ಸೋಮವಾರ, ಸೆಪ್ಟೆಂಬರ್ 20, 2021
22 °C
ಪ್ರಯೋಗಾಲಯದಲ್ಲಿ ಸ್ಫೋಟ ಪ್ರಕರಣ l ಗ್ರಾನೈಟ್‌ ಸೀಳುವ ಪ್ರಯೋಗ

ಐಐಎಸ್‌ಸಿ ಸಿಲಿಂಡರ್ ಸ್ಫೋಟ: ತಪ್ಪು ಲೆಕ್ಕಾಚಾರದಿಂದ ಅನಾಹುತ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಜಗತ್ತಿನಲ್ಲೇ ಕ್ರಾಂತಿಕಾರಕ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಹಗಲಿರುಳು ಶ್ರಮಿಸುತ್ತಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳ ತಪ್ಪು ಲೆಕ್ಕಾಚಾರವೇ ಬುಧವಾರ ನಡೆದ ಅನಾಹುತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಶಾಕ್‌ ವೇವ್ಸ್ ಬಳಸಿ ಗ್ರಾನೈಟ್‌ ಶಿಲೆ ಸೀಳುವ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಈ ಸಂಶೋಧನಾ ವಿದ್ಯಾರ್ಥಿಗಳ ತಂಡ ನಿರತವಾಗಿತ್ತು. ಈ ತಂತ್ರಜ್ಞಾನ ಯಶಸ್ವಿಯಾಗಿದ್ದರೆ, ಗ್ರಾನೈಟ್‌ ಅಲ್ಲದೆ ಇತರ ಬಗೆಯ ಗಣಿಗಾರಿಕೆ ಕ್ಷೇತ್ರದಲ್ಲೂ ಕ್ರಾಂತಿಕಾರಿ ತಂತ್ರಜ್ಞಾನ ಎನಿಸಿಕೊಳ್ಳುತ್ತಿತ್ತು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಈ ಸಂಶೋಧನೆಯೇ ಅತ್ಯಂತ ಅಪರೂಪದ್ದು. ಮಂಗಳವಾರವೂ ಇಂತಹದ್ದೇ ಪ್ರಯೋಗ ನಡೆಸಿದ್ದರು. ಆಗ ಸಿಕ್ಕ ಯಶಸ್ಸಿನಿಂದ ಸಂಶೋಧನಾ ವಿದ್ಯಾರ್ಥಿಗಳು ಸಂತಸದಿಂದ ಬೀಗಿದ್ದರು. ಅದು ಅನಿರೀಕ್ಷಿತವಾಗಿ ಸಿಕ್ಕ ಫಲಿತಾಂಶ ಆಗಿರಲಿಕ್ಕೂ ಸಾಕು. ಆದರೆ ನಿನ್ನೆ (ಗುರುವಾರ) ಪ್ರಯೋಗಾಲಯದಲ್ಲಿ ತಪ್ಪು ಲೆಕ್ಕಾಚಾರದಿಂದ ಸಿಲಿಂಡರ್‌ ಸ್ಫೋಟ ಅಗಿದೆ. ಒಳಗೆ ನಾಲ್ವರು ಮಾತ್ರ ಇದ್ದರು. ಏನಾಗಿತ್ತು ಎಂಬುದು ಅವರಿಗೆ ಮಾತ್ರ ಗೊತ್ತಿದೆ. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಇದ್ದಾರೆ. ಇವರು ಗುಣಮುಖರಾದ ಬಳಿಕವಷ್ಟೇ ವಾಸ್ತವ ಸಂಗತಿ ಗೊತ್ತಾಗಲಿದೆ’ ಎಂದು ಮೂಲಗಳು ಹೇಳಿವೆ.

ಪ್ರಯೋಗದಲ್ಲಿ ಶಾಕ್‌ ವೇವ್ಸ್‌ ಸೃಷ್ಟಿಸಲು ಹೈಡ್ರೋಜನ್‌ ಅನಿಲ ಬಳಸಲಾಗುತ್ತಿತ್ತು. ಹೀಲಿಯಂ ಅಥವಾ ನೈಟ್ರೊಜನ್‌ ಅನಿಲಗಳಿಂದ ಸ್ಫೋಟ ಆಗುವುದಿಲ್ಲ. ಪ್ರಯೋಗಾಲಯದಲ್ಲಿ ಹೈಡ್ರೋಜನ್‌ ಅನಿಲ ಬಿಟ್ಟರೆ ಬೇರೆ ಯಾವುದೇ ಉಪಕರಣಗಳನ್ನು ಪ್ರಯೋಗಾಲಯದಲ್ಲಿ ಇಟ್ಟಿರಲಿಲ್ಲ ಎನ್ನಲಾಗಿದೆ.

‘ಪೊಲೀಸ್‌ ಇಲಾಖೆಯ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಪ್ರಯೋಗಾಲಯದಿಂದ ವಸ್ತುಗಳನ್ನು ಒಯ್ದಿದ್ದಾರೆ. ತಜ್ಞರು ನೀಡುವ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದರು.

ಗಣಿಗಾರಿಕೆ ತಂತ್ರಜ್ಞಾನ: ವಿಶ್ವದಲ್ಲಿ ಗಣಿಗಾರಿಕೆ ಕ್ಷೇತ್ರದಲ್ಲಿ ಅತಿ ಹೆಚ್ಚು ಬಂಡವಾಳ ತೊಡಗಿಸಲಾಗುತ್ತಿದೆ. ಆದರೆ, ಗಣಿಗಾರಿಕೆಯಲ್ಲಿ ಕ್ರಾಂತಿಕಾರಿ ತಂತ್ರಜ್ಞಾನದ ಆವಿಷ್ಕಾರಕ್ಕಾಗಿ ಜಗತ್ತಿನ ಹಲವು ದೇಶಗಳ ಪ್ರಯೋಗಾಲಯಗಳಲ್ಲಿ ಪ್ರಯೋಗಗಳು ನಡೆಯುತ್ತಲೇ ಇವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಸೂಪರ್‌ ವೇವ್ಸ್‌ ಟೆಕ್ನಾಲಜೀಸ್‌ ನವೋದ್ಯಮವೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿತ್ತು.

ಸೂಪರ್‌ ವೇವ್ಸ್‌ ನಡೆಸಿದ್ದ ಸಂಶೋಧನೆ ಅತಿ ಅಪರೂಪದ್ದಾಗಿತ್ತು. ಏರೋಸ್ಪೇಸ್‌ ಲ್ಯಾಬೊರೇಟರಿಯಲ್ಲಿ ನವೋದ್ಯಮದಲ್ಲಿ ಅವಕಾಶ ನೀಡಲಾಗಿತ್ತು.

**

‘ಏರೋಸ್ಪೇಸ್‌ ಪ್ರಯೋಗಾಲಯ ಸುರಕ್ಷಿತ’

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ಏರೋಸ್ಪೇಸ್‌ ಪ್ರಯೋಗಾಲಯ ಅತ್ಯಂತ ಸುರಕ್ಷಿತ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಇಲ್ಲಿ ನಾಗರಿಕ ವಿಮಾನ, ಯುದ್ಧ ವಿಮಾನ, ಸೂಪರ್‌ ಸಾನಿಕ್ ವಿಮಾನ, ಹೈಪರ್‌ ಸಾನಿಕ್ ವಿಮಾನ ಮತ್ತು ಬಾಹ್ಯಾಕಾಶಕ್ಕೆ ಕಳುಹಿಸುವ ರಾಕೆಟ್‌ಗಳ ವಿಂಡ್‌ ಟನೆಲ್‌ ಮತ್ತು ಶಾಕ್‌ ಟನೆಲ್‌ ಪರೀಕ್ಷೆ ನಡೆಸಲಾಗುತ್ತದೆ. ಪ್ರಯೋಗಾಲಯ ಸುರಕ್ಷಿತವಲ್ಲದಿದ್ದರೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳು ಪರೀಕ್ಷೆಗೆ ಇಲ್ಲಿಗೆ ಬರುತ್ತಿದ್ದವೆ ?’ ಎಂದೂ ಅವರು ಪ್ರಶ್ನಿಸಿದರು.

ಇದನ್ನೂ ಓದಿ...
​ಐಐಎಸ್‌ಸಿ ಸಿಲಿಂಡರ್ ಸ್ಫೋಟ ಪ್ರಕರಣ: ಸಂಶೋಧಕರ ಎದೆಯಲ್ಲಿ ಸಿಲಿಂಡರ್ ಚೂರು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು