ಸೋಮವಾರ, ಜನವರಿ 27, 2020
27 °C
ಆವಿಷ್ಕಾರ, ಸಂಶೋಧನೆಗಳಿಗಾಗಿ ನಾಲ್ಕು ಮಂತ್ರ

ಸಮೃದ್ಧ ದೇಶಕ್ಕೆ ವಿಜ್ಞಾನಿಗಳ ನೇತೃತ್ವ: ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿನೂತನ ಆವಿಷ್ಕಾರ ಮತ್ತು ಸಂಶೋಧನೆಗಳ ಮೂಲಕ ದೇಶವನ್ನು ಸಮೃದ್ಧಿಯತ್ತ ಮುನ್ನಡೆಸಲು ವಿಜ್ಞಾನಿಗಳೇ ನೇತೃತ್ವವಹಿಸಬೇಕು’ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಮನವಿ ಮಾಡಿದ್ದಾರೆ.

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಶುಕ್ರವಾರ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಉದ್ಘಾಟಿಸಿ, ‘ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಂಶೋಧನೆ ಮತ್ತು ಸರಳ ತಂತ್ರಜ್ಞಾನಗಳ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ಆವಿಷ್ಕಾರ, ಹಕ್ಕುಸ್ವಾಮ್ಯ, ಉತ್ಪಾದನೆ ಮತ್ತು ಸಮೃದ್ಧಿ ಎನ್ನುವುದು ವಿಜ್ಞಾನಿಗಳಿಗೆ ಮಂತ್ರವಾಗಬೇಕು. ಇವು ದೇಶವನ್ನು ಮುನ್ನಡೆಸುವ ನಾಲ್ಕು ಮಹಾನ್‌ ಹೆಜ್ಜೆಗಳು. ನೀವು ಹೊಸ ಆವಿಷ್ಕಾರಗಳನ್ನು ಮಾಡಿದರೆ, ಅದಕ್ಕೆ ನಾವು ಪೇಟೆಂಟ್‌ ನೀಡುತ್ತೇವೆ. ಇದನ್ನು ಆಧರಿಸಿದ ಉತ್ಪನ್ನಗಳ ಉತ್ಪಾದನೆಯ ಮೂಲಕ ದೇಶ ಸಮೃದ್ಧಿಯ ಪಥದಲ್ಲಿ ಸಾಗಬೇಕು’ ಎಂದು ಮೋದಿ ಹೇಳಿದರು.

ಬದಲಾದ ಭಾರತಕ್ಕೆ ಈಗ ಬೇಕಿರುವುದು ತಂತ್ರಜ್ಞಾನ, ತಾರ್ಕಿಕ ಮನೋಧರ್ಮ. ಇದರಿಂದ ಸಾಮಾಜಿಕ, ಆರ್ಥಿಕ ಮತ್ತು ಅಭಿವೃದ್ಧಿಗೆ ಹೊಸ ದಿಕ್ಕು– ದೆಸೆ ನೀಡಬಹುದಾಗಿದೆ. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಡೆ ಯುತ್ತಿರುವ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಬಹು ದೊಡ್ಡದು. ಇದಕ್ಕೆ ಉದಾಹರಣೆ ಎಂದರೆ, ಸ್ಮಾರ್ಟ್‌ಪೋನ್‌. ಇದರ ಮೂಲಕ ಸರ್ಕಾರದ ಜತೆ ಸಂಪರ್ಕ ಸಾಧಿಸುವುದರ ಜತೆಗೆ ಜನರ ಧ್ವನಿ ಸರ್ಕಾರಕ್ಕೂ ಮುಟ್ಟುತ್ತದೆ ಎಂದರು.

ಹಳ್ಳಿಗಳಲ್ಲಿ ರಸ್ತೆ, ಮನೆ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಡೇಟಾ ವಿಜ್ಞಾನ, ಜಿಐಎಸ್‌, ರಿಯಲ್‌ ಟೈಮ್‌ ಮಾನಿಟರಿಂಗ್ ಬಳಸಿ ನಿಗಾ ಇಡಲಾಗುತ್ತಿದೆ. ಇದರಿಂದ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುವುದರ ಜತೆಗೆ, ವೆಚ್ಚವೂ ತಗ್ಗಿದೆ. ಇದು ಸಾಧ್ಯವಾಗಲು ವಿಜ್ಞಾನ ಮತ್ತು ತಂತ್ರಜ್ಞಾನವೇ ಕಾರಣವಾಗಿದೆ ಎಂದು ಮೋದಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ರೈತರು ಡಿಜಿಟಲ್‌ ತಂತ್ರಜ್ಞಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಧ್ಯವರ್ತಿಗಳ ನೆರವಿಲ್ಲದೆ ನೇರ ಮಾರಾಟ ಸಾಧ್ಯವಾಗಿದೆ. ಡಿಜಿ ಟಲ್‌ ಮಾರ್ಕೆಂಟಿಂಗ್‌, ಇ– ಕಾಮರ್ಸ್‌ ಕುರಿತು ಗ್ರಾಮೀಣ ಜನರು ಹೆಚ್ಚಿನ ಅರಿವು ಹೊಂದುತ್ತಿದ್ದಾರೆ. ಹೀಗಾಗಿ ಜನರ ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಿರುತ್ತದೆ ಎಂದರು.

ಗ್ರಾಮೀಣ ಜನರ ಹಲವು ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನವೇ ಉತ್ತರವಾಗಬಲ್ಲದು. ಈ ಪ್ರದೇಶದ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು. ಕಡಿಮೆ ವೆಚ್ಚದ ತಂತ್ರಜ್ಞಾನ ಅಭಿವೃದ್ಧಿಪಡಿಸಿದಾಗ ಅದರಿಂದ ಜನರ ಜೀವನವೂ ಸರಳವಾಗುತ್ತದೆ ಎಂದು ಮೋದಿ ತಿಳಿಸಿದರು.

ವಿಜ್ಞಾನಿಗಳಿಗೆ ಪ್ರಧಾನಿ ಸಲಹೆ
* ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದನ್ನು ತಡೆಯಲು ಸಾಂಪ್ರದಾಯಿಕ ಜ್ಞಾನದ ಬಳಕೆ ಮತ್ತು ಆಧುನಿಕ ಸಾಧನ ಅಭಿವೃದ್ಧಿಗೆ ಸಂಶೋಧನೆ ನಡೆಯಬೇಕು.

* ನಿಫಾ ಮತ್ತು ಕ್ಷಯದಂತಹ ರೋಗಗಳನ್ನು ತೊಡೆದು ಹಾಕಲು ಲಸಿಕೆ ತಯಾರಿಕೆಯಲ್ಲಿ ಭಾರತ ನಾಯಕತ್ವ ವಹಿಸಬೇಕು.

* ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ, ಗ್ರಿಡ್ ನಿರ್ವಹಣೆ, ಬ್ಯಾಟರಿ ಚಾಲಿತ ವಾಹನಗಳು ಕೈಗೆಟುಕುವ ದರಕ್ಕೆ ಸಿಗುವಂತಾಗಬೇಕು.

* ಸಮುದ್ರದಾಳದ ಸಂಪನ್ಮೂಲ ಬಳಕೆಗೆ ಆದ್ಯತೆ ನೀಡಬೇಕು. ವಿಶೇಷವಾಗಿ ಸಮುದ್ರದಾಳದ ಗಣಿಗಾರಿಕೆ ನಮ್ಮದೇ ಆದ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಬೇಕು.

‘2022ಕ್ಕೆ ರೈತರ ಆದಾಯ ದುಪ್ಪಟ್ಟಿಗೆ ಕಾರ್ಯಕ್ರಮ’
ಪ್ರಧಾನಿಯವರ ಕನಸಿನಂತೆ ರಾಜ್ಯದಲ್ಲಿ 2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸಲು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸ್ಥಳೀಯ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶ ಜನರ ಬದುಕು ಹಸನಾಗಲು, ಕೃಷಿ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.

ಮೂರನೇ  ಸ್ಥಾನಕ್ಕೆ ಜಿಗಿದ ಭಾರತ
ವಿಜ್ಞಾನ ಪ್ರಬಂಧ(ಸೈನ್ಸ್‌ ಪೇಪರ್ಸ್‌) ಪ್ರಕಟಣೆಯಲ್ಲಿ ಭಾರತ ಈಗ ವಿಶ್ವದಲ್ಲಿ ಮೂರನೇ ಸ್ಥಾನಕ್ಕೇರಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್‌ ತಿಳಿಸಿದರು.

ಅಲ್ಲದೆ ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ ವಿಶ್ವದಲ್ಲಿ 7 ನೇ ಅತ್ಯುತ್ತಮ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಗಾಇ ಈ ಸ್ಥಾನ ಸಿಕ್ಕಿದೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು