ಶುಕ್ರವಾರ, ಜನವರಿ 27, 2023
26 °C

ವಿಕಾಸಸೌಧಕ್ಕೆ ಕಳಪೆ ಕಲ್ಲುಗಳ ಬಳಕೆ: ತಿಮಿಂಗಿಲ ಬಿಟ್ಟು ಮೀನು ಹಿಡಿದರು!

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿಕಾಸಸೌಧಕ್ಕೆ ಕಳಪೆ ಕಲ್ಲುಗಳನ್ನು ಬಳಸಿದ ಪ್ರಕರಣದಲ್ಲಿ ಉನ್ನತ ಅಧಿಕಾರಿಗಳನ್ನು ಬಿಟ್ಟು, ಅರ್ಧ ಡಜನ್‌ ಕಿರಿಯ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಲಾಗಿದೆ’ ಎಂಬ ಅಸಮಾಧಾನ ಲೋಕೋಪಯೋಗಿ ಇಲಾಖೆಯಲ್ಲಿ ಭುಗಿಲೆದ್ದಿದೆ. 

ಈ ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ಸಂಸ್ಥೆ ಲೋಕೋಪಯೋಗಿ ಇಲಾಖೆಯ 14 ಎಂಜಿನಿಯರ್‌
ಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ, ಇಲಾಖಾ ವಿಚಾರಣೆಗೆ ಸರ್ಕಾರ‌ದ ಅನುಮತಿ ಕೇಳಿತ್ತು. ಇವರ ವಿರುದ್ಧ ದುರ್ನಡತೆ, ಕರ್ತವ್ಯಲೋಪ, ಪ್ರಾಮಾಣಿಕತೆ ಕೊರತೆ ಮುಂತಾದ ಆರೋಪಗಳನ್ನು ಮಾಡಿತ್ತು.

2009ರ ಜನವರಿ 15ರಂದು ಸರ್ಕಾರ ವಿಚಾರಣೆಗೆ ಒಪ್ಪಿಗೆ ನೀಡಿತ್ತು. ಆರು ವರ್ಷಗಳ ಬಳಿಕ (2015ರಲ್ಲಿ) ಮೂವರು ಎಂಜಿನಿಯರ್‌ಗಳ ವಿರುದ್ಧದ ವಿಚಾರಣಾ ಆದೇಶ ಹಿಂಪಡೆಯಿತು. ಇದಕ್ಕೆ ‘ಅವರು ನಿವೃತ್ತಿಯಾಗಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯವಾಗಿದೆ’ ಎಂಬ ಕಾರಣ ನೀಡಿತು.

2009ರಲ್ಲಿ ಆರಂಭವಾದ ವಿಚಾರಣೆ ಪೂರ್ಣಗೊಂಡಿದ್ದು 2019ರಲ್ಲಿ. ‘ವಿಚಾರಣೆಗೆ 10 ವರ್ಷ ಹಿಡಿಯಿತು’ ಎಂದು ಲೋಕಾಯುಕ್ತ ಹೇಳಿದೆ. ಆದರೆ, ವಿಳಂಬಕ್ಕೆ ಕಾರಣ ಕೊಟ್ಟಿಲ್ಲ.

‘ಅರ್ಧ ಡಜನ್‌ ಎಂಜಿನಿಯರ್‌ಗಳ ಮೇಲಿನ ಆರೋಪ ಭಾಗಶಃ ಸಾಬೀತಾಗಿದೆ. ಮಿಕ್ಕವರ ವಿರುದ್ಧದ ಆರೋಪ ಸಾಬೀತುಪಡಿಸಲು ಲೋಕೋಪಯೋಗಿ ಇಲಾಖೆಗೆ ಸಾಧ್ಯವಾಗಿಲ್ಲ’ ಎಂದು ವರದಿ ಅಭಿಪ್ರಾಯಪಟ್ಟಿದೆ. 

ಲೋಕಾಯುಕ್ತ ವರದಿಯಲ್ಲಿ ಭಾಗಶಃ ತಪ್ಪಿತಸ್ಥರು ಎಂದು ಹೆಸರಿಸಲಾಗಿರುವ ಅಧಿಕಾರಿಗಳು ವಿಚಾರಣಾ ಅಧಿಕಾರಿ ಮುಂದೆ ನೀಡಿರುವ ಹೇಳಿಕೆಯಲ್ಲಿ, ‘ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ವಿಕಾಸಸೌಧದ ಕಾಮಗಾರಿ ಮುಂದುವರಿದರೆ ಕಟ್ಟಡದ ಬಾಳಿಕೆ ಮತ್ತು ಭದ್ರತೆಗೆ ಧಕ್ಕೆಯಾಗಲಿದೆ ಎಂಬ ಉದ್ದೇಶದಿಂದ ಮಾರ್ಪಾಡು ಮಾಡಲಾಯಿತು. ಇದಕ್ಕೆ ಉನ್ನತಾಧಿಕಾರ ಸಮಿತಿಯ ಅನುಮೋದನೆ ಪಡೆಯಲಾಯಿತು. ಎಂದಿದ್ದಾರೆ. ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ. ನಾಗರಾಜ ಇಂತಹದೇ ಹೇಳಿಕೆ ನೀಡಿದ್ದಾರೆ,  ವಸ್ತುಸ್ಥಿತಿ ಹೀಗಿದ್ದರೂ ಆರು ಎಂಜಿನಿಯರ್‌ಗಳನ್ನು ಮಾತ್ರ ಹೊಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು