ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವು ಮರಳಿಸಿದ ಇಸ್ರೇಲ್‌ ಪ್ರಜೆ

ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ
Last Updated 7 ಡಿಸೆಂಬರ್ 2019, 5:42 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸಕ್ಕಾಗಿ ನಗರಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿದ್ದ ಇಸ್ರೇಲ್‌ ಪ್ರಜೆ ಇಡೋ ಎಂಬುವರಿಗೆ ನಗರದ ಪೊಲೀಸರು ಸಹಾಯ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಇಡೋ ಸಹ ನಗರಕ್ಕೆ ವಾಪಸು ಬಂದು ಪೊಲೀಸರಿಗೆ ಹಣ ಮರಳಿಸಿದ್ದಾರೆ.

ನಗರದ ಪೊಲೀಸರ ಸಹಾಯವನ್ನು ಹೊಗಳಿರುವ ಇಡೋ, ‘ಭಾರತ ಪವಿತ್ರ ಭೂಮಿ’ ಎಂದು ಬಣ್ಣಿಸಿದ್ದಾರೆ. ಚಪ್ಪಲಿ ಹಾಕದೇ ದೇಶದಲ್ಲಿ ಓಡಾಡಿದ್ದ ಅವರು, ‘ಚಪ್ಪಲಿ ಧರಿಸಿ ಓಡಾಡಿ ಈ ಭೂಮಿಯನ್ನು ಅಪವಿತ್ರ ಮಾಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಆಗಿದ್ದೇನು?: ಇಸ್ರೇಲ್‌ನಲ್ಲಿ ರೈತರಾಗಿರುವ ಇಡೋ ಅವರು ನ. 25ರಂದು ನಗರಕ್ಕೆ ಬಂದಿದ್ದರು. ಕಬ್ಬನ್ ಉದ್ಯಾನದಲ್ಲಿ ಕುಳಿತಿದ್ದರು. ಅದೇ ಸ್ಥಳದಲ್ಲೇ ನಿದ್ದೆಗೆ ಜಾರಿದ್ದರು.

₹ 20 ಸಾವಿರ ಹಣ, ಮೊಬೈಲ್, ವಿಮಾನದ ಟಿಕೆಟ್ ಹಾಗೂ ಬಟ್ಟೆ ಇದ್ದ ಬ್ಯಾಗನ್ನು ಯಾರೋ ಕದ್ದುಕೊಂಡು ಹೋಗಿದ್ದರು. ಪಾಸ್‌ಪೋರ್ಟ್ ಹಾಗೂ ವೀಸಾ ಮಾತ್ರ ಜೇಬಿನಲ್ಲಿತ್ತು. ಹಣವಿಲ್ಲದೇ ಊಟ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದ ಇಡೋ, ಕಳ್ಳತನದ ಬಗ್ಗೆ ದೂರು ನೀಡಲು ಕಬ್ಬನ್ ಪಾರ್ಕ್ ಠಾಣೆಗೆ ಹೋಗಿದ್ದರು.

ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಅತೀಕ್ ಅಹ್ಮದ್‌ ಹಾಗೂ ಸಿಬ್ಬಂದಿ ಸಮಸ್ಯೆ ಆಲಿಸಿದ್ದರು. ಇಡೋ ಅವರಿಗೆ ಬೇರೊಂದು ಟಿಕೆಟ್ ಮಾಡಿಸಿಕೊಡಲು ಪ್ರಯತ್ನಿಸಿದ್ದರು. ಅದು ಸಾಧ್ಯವಾಗದಿದ್ದಾಗ ಖರ್ಚಿಗೆಂದು ₹ 1,500 ಕೊಟ್ಟಿದ್ದರು. ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ಸಹ ನೀಡಿದ್ದರು. ಅಲ್ಲಿಯ ಪೊಲೀಸರೇ ನಿಲ್ದಾಣದ ಅಧಿಕಾರಿಗಳ ಜೊತೆ ಮಾತನಾಡಿ ಇಡೋ ಅವರನ್ನು ವಾಪಸು ದೇಶಕ್ಕೆ ಕಳುಹಿಸಿಕೊಟ್ಟಿದ್ದರು.

ಡಿ. 3ರಂದು ವಾಪಸು ನಗರಕ್ಕೆ ಬಂದಿದ್ದ ಇಡೋ, ಅತೀಕ್ ಅಹ್ಮದ್‌ ಅವರನ್ನು ಭೇಟಿಯಾಗಿ ₹ 1,500 ಹಣವನ್ನು ವಾಪಸು ಕೊಟ್ಟಿದ್ದಾರೆ. ಧನ್ಯವಾದ ಹೇಳಿ ಅವರೊಂದಿಗೆ ಫೋಟೊ ತೆಗೆಸಿಕೊಂಡು ಪ್ರವಾಸಕ್ಕಾಗಿ ಪುದುಚೇರಿಗೆ ಹೋಗಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅತೀಕ್ ಅಹ್ಮದ್, ‘ಠಾಣೆಗೆ ಬಂದಿದ್ದ ಅತೀಕ್, ದೂರು ನೀಡುವುದಕ್ಕಿಂತ ತಮ್ಮ ಬ್ಯಾಗ್‌ನ್ನು ವಾಪಸು ಕೊಡಿಸುವಂತೆ ಕೋರಿದ್ದರು. ಅವರ ಮಾತಿನಿಂದಲೇ ನೋವು ಅರ್ಥವಾಯಿತು. ನನ್ನ ಕೈಲಾದ ಸಹಾಯ ಮಾಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT