ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದ ಖಾತೆಗೆ ನೂತನ ಶಾಸಕರು, ಸಚಿವರು ಲಾಬಿ

ಬಿಎಸ್‌ವೈಗೆ ಸಂಪುಟ ಕಗ್ಗಂಟು: ಪ್ರಭಾವಿ ಇಲಾಖೆ ತ್ಯಾಗಕ್ಕೆ ಸಚಿವರಿಗೆ ಸೂಚನೆ?
Last Updated 10 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೂ ಮೊದಲೇ ಲಾಭದಾಯಕ ಖಾತೆಗಳ ಮೇಲೆ ಕಣ್ಣಿಟ್ಟಿರುವ ನೂತನ ಶಾಸಕರು ಮತ್ತು ಹಾಲಿ ಸಚಿವರು ಅದಕ್ಕಾಗಿ ತೀವ್ರ ಲಾಬಿ ನಡೆಸಿದ್ದು, ಎಲ್ಲರನ್ನೂ ಸಮಾಧಾನಪ‍ಡಿಸಿ ಸರ್ಕಾರ ಮುನ್ನಡೆಸಬೇಕಾದ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಲುಕಿದ್ದಾರೆ.

ಈ ಮಧ್ಯೆ, ಬಿಜೆಪಿಯ 10 ಕ್ಕೂ ಹೆಚ್ಚು ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದು ಕೂತಿದ್ದಾರೆ. ಸರ್ಕಾರ ಸ್ಪಷ್ಟ ಬಹುಮತ ಪಡೆದರೂ ಹೊಸದಾಗಿ ಉದ್ಭವಿಸಿರುವ ಅಸಮಾಧಾನದ ಹೊಗೆ ಯಡಿಯೂರಪ್ಪ ಅವರಿಗೆ ಸವಾಲಾಗಿ ಪರಿಣಮಿಸಿದೆ. ಇವೆಲ್ಲ ವಿಷಯಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅವರು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ಗೆದ್ದಿರುವ 12 ಶಾಸಕರಲ್ಲಿ 11 ಮಂದಿಗೆ ಸಚಿವ ಸ್ಥಾನಖಾತರಿಯಾಗಿದ್ದರೂ, ಕೆಲವರು ಲಾಭ ತರುವ ಖಾತೆಗಳೇ ಬೇಕೆಂದು ಹಟ ಹಿಡಿದಿದ್ದಾರೆ. ಈ ಹಿಂದೆ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿದ್ದ ಉಮೇಶ ಕತ್ತಿ, ಎ.ರಾಮದಾಸ್‌, ಜಿ.ಎಚ್. ತಿಪ್ಪಾರೆಡ್ಡಿ, ಸಿ.ಪಿ.ಯೋಗೇಶ್ವರ್ ಮುಂತಾದ ಆಕಾಂಕ್ಷಿಗಳು ಮತ್ತೆ ಲಾಬಿ ಆರಂಭಿಸಿದ್ದಾರೆ.

ಮುಖ್ಯಮಂತ್ರಿ ಮತ್ತು ವಿವಿಧ ಸಚಿವರ ಬಳಿ ಹೆಚ್ಚುವರಿಯಾಗಿ ಇರುವ ಖಾತೆಗಳನ್ನು ಸಂಪುಟ ವಿಸ್ತರಣೆ ಬಳಿಕ ಮರು ಹಂಚಿಕೆ ಮಾಡಬೇಕಾಗಿದೆ. ಬೆಂಗಳೂರು ಅಭಿವೃದ್ಧಿ, ಇಂಧನ, ನೀರಾವರಿ, ಲೋಕೋಪಯೋಗಿ, ಗೃಹ, ಸಾರಿಗೆ, ಕಂದಾಯಗಳಂತಹ ಲಾಭದಾಯಕ ಖಾತೆಗಳಿಗೆ ಹೊಸದಾಗಿ ಆಯ್ಕೆ ಆಗಿರುವ ಶಾಸಕರು ಪಟ್ಟು ಹಿಡಿಯುವ ಸಾಧ್ಯತೆ ಇದೆ. ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ್‌, ರಮೇಶ ಜಾರಕಿಹೊಳಿ ಪ್ರಭಾವಿ ಖಾತೆ ಗಳ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ, ಕೆಲವು ಸಚಿವರಿಗೆ ಪ್ರಮುಖ ಖಾತೆಗಳ ತ್ಯಾಗಕ್ಕೆ ಸಿದ್ಧರಾಗಲು ಮುಖ್ಯಮಂತ್ರಿ ಸೂಚಿಸಲಿದ್ದಾರೆ ಎನ್ನಲಾಗಿದೆ.

ಹಾಲಿ ಹಿರಿಯ ಸಚಿವರೂ ಖಾತೆ ಬದಲಾವಣೆಗೆ ಬೇಡಿಕೆ ಮಂಡಿಸಲಿದ್ದಾರೆ. ಆರ್‌.ಅಶೋಕ, ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ ಮೊದಲಾದ ವರು ಆರಂಭದಲ್ಲಿ ತಮ್ಮ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಪ್ರಭಾವಿ ಖಾತೆಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ಹೀಗಾಗಿ ಪ್ರಮುಖ ಸಚಿವರ ಖಾತೆಗಳನ್ನು ಬದಲಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಹೇಳಿವೆ.

ಚುನಾವಣೆಯಲ್ಲಿ ಗೆದ್ದು ಅರ್ಹರಾಗಿರುವ ಶಾಸಕರು ಮಂಗಳವಾರ ರಾತ್ರಿ ಸಭೆ ಸೇರಿ ಚುನಾವಣೆಯಲ್ಲಿ ಸೋತಿರುವ ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ಕಲ್ಪಿಸುವ, ಮುನಿರತ್ನ ಮತ್ತು ಪ್ರತಾಪಗೌಡ ಪಾಟೀಲರ ವಿರುದ್ಧ ದಾಖಲಿಸಿರುವ ಮೊಕದ್ದಮೆ ಕೈಬಿಡುವ ಸಂಬಂಧ ಮುಖ್ಯಮಂತ್ರಿ ಮುಂದೆ ಸಲ್ಲಿಸಬೇಕಾದ ಬೇಡಿಕೆಗಳ ಬಗ್ಗೆ ಚರ್ಚಿಸಿದರು.

ಬಚ್ಚೇಗೌಡ ವಿರುದ್ಧ ಕ್ರಮಕ್ಕೆ ಪಟ್ಟು

ಹೊಸಕೋಟೆಯಲ್ಲಿ ಸೋತಿರುವ ಎಂ.ಟಿ.ಬಿ.ನಾಗರಾಜ್‌ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸೋಲಿನ ಹಿಂದೆ ಸಂಸದ ಬಿ.ಎನ್.ಬಚ್ಚೇಗೌಡ ಅವರ ಕೈವಾಡ ಇದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಸಮಾಧಾನದ ಮಾತುಗಳಿಂದ ತೃಪ್ತರಾಗದೇ ಸಿಟ್ಟಿನಿಂದ ಎದ್ದು ಹೋದರು ಎಂದು ಮೂಲಗಳು ತಿಳಿಸಿವೆ.

ಇದರಿಂದ ಕಸಿವಿಸಿಗೊಂಡ ಯಡಿಯೂರಪ್ಪ ಅವರು, ನಾಗರಾಜ್‌ ನಿವಾಸಕ್ಕೆ ಸಂಜೆ ದೌಡಾಯಿಸಿ ಮಾತುಕತೆ ನಡೆಸಿದರು. ಬಚ್ಚೇಗೌಡರ ವಿಷಯವಾಗಿ ಕೇಂದ್ರಕ್ಕೆ ಸಂಸದೀಯ ಸಮಿತಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು. ‘ಈ ಹಿಂದೆ ನೀವು ಮಂತ್ರಿಯಾಗಿದ್ದಾಗ ಯಾವ ರೀತಿಯ ಹಿರಿತನ ಮತ್ತು ಮಾನ್ಯತೆ ಇತ್ತೋ ಅದನ್ನು ಮುಂದುವರಿಸಲಾಗುವುದು. ಕ್ಷೇತ್ರದಲ್ಲಿ ನಿಮ್ಮ ಮಾತಿಗೆ ಅನುಗುಣವಾಗಿಯೇ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ನಿಮ್ಮ ಅಭಿಪ್ರಾಯ ಪಡೆಯದೇ ಯಾವುದೇ ಕೆಲಸ ನಡೆಯುವುದಿಲ್ಲ’ ಎಂಬ ಭರವಸೆ ನೀಡಿದರು.

ಬಚ್ಚೇಗೌಡ ಸಂಸದರಾಗಿರುವುದರಿಂದ ಅವರ ವಿರುದ್ಧ ಪಕ್ಷದ ಸಂಸದೀಯ ಮಂಡಳಿಯಲ್ಲಿ ಕ್ರಮದ ಬಗ್ಗೆ ತೀರ್ಮಾನಿಸಬೇಕು. ಲೋಕಸಭೆ ಕಲಾಪ ನಡೆದಿರುವುದರಿಂದ ಅದು ಮುಗಿಯುವವರೆಗೆ ಯಾವುದೇ ನಿರ್ಣಯ ಹೊರ ಬೀಳುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಹನಿಟ್ರ್ಯಾಪ್‌’ಗೆ ಬಿದ್ದವರಿಗೆ ಅನುಮಾನ?

ಇತ್ತೀಚೆಗೆ ಬಯಲಿಗೆ ಬಂದ ಹನಿಟ್ರ್ಯಾಪ್‌ನಲ್ಲಿ ಸಿಲುಕಿರುವ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕ್ಷೀಣವಾಗಿದೆ. ಉತ್ತರ ಕರ್ನಾಟಕ ಭಾಗದ ಇಬ್ಬರು ಶಾಸಕರ ಹೆಸರು ಕೇಳಿ ಬಂದಿದ್ದು, ಅವರಿಗೆ ಸಚಿವ ಸ್ಥಾನ ಸಿಕ್ಕರೆ, ಪಕ್ಷಕ್ಕೆ ಮುಜುಗರ ಆಗಬಹುದು ಎಂದು ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಬಿಜೆಪಿ ವರಿಷ್ಠರು ತಮ್ಮ ಮಾತಿಗೆ ಕಟ್ಟು ಬಿದ್ದರೆ, ಕಾಂಗ್ರೆಸ್‌– ಜೆಡಿಎಸ್‌ನಿಂದ ವಲಸೆ ಬಂದು ಶಾಸಕರಾಗಿರುವುದರಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ. ಹನಿಟ್ರ್ಯಾಪ್‌ ಮಾಡಿರುವ ಮೂರು ಗುಂಪುಗಳ ಪೈಕಿ ಒಂದು ಗುಂಪು ಮಾತ್ರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. ಅದರಲ್ಲಿ ಇಬ್ಬರು ಶಾಸಕರು ಹನಿಟ್ರ್ಯಾಪ್‌ಗೆ ಒಳಗಾಗಿರುವ ಮಾಹಿತಿ ಪೊಲೀಸರ ಬಳಿ ಇದೆ ಎನ್ನಲಾಗಿದೆ. ಇವರ ಬಗ್ಗೆ ಯಾವ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ. ಒಂದು ವೇಳೆ ಇವರನ್ನು ಮಂತ್ರಿ ಮಾಡಿದರೆ ಪ್ರತಿ ಪಕ್ಷಗಳು ಇದನ್ನು ಅಸ್ತ್ರವಾಗಿಸಿಕೊಂಡು ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲಿದೆ ಎಂಬ ಆತಂಕವೂ ಕಾಡಿದೆ.

ಪೊಲೀಸ್‌ ತನಿಖೆಯ ವರದಿಯನ್ನು ಬಹಿರಂಗ ಮಾಡದೇ ಶಾಸಕರಿಗೆ ರಕ್ಷಣೆ ನೀಡಲೂ ಬಹುದು ಎನ್ನಲಾಗುತ್ತಿದೆ. ಈ ಮಧ್ಯೆ ಶಾಸಕ
ಅರವಿಂದ ಲಿಂಬಾವಳಿ ವಿರುದ್ಧ ಕೇಳಿ ಬಂದಿದ್ದ ಆರೋಪದಲ್ಲಿ ಹುರುಳಿಲ್ಲ ಎಂಬ ವರದಿ ಬಂದಿದ್ದು, ಸಂಪುಟ ಸೇರ್ಪಡೆಗೆ ಹಾದಿ ಸುಗಮವಾಗಿದೆ.

***

ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದು, ನಗರಾಭಿವೃದ್ಧಿ ಖಾತೆ ಕೊಡುವಂತೆ ಕೋರಿದ್ದೇನೆ. ಖಾತೆ ಹಂಚಿಕೆ ತೀರ್ಮಾನ ಸಿ.ಎಂಗೆ ಬಿಟ್ಟ ವಿಷಯ.
- ಬೈರತಿ ಬಸವರಾಜ್, .ಆರ್. ಪುರ ಶಾಸಕ

***

ನನ್ನ ಸೋಲಿಗೆ ಸಂಸದ ಬಚ್ಚೇಗೌಡರೇ ಕಾರಣ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಪ್ಪ – ಮಗ ಮೊದಲು ನಂಬಿಸಿ ಕೊನೆಗೆ ಕೈಕೊಟ್ಟರು.
-ಎಂ.ಟಿ.ಬಿ.ನಾಗರಾಜ್‌, ಹೊಸಕೋಟೆ ಪರಾಜಿತ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT