ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ವಿಜ್ಞಾನದ ಆಸರೆ: ಇಂದಿನಿಂದ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌

Last Updated 2 ಜನವರಿ 2020, 21:40 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಕ್ಷೇತ್ರದ ಸಂಕಷ್ಟಗಳು ಹವಾಮಾನ ಬದಲಾವಣೆಯ ಕರಾಳ ಪರಿಣಾಮ, ವಿವಿಧ ಆರೋಗ್ಯಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕಲ್ಪಿಸುವ ದಿಸೆಯಲ್ಲಿ ನಡೆದಿರುವ ವೈಜ್ಞಾನಿಕ ಸಂಶೋಧನೆಗಳ ಮೇಲೆ ಬೆಳಕು ಚೆಲ್ಲುವ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ಗೆ ಶುಕ್ರವಾರ ಚಾಲನೆ ಸಿಗಲಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ ವಿಜ್ಞಾನ ಕಾಂಗ್ರೆಸ್‌ನ ಘೋಷ ವಾಕ್ಯ ‘ವಿಜ್ಞಾನ, ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ’. ಈ ಕ್ಷೇತದಲ್ಲಿ ನಡೆದಿರುವ ಸಂಶೋಧನೆಗಳ ಜತೆಗೆ ತಳಮಟ್ಟದಲ್ಲಿ ಅದರ ಅನ್ವಯದ ಬಗೆಗೂ ವಿಜ್ಞಾನಿಗಳ ಮಧ್ಯೆ ಚರ್ಚೆ ಮತ್ತು ವಿಚಾರ ವಿನಿಮಯ ನಡೆಯಲಿದೆ.

ಪ್ರಧಾನಮಂತ್ರಿ ನರೇಂದ್ರಮೋದಿ ಶುಕ್ರವಾರ ಬೆಳಿಗ್ಗೆ 10 ಕ್ಕೆ ವಿಜ್ಞಾನ ಕಾಂಗ್ರೆಸ್‌ಗೆ ಚಾಲನೆ ನೀಡಲಿದ್ದಾರೆ.ಐದು ದಿನಗಳ ಈ ಕಾರ್ಯಕ್ರಮದಲ್ಲಿ 15,000 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. 150 ಕ್ಕೂ ಹೆಚ್ಚು ಸಂಘ– ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಅವುಗಳಲ್ಲಿ 24 ದೇಶಗಳ 74 ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನೊಬೆಲ್‌ ಪುರಸ್ಕೃತ ವಿಜ್ಞಾನಿಗಳಾದ ಜರ್ಮನಿಯ ಪ್ರೊ. ಸ್ಟೀಫನ್‌ ಹೆಲ್‌, ಇಸ್ರೇಲ್‌ನ ಪ್ರೊ. ಅಡಾ ಇಯೊನಾಥ್ ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ.

ರೈತ ವಿಜ್ಞಾನ ಕಾಂಗ್ರೆಸ್‌: ದೇಶದ ರೈತರ ಸಂಕಷ್ಟಗಳು ಮತ್ತು ಅವರ ಯಶೋಗಾಥೆಯನ್ನು ಹಂಚಿಕೊಳ್ಳಲು ಭಾರತೀಯ ವಿಜ್ಞಾನ ಕಾಂಗ್ರೆಸ್‌ ಇದೇ ಮೊದಲ ಬಾರಿಗೆ ವೇದಿಕೆಯನ್ನು ಕಲ್ಪಿಸಿದೆ. ಇದರಲ್ಲಿ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದ್ದು, 10 ಮಂದಿ ಪ್ರಯೋಗಶೀಲ ರೈತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.ಮಹಿಳಾ ವಿಜ್ಞಾನ ಕಾಂಗ್ರೆಸ್‌ ಮತ್ತು ಮಕ್ಕಳ ವಿಜ್ಞಾನ ಕಾಂಗ್ರೆಸ್‌ ಕೂಡ ನಡೆಯಲಿದೆ.

ಕ್ಯಾನ್ಸರ್‌ ಔಷಧದ ಸಂಶೋಧನೆಗಿರುವ ಸವಾಲುಗಳು ಮತ್ತು ಅವಕಾಶಗಳು, ಕೃತಕ ಬುದ್ಧಿಮತ್ತೆ, ವೈದ್ಯಕೀಯ ತಂತ್ರಜ್ಞಾನ, ಆರೋಗ್ಯ ಆರೈಕೆ, ಪರಿಸರ ಮತ್ತು ಇಂಧನ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನ ಬಳಕೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಬಂಜೆತನ, ಪಾರ್ಕಿನ್ಸನ್‌ ಕಾಯಿಲೆ, ಹವಾಮಾನ ಬದಲಾವಣೆಯಿಂದ ಕೃಷಿ ಕ್ಷೇತ್ರದಲ್ಲಿ ಮತ್ತು ಆಹಾರ ಭದ್ರತೆಯ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ದೇಶ– ವಿದೇಶಗಳ ವಿಜ್ಞಾನಿಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT