ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಹಾ ಮಾರುತ್ತಿದ್ದವನನ್ನೇ ನಿರ್ದೇಶಕನನ್ನಾಗಿ ಮಾಡಿದ !

7 ನಿರ್ದೇಶಕರ ಮನೆ– ಕಚೇರಿ ಮೇಲೆ ಎಸ್‌ಐಟಿ ದಾಳಿ
Last Updated 15 ಜೂನ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಂಎ ಸಮೂಹ’ ಕಂಪನಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ನಿರ್ದೇಶಕನೊಬ್ಬ, ಶಿವಾಜಿನಗರ ಬಸ್‌ ನಿಲ್ದಾಣದ ಬಳಿ ಚಹಾ ಮಾರಿ ಜೀವನ ಸಾಗಿಸುತ್ತಿದ್ದ ಎಂಬ ಸಂಗತಿ ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.

‘ತನ್ನ ವ್ಯವಹಾರ ಬೇರೆ ಯಾರಿಗೂ ಗೊತ್ತಾಗಬಾರದು ಎಂದು ಯೋಚಿಸುತ್ತಿದ್ದ ಮನ್ಸೂರ್ ಖಾನ್, ಚಹಾ ಮಾರುತ್ತಿದ್ದ ವ್ಯಕ್ತಿಯನ್ನೇ ನಿರ್ದೇಶಕನನ್ನಾಗಿ ಮಾಡಿಕೊಂಡಿದ್ದ. ತನ್ನ ಜವಾಬ್ದಾರಿ ಏನು ಎಂಬುದು ಆ ನಿರ್ದೇಶಕನಿಗೆ ಗೊತ್ತಿಲ್ಲ. ಬಂಧನದ ಬಳಿಕವೇ ಆತ ಹೇಳಿಕೆ ನೀಡಿದ್ದಾನೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘2006ರಲ್ಲಿ ಕಂಪನಿ ಆರಂಭಿಸಿದ್ದ ಮನ್ಸೂರ್, ಶಿವಾಜಿನಗರ ಬಸ್ ನಿಲ್ದಾಣ ಬಳಿ ಚಹಾ ಕುಡಿಯಲು ಹೋಗುತ್ತಿದ್ದ. ಅಲ್ಲಿಯೇ ಮಗನ ಜೊತೆ ಚಹಾ ಮಾರುತ್ತಿದ್ದ ವ್ಯಕ್ತಿಯ ಪರಿಚಯ ಆತನಿಗೆ ಆಗಿತ್ತು. ತನ್ನ ಕಂಪನಿ ಬಗ್ಗೆ ಹೇಳಿ ಹಣ ಹೂಡಿಕೆಯನ್ನು ಮಾಡಿಸಿಕೊಂಡಿದ್ದ. ಅಂದಿನಿಂದ ಅವರಿಬ್ಬರ ನಡುವೆ ಒಡನಾಟ ಬೆಳೆದಿತ್ತು’

‘ಕಂಪನಿ ಆಡಳಿತ ಮಂಡಳಿ ರಚಿಸುವಾಗಲೂ ಆ ವ್ಯಕ್ತಿಯನ್ನೇ ಮನ್ಸೂರ್, ನಿರ್ದೇಶಕನನ್ನಾಗಿ ಮಾಡಿದ್ದ. ಅದಾದ ನಂತರವೂ ಆ ವ್ಯಕ್ತಿ, ಚಹಾ ಮಾರಾಟ ಮುಂದುವರಿಸಿದ್ದ. ಆಗಾಗ ಕಚೇರಿಗೆ ಬಂದು ಸಭೆಗಳಲ್ಲಿ ಪಾಲ್ಗೊಂಡು ವಾಪಸ್ ಹೋಗುತ್ತಿದ್ದ. ಪ್ರಕರಣದಲ್ಲಿ ತನ್ನದೇನು ತಪ್ಪಿಲ್ಲವೆಂದು ಆ ನಿರ್ದೇಶಕ ಹೇಳುತ್ತಿದ್ದಾನೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ನಿರ್ದೇಶಕರ ಮನೆ, ಕಚೇರಿ ಮೇಲೆ ದಾಳಿ: ವಂಚನೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ಕಂಪನಿಯ ನಿರ್ದೇಶಕರ ಮನೆ ಹಾಗೂ ಕಚೇರಿಗಳ ಮೇಲೆ ಶನಿವಾರ ದಾಳಿ ಮಾಡಿದರು.

’ನಿರ್ದೇಶಕರಾದ ನಿಜಾಮುದ್ದೀನ್ ಖಾನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ಅರ್ಷದ್‌ ಖಾನ್, ಅನ್ಸರ್ ಪಾಷಾ, ವಾಸೀಂ ಹಾಗೂ ದಾದಾಪೀರ್ ಅವರನ್ನು ಕೆಲ ದಿನಗಳ ಹಿಂದೆಯೇ ಬಂಧಿಸಿ, ಕಸ್ಟಡಿಗೆ ಪಡೆಯಲಾಗಿದೆ. ಅವರ ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ಕಲೆಹಾಕಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಶಿವಾಜಿನಗರ, ಫ್ರೇಜರ್‌ ಟೌನ್, ಕೆ.ಆರ್.ಪುರದಲ್ಲಿರುವ ನಿರ್ದೇಶಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿ ಆಸ್ತಿಗೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗಿದೆ’ ಎಂದು ಮೂಲಗಳು ವಿವರಿಸಿವೆ.

‘ಬಿಟ್‌ ಕಾಯಿನ್‌’ ದಂಧೆಯಲ್ಲೂ ಖಾನ್ !

ಮಹಮದ್ ಮನ್ಸೂರ್ ಖಾನ್, ‘ಬಿಟ್‌ ಕಾಯಿನ್‌’ ದಂಧೆಯಲ್ಲೂ ತೊಡಗಿಸಿಕೊಂಡಿದ್ದ ಎಂಬ ಅನುಮಾನ ಎಸ್‌ಐಟಿಗೆ ಬಂದಿದೆ.

‘ಐಎಂಎ ಸಮೂಹ’ ಕಂಪನಿ ಹೆಸರಿನಲ್ಲಿ ಸಂಗ್ರಹಿಸಿದ್ದ ಹಣವನ್ನು ಖಾನ್, ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿದ್ದ. ಅದರಿಂದಲೂ ಆತ ಕೋಟ್ಯಂತರ ರೂಪಾಯಿ ವಹಿವಾಟು ಮಾಡುತ್ತಿದ್ದ. ಇತ್ತೀಚೆಗೆ ಕೇಂದ್ರ ಸರ್ಕಾರ, ಬಿಟ್ ಕಾಯಿನ್ ವ್ಯವಹಾರಕ್ಕೆ ನಿಷೇಧ ಹೇರಿದ್ದು ಆತನ ಮೇಲೆ ಪರಿಣಾಮ ಬೀರಿತ್ತು. ಈ ಬಗ್ಗೆ ನಿರ್ದೇಶಕರೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

‘ಡಿಜಿಟಲ್ ಕರೆನ್ಸಿಯಾದ ಬಿಟ್‌ ಕಾಯಿನ್‌ ಮೌಲ್ಯವು ಷೇರಿನ ರೀತಿಯಲ್ಲೇ ಇಳಿಕೆ ಹಾಗೂ ಏರಿಕೆ ಆಗುತ್ತದೆ. ಈ ಬಿಟ್ ಕಾಯಿನ್ ವಹಿವಾಟು ಮಾಡುವುದರಲ್ಲಿ ಮನ್ಸೂರ್ ಖಾನ್ ನಿಪುಣನಾಗಿದ್ದ’ ಎಂದು ಮೂಲಗಳು ಹೇಳಿವೆ.

‘ಐಎಂಎ’ ಪ್ರಕರಣ: ಪೊಲೀಸರು ಮೈಮರೆತರೇ?

‘ಐಎಂಎ ಜ್ಯುವೆಲ್ಸ್‌ ಕಂಪನಿ ಸಂಸ್ಥಾಪಕ ಮಹಮದ್‌ ಮನ್ಸೂರ್‌ ಖಾನ್‌ ವಿರುದ್ಧ ಪೊಲೀಸರು ಸಕಾಲಿಕ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದರೇ?’ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಎರಡು ಸಂದರ್ಭಗಳಲ್ಲಿ ಮನ್ಸೂರ್‌ ಖಾನ್‌ ಅವರನ್ನು ವಿಚಾರಣೆಗೆ ಒಳಪಡಿಸಿ, ವಶಕ್ಕೆ ಪಡೆಯಲು ಅವಕಾಶ ಇತ್ತು. ಪೊಲೀಸರು ಈ ಅವಕಾಶ ಕಳೆದುಕೊಂಡರು. ಇದರಿಂದ ಆರೋಪಿ ಪರಾರಿಯಾಗಲು ಅನುಕೂಲವಾಯಿತು ಎಂಬ ಆಕ್ಷೇಪಗಳೂ ಕೇಳಿ ಬಂದಿವೆ.

ಐಎಂಎ ಕಂಪನಿ ಹಣಕಾಸು ವ್ಯವಹಾರ ಕುರಿತು ಪರಿಶೀಲಿಸುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ರಾಜು ಸಿಸಿಬಿ ಪೊಲೀಸರಿಗೆ ಸೂಚಿಸಿದ್ದರು. ಅದರಂತೆ ಸಿಸಿಬಿಯ ಹೆಚ್ಚುವರಿ ಕಮಿಷನರ್‌ ಅಲೋಕ್‌ ಕುಮಾರ್‌ ಕಳೆದ ಮೇ 1ರಂದು ಮನ್ಸೂರ್ ಖಾನ್‌ ಅವರನ್ನುಕರೆದು ಐದು ಗಂಟೆವಿಚಾರಣೆ ನಡೆಸಿದ್ದರು. ದಾಖಲೆಗಳ ಸಮೇತಜೂನ್‌ 6ರಂದು ಪುನಃ ಬರುವಂತೆ ಹೇಳಿದ್ದರು. ವಿಚಾರಣೆಗೆ ಹಾಜರಾಗದೆ ಕೈಕೊಟ್ಟ ಆರೋಪಿ, ಜೂನ್‌ 8ರಂದು ಪರಾರಿಯಾಗಿದ್ದಾನೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆಂಬಿಡೆಂಟ್‌ ಕಂಪನಿ ವಂಚನೆ ಬಯಲಾದ ಬಳಿಕ ಇಂಥ ಕಂಪನಿಗಳ ವಿರುದ್ಧ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಅವರ ನೇತೃತ್ವದಲ್ಲಿ 2018ರ ಜೂನ್‌ನಲ್ಲಿ ದೂರು ಪ್ರಾಧಿಕಾರ ರಚಿಸಿತ್ತು. ಆದರೆ ಯಾವುದೇ ದೂರುಗಳು ಬರಲಿಲ್ಲ. ಈ ವೇಳೆ, ನಾಗರಾಜ್‌ ಅವರು ಪೊಲೀಸ್‌ ಕಮಿಷನರ್‌ಗೆ ಪತ್ರವೊಂದನ್ನು ಬರೆದು ಐಎಂಎ ಜ್ಯುವೆಲ್ಸ್‌ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

‘ಸಿಐಡಿ ಈ ಕಂಪನಿ ವ್ಯವಹಾರವನ್ನು ಈಗಾಗಲೇಪರಿಶೀಲಿಸಿದೆ. ಯಾರೂ ದೂರು ಕೊಡದಿದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ’ ಎಂಬ ಪತ್ರ ಜಿಲ್ಲಾಧಿಕಾರಿಗಳ ಕೈಸೇರಿತು. ಆನಂತರ ಪ್ರಕರಣ ತಣ್ಣಗಾಯಿತು. ಪೊಲೀಸರು ಆ ಸಮಯದಲ್ಲೇ ಎಚ್ಚೆತ್ತುಕೊಂಡಿದ್ದರೆ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆ ಮಾಡಬಹುದಿತ್ತು ಎಂದೂ ಹೇಳಲಾಗುತ್ತಿದೆ.

ಕ್ರಮಕ್ಕೆ ಅವಕಾಶವಿರಲಿಲ್ಲ: ಐಎಂಎ ಕಂಪನಿ ವಿರುದ್ಧ ನಿರ್ದಿಷ್ಟ ದೂರುಗಳಿಲ್ಲದಿದ್ದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 109ರ ಅನ್ವಯ ದಂಡಾಧಿಕಾರಿಗಳು ಮಾತ್ರ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಅಲ್ಲದೆ, ಈ ಅಧಿಕಾರಿಗಳ ವ್ಯಾಪ್ತಿಯೂ ದೊಡ್ಡದಿರುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಂಬಿಡೆಂಟ್‌ನಲ್ಲೂ ಹಣ ಹೂಡಿದ್ದರು!

‘ಐಎಂಎ ಜ್ಯುವೆಲ್ಸ್‌’ ಕಂಪನಿಯಿಂದ ವಂಚನೆಗೆ ಒಳಗಾಗಿರುವ ಬಹುತೇಕ ಷೇರುದಾರರು ‘ಆಂಬಿಡೆಂಟ್‌’ ಕಂಪನಿಯಲ್ಲೂ ಹಣ ಹೂಡಿಕೆ ಮಾಡಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಆಂಬಿಡೆಂಟ್‌’ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಶೇ 60ರಿಂದ 70ರಷ್ಟು ಜನ ಐಎಂಎ ಜ್ಯುವೆಲ್ಸ್‌ನಲ್ಲೂ ಹಣ ಹೂಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT