ಲ. ಪ್ರಾಧ್ಯಾಪಕರ ಮಧ್ಯೆ ವಿಷಯಾಧಾರಿತ ಚರ್ಚೆ ಆಗುತ್ತದೆಯೇ ಹೊರತು ಸೈದ್ಧಾಂತಿಕ ಕಾರಣದಿಂದಲ್ಲ.

–ಪ್ರೊ.ಎಸ್.ಪಿ.ಮೇಲಕೇರಿ, ಪ್ರಾಧ್ಯಾಪಕ, ಮನೋವಿಜ್ಞಾನ ವಿಭಾಗ

ನಾನು ಹಂಗಾಮಿ ಕುಲಪತಿಯಾಗಿದ್ದ ಅವಧಿಯಲ್ಲಿ, ಗುಲಬರ್ಗಾ ವಿ.ವಿ.ಯ ಅಂಬೇಡ್ಕರ್‌ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಕನ್ಹಯ್ಯ ಕುಮಾರ್‌ ಕಾರ್ಯಕ್ರಮಕ್ಕೆ ಭದ್ರತಾ ಕಾರಣಕ್ಕೆ ಅವಕಾಶ ನಿರಾಕರಿಸಿದ್ದೆ. ಏಕೆಂದರೆ, ವಿ.ವಿ ಆವರಣದಲ್ಲಿ ಸಂಘರ್ಷ ನಡೆದರೆ ವಿದ್ಯಾರ್ಥಿಗಳ ಮೇಲೆ ಬಹಳ ಪರಿಣಾಮ ಬೀರುತ್ತದೆ.

–ಪ್ರೊ.‍ಪರಿಮಳಾ ಅಂಬೇಕರ್‌, ಹಿಂದಿ ವಿಭಾಗದ ಮುಖ್ಯಸ್ಥೆ

ಗುಲಬರ್ಗಾ ವಿ.ವಿ. ಆವರಣದಲ್ಲಿ ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಿದ್ದೆವು. ಅಲ್ಲದೇ, ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾದಾಗಲೂ ಅವಕಾಶ ಸಿಕ್ಕಿಲ್ಲ. ಹೀಗಾಗಿ, ಅಲ್ಲಿ ಸದ್ಯಕ್ಕೆ ಯಾವುದೇ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಕೆಲವೇ ದಿನಗಳಲ್ಲಿ ವಿ.ವಿ.ಯಲ್ಲಿಯೂ ಚಟುವಟಿಕೆ ನಡೆಸಲಿದ್ದೇವೆ.

–ರೇವಣಸಿದ್ದ ಜಾಡರ, ಎಬಿವಿಪಿ ಮುಖಂಡ

ಕನ್ಹಯ್ಯಕುಮಾರ್‌ ಅವರ ಉಪನ್ಯಾಸಕ್ಕೆ ಅನುಮತಿ ನೀಡಿದ ವಿಶ್ವವಿದ್ಯಾಲಯ, ನಂತರ ಸರ್ಕಾರದ ಸೂಚನೆಯ ಬಳಿಕ ಹಿಂದಕ್ಕೆ ಪಡೆಯಿತು. ಇದು ಪ್ರಜಾತಂತ್ರಕ್ಕೆ ವಿರುದ್ಧ. ವಿಶ್ವವಿದ್ಯಾಲಯ ಅಂದ ಮೇಲೆ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ಸಿಗಬೇಕು. ಶುಲ್ಕ ಹೆಚ್ಚಳದ ವಿರುದ್ಧ ಹೋರಾಟ ಅನಿವಾರ್ಯ.  

–ಹಣಮಂತ ಎಚ್‌.ಎಸ್., ಜಿಲ್ಲಾ ಅಧ್ಯಕ್ಷ, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ

 

ಮಂಗಳೂರು ವಿಶ್ವವಿದ್ಯಾಲಯ
 
ಈಚಿನ ದಿನಗಳಲ್ಲಿ ದೇಶದಲ್ಲೇ ಕನಿಷ್ಠ ವಿಷಯಗಳು ಆದ್ಯತೆಯಾಗುತ್ತಿವೆ. ಆದ್ಯತೆ ವಿಷಯಗಳು ಕನಿಷ್ಠವಾಗುತ್ತಿವೆ. ಇದೇ ದೊಡ್ಡ ಸಮಸ್ಯೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಸಂವಾದಗಳು ನಡೆದಿವೆ. ಆದರೆ, ಸಂಘರ್ಷಗಳು ವಿರಳಾತಿವಿರಳ. ಯಾವುದೇ ಒಂದು ವಿಚಾರವು ಅಂತಿಮ ಘಟ್ಟಕ್ಕೆ ಹೋಗಿ ಹೋರಾಟದ ರೂಪ ಪಡೆದ ನಿದರ್ಶನಗಳಿಲ್ಲ. 

–ಪಿ.ಎಲ್. ಧರ್ಮ, ಪ್ರಾಧ್ಯಾಪಕ, ಮಂಗಳೂರು ವಿಶ್ವವಿದ್ಯಾಲಯ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ವೈಚಾರಿಕವಾಗಿ ಕಟ್ಟುವ ಕೆಲಸ ನಡೆದಿತ್ತು. ಆದರೆ, ಅದು ಸಂಘಟನಾತ್ಮಕ ರೂಪ ಪಡೆದುಕೊಂಡಿಲ್ಲ. ಅಲ್ಲದೇ, ಅವುಗಳು ಸಂವಾದದ ರೂಪದಲ್ಲಿ ನಡೆಯುತ್ತಿವೆ. ಯಾರೂ ಸಂಘರ್ಷಕ್ಕೆ ಹೋಗುತ್ತಿಲ್ಲ. ವಿಭಿನ್ನ ನಿಲುವಿನವರು ಒಂದೇ ವೇದಿಕೆ ಹಂಚಿಕೊಳ್ಳುವ ಸಹನೆ ಇದೆ. ಇಲ್ಲಿ ಭಿನ್ನಾಭಿಪ್ರಾಯಗಳ ಮಧ್ಯೆಯೂ ಸಾಮರಸ್ಯದ ಕಾರಣ ಅಂತಹ ಸಂಘರ್ಷದ ವಾತಾವರಣ ಇಲ್ಲ.

–ಧನಂಜಯ ಕುಂಬ್ಳೆ, ಪ್ರಾಧ್ಯಾಪಕ

ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ವ್ಯಕ್ತಿಗತ ಸೈದ್ಧಾಂತಿಕ ನಿಲುವುಗಳು ಸಂಘಟನಾತ್ಮಕ ರೂಪಕ್ಕೆ ಬರಲಿಲ್ಲ. ಹೀಗಾಗಿ, ಪೂರ್ಣ ಪ್ರಮಾಣದ ಅಸ್ತಿತ್ವ ಪಡೆಯದ ಪರಿಣಾಮ ಹೋರಾಟಗಳು ನಡೆದಿಲ್ಲ. ಅಲ್ಲದೇ, ಆಡಳಿತಾತ್ಮಕ ಬಲವೂ ಹೋರಾಟಗಾರರಿಗೆ ಸಿಗಲಿಲ್ಲ. ಏನಿದ್ದರೂ, ವಿಚಾರ ವಿನಿಮಯ, ಚರ್ಚೆ ಹಾಗೂ ಸಂವಾದಗಳಲ್ಲೇ ಗೊಂದಲಗಳು ಬಗೆಹರಿದು ಹೋಗುತ್ತಿವೆ.

–ಕೇಶವ ಬಂಗೇರ, ವಿಭಾಗೀಯ ಪ್ರಮುಖ, ಎಬಿವಿಪಿ

 ವೈಚಾರಿಕ, ಸೈದ್ಧಾಂತಿಕ ಗಟ್ಟಿ ನಿಲುವು ಅಥವಾ ಚರ್ಚೆಗಳ ಗಂಭೀರ ಸ್ವರೂಪಗಳನ್ನು ಮಂಗಳೂರು ವಿಶ್ವವಿದ್ಯಾಲಯ ಕಂಡಿಲ್ಲ. ಆ ರೀತಿಯಾಗಿ ಪರಿಗಣಿಸಿದರೆ, ಒಂದು ರೀತಿಯಲ್ಲಿ ಸಪ್ಪೆ ಚರ್ಚೆಗಳೇ ನಡೆಯುತ್ತವೆ. ಒಂದೂವರೆ ದಶಕದ ಹಿಂದೆ ಗಟ್ಟಿ ನಿಲುವಿನ ಪ್ರಾಧ್ಯಾಪಕರಿದ್ದು, ದೃಢ ನಿಲುವುಗಳು ವ್ಯಕ್ತವಾಗುತ್ತಿದ್ದವು. ಅದರೆ, ನಾವು ಉತ್ತರ ಭಾರತದಲ್ಲಿ ಕಂಡ ಹೋರಾಟಗಳು ಇಲ್ಲಿಲ್ಲ. ಮೈಸೂರಿನಲ್ಲಿ ನಡೆಯುವಂತಹ ಚರ್ಚೆಗಳೂ ಇಲ್ಲ.

–ಮುನೀರ್ ಕಾಟಿಪಳ್ಳ, ರಾಜ್ಯ ಘಟಕದ ಅಧ್ಯಕ್ಷ, ಡಿವೈಎಫ್‌ಐ

 

ಮೈಸೂರು ವಿಶ್ವವಿದ್ಯಾಲಯ

ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆದರೆ, ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಳ್ಳುವಷ್ಟು ಭಿನ್ನತೆ ಕಾಣಿಸುವುದಿಲ್ಲ. ಎಬಿವಿಪಿ ಅಲ್ಲದೆ ಇತರ ಸಂಘಟನೆಗಳೂ ವಿಶ್ವವಿದ್ಯಾಲಯದಲ್ಲಿ ಸಕ್ರಿಯವಾಗಿವೆ. ಸಂಘಟನೆಗಳು ಅವುಗಳ ಪಾಡಿಗೆ ಕಾರ್ಯಕ್ರಮ ನಡೆಸುತ್ತಿವೆ.  

–ಮನ್ಮಥ್, ಎಬಿವಿಪಿ ಪ್ರಮುಖ್

ವಿಶ್ವವಿದ್ಯಾಲಯಗಳಲ್ಲಿ ಸೈದ್ಧಾಂತಿಕ ಭಿನ್ನತೆಗಳು ಈಗಲೂ ಇವೆ. ವಿಶ್ವವಿದ್ಯಾಲಯ ಎಂದರೆ, ಅಲ್ಲಿ ಬೇರೆ ಬೇರೆ ವಾದಗಳನ್ನು ಒಪ್ಪುವವರು ಇರುತ್ತಾರೆ. ಅದು ನಮ್ಮ ಕಲಿಕೆಯ ಒಂದು ಭಾಗ. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಅಧ್ಯಯನ ವಿಷಯಗಳಲ್ಲಿ ಬರುವ ಕೆಲವೊಂದು ವಿಚಾರಗಳು, ಸಿದ್ಧಾಂತಗಳಿಗೆ ವಿದ್ಯಾರ್ಥಿಗಳು ಆಕರ್ಷಿತರಾಗಿ ಆ ವಾದದ ಪರವಾಗಿ ಕೆಲಸ ಮಾಡುವುದು ಸಹಜ. 

–ವಸಂತ್‌ ಕಲಾಲ್, ಎಸ್‌ಎಫ್ಐ ಮುಖಂಡ

ಕೆಲವು ವ್ಯಕ್ತಿಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ವೈಯಕ್ತಿಕ ಹಿತಾಸಕ್ತಿ, ಲಾಭಕ್ಕಾಗಿ ಬಳಸಿಕೊಳ್ಳುವರು. ಎಡಪಂಥೀಯ ವಿಚಾರಧಾರೆಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳು ದಲಿತ ಸಮುದಾಯದ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವರು. ಸೈದ್ಧಾಂತಿಕ ವಿಚಾರದಲ್ಲಿ ಎಬಿವಿಪಿ ಯಾವುದೇ ಭಿನ್ನಾಬಿಪ್ರಾಯ ಮಾಡಿಲ್ಲ.  

–ಡಾ.ದಾಮೋದರ್‌, ಸಿಂಡಿಕೇಟ್‌ ಸದಸ್ಯ

ವಿ.ವಿಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಢಾಳಾಗಿ ಕಾಣಿಸುತ್ತಿಲ್ಲ. ವಿದ್ಯಾರ್ಥಿಗಳು ಅಥವಾ ಬೋಧಕರಲ್ಲಿ ವೈಯಕ್ತಿಕವಾಗಿ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಅದು ಎದ್ದು ಕಾಣಿಸುವಷ್ಟರ ಮಟ್ಟಿಗೆ ಇಲ್ಲ. 20 ವರ್ಷಗಳ ಹಿಂದೆ ಇಂತಹ ಭಿನ್ನತೆ ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ಆದರೆ ಇಂದಿನ ತಲೆಮಾರಿನ ವಿದ್ಯಾರ್ಥಿಗಳು ಇಂತಹ ವಿಷಯಗಳ ಬಗ್ಗೆ ಅಷ್ಟೊಂದು ಒತ್ತುಕೊಟ್ಟಂತೆ ಕಾಣುವುದಿಲ್ಲ.

–ಪ್ರೊ.ಡಿ.ಆನಂದ್, ಪ್ರಾಧ್ಯಾಪಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು