ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಯಹೂದಿಗಳ ಬೆಳಕಿನ ಹಬ್ಬ ಆಚರಣೆ

Last Updated 7 ಡಿಸೆಂಬರ್ 2018, 19:27 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯರು ದೀಪಗಳ ಹಬ್ಬ ದೀಪಾವಳಿ ಆಚರಿಸುವಂತೆ ಇಸ್ರೇಲಿನ ಯಹೂದಿಗಳು ‘ಹನುಖ್ಖಾ’ ಅಂದರೆ ಬೆಳಕಿನ ಹಬ್ಬ ಆಚರಿಸುತ್ತಾರೆ. ನಗರದ ಶಾಂಗ್ರಿಲಾ ಹೋಟೆಲ್‌ನ 18ನೇ ಮಹಡಿಯಲ್ಲಿ ಇತ್ತೀಚೆಗೆ ಸೂರ್ಯಾಸ್ತದ ವೇಳೆಗೆ, ದಕ್ಷಿಣ ಭಾರತದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿಯ ಅಧಿಕಾರಿಗಳು ‘ಹನುಖ್ಖಾ’ ಆಚರಿಸಿದರು.

ಪಡುವಣದಲ್ಲಿ ಸೂರ್ಯ ಮುಳುಗುವುದನ್ನೇ ಕಾಯುತ್ತಿದ್ದ ಅಧಿಕಾರಿಗಳು ‘ಹನುಕ್ಕಿಯಾ’ ದೀಪದ ಮೇಲೆ ವಿವಿಧ ಬಣ್ಣಗಳ ಎಂಟು ಮೋಂಬತ್ತಿಗಳನ್ನು ಬೆಳಗಿಸಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಕಾನ್ಸುಲ್‌ ಜನರಲ್‌ ದಾನ ಖರ್ಷ್‌ ಯಹೂದಿಗಳ ಬೆಳಕಿನ ಹಬ್ಬದ ಕುರಿತು ವಿವರಣೆ ನೀಡಿದರು. ಬಳಿಕ ಅಲ್ಲಿ ಸೇರಿದವರಿಗೆ ಹಣ್ಣುಗಳ ಮಿಶ್ರಣದ ಪಾನೀಯ ಸಮಾರಾಧನೆ ನಡೆಯಿತು.

ಪ್ರಾಚೀನ ಇಸ್ರೇಲ್‌ನಲ್ಲಿ ಸೆಲ್ಯುಸಿಡ್‌ ಚಕ್ರವರ್ತಿಯ ಕಾಲದಲ್ಲಿ ಆತನ ವಿರುದ್ಧ ಬಂಡಾಯ ನಡೆಯಿತು. ಅದನ್ನು ಮಕ್ಕಾಬೀನ್ ಬಂಡಾಯ ಎನ್ನಲಾಗುತ್ತದೆ. ಇದರ ಸ್ಮರಣೆಯಲ್ಲಿ ಜೆರೆಸಲೇಮ್‌ನಲ್ಲಿ ಎರಡನೇ ದೇಗುಲವನ್ನು ನಿರ್ಮಿಸಲಾಯಿತು. ಇದರ ಸಂತಸದಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಎಂಟು ರಾತ್ರಿ ಮತ್ತು ಹಗಲು ಆಚರಿಸಲಾಗುತ್ತದೆ.

ಮನದಲ್ಲಿ ಶಾಂತಿ:ಬೆಂಗಳೂರಿನ ಆರ್ಚ್‌ ಬಿಷಪ್‌ ಪೀಟರ್‌ ಮಚಾಡೊ ಮಾತನಾಡಿ, ‘ಪ್ರತಿಯೊಬ್ಬರ ಮನಸ್ಸಿನಲ್ಲಿ ಶಾಂತಿ ನೆಲೆಸಿದರೆ, ಹೊರಗೂ ಶಾಂತಿಯ ವಾತಾವರಣ ಸೃಷ್ಟಿ ಆಗುತ್ತದೆ. ನಮ್ಮಲ್ಲೂ ಶಾಂತಿ ಇರಬೇಕು ಇತರರಲ್ಲೂ ಶಾಂತಿ ಇರಬೇಕು ಎಂಬ ಅಪೇಕ್ಷೆ ಹೊಂದಿರಬೇಕು’ ಎಂದು ಹೇಳಿದರು.

‘ಕ್ರೈಸ್ತರು, ಮುಸ್ಲಿಮರು ಮತ್ತು ಯಹೂದಿಗಳ ಮೂಲ ಒಂದೇ. ಅಬ್ರಹಾಂ ನಮ್ಮ ಪೂರ್ವಜ. ಮೂರೂ ಧರ್ಮಗಳು ಸಹೋದರರು. ಸಹೋದರರಂತೇ ಬಾಳಬೇಕು. ಶಾಲೋಮ್‌ ಎಂದರೆ ಶಾಂತಿ, ಬೈಬಲ್‌ನಲ್ಲೂ ಈ ಪದ 400 ಬಾರಿ ಉಲ್ಲೇಖಗೊಂಡಿದೆ. ಆದರೆ, ಶಾಂತಿ ಪದವನ್ನು ರಾಜಕೀಯಕರಣಗೊಳಿಸಲಾಗಿದೆ. ಬೇರೆ ಅರ್ಥಗಳಲ್ಲಿ ಬಳಸಲಾಗುತ್ತಿದೆ’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಇಮಾಮ್‌ಗಳ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್‌ ಅಹಮದ್‌ ಇಲ್ಯಾಸಿ ಮಾತನಾಡಿ, ಇಡೀ ವಿಶ್ವ ಶಾಂತಿಗಾಗಿ ಮೊರೆ ಇಡುತ್ತಿದೆ. ಪರಸ್ಪರ ಅರ್ಥೈಸುವಿಕೆಯ ಮೂಲಕ ಶಾಂತಿ ಮತ್ತು ಏಕತೆ ಕಂಡುಕೊಳ್ಳಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT