ಸೋಮವಾರ, ಜೂನ್ 14, 2021
20 °C
185 ಸೀಟುಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಿದ ಆರೋಪ l ಮೂರು ದಿನಗಳ ನಿರಂತರ ಪರಿಶೀಲನೆ

ರಮೇಶ್ ಆತ್ಮಹತ್ಯೆ ಬಳಿಕ ಐ.ಟಿ ಶೋಧ ಮೊಟಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಮೇಶ್ವರ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಮೂರು ದಿನಗಳಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದ ಐ.ಟಿ ಅಧಿಕಾರಿಗಳು, ರಮೇಶ್‌ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಕಾರ್ಯಾಚರಣೆ ಮೊಟಕುಗೊಳಿಸಿ ಹಿಂತಿರುಗಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಮಾಜಿ ಸಚಿವ ಆರ್‌.ಎಲ್‌. ಜಾಲಪ್ಪ ಅವರ ದೇವರಾಜ ಅರಸು ಉನ್ನತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯಲ್ಲೂ ನಡೆಸುತ್ತಿದ್ದ ದಾಖಲೆ ಪರಿಶೀಲನೆಯನ್ನು ಐ.ಟಿ ಅಧಿಕಾರಿಗಳು ಸ್ಥಗಿತಗೊಳಿಸಿದರು.

₹ 100 ಕೋಟಿಗೂ ಅಧಿಕ ಮೊತ್ತದ ಅಘೋಷಿತ ಆಸ್ತಿ ಮತ್ತು ₹8.22 ಕೋಟಿ ಹಣ ಪತ್ತೆಯಾದ ಸಂಬಂಧ ಮಂಗಳವಾರ (ಅ.15) ವಿಚಾರಣೆಗೆ ಹಾಜರಾಗಲು ಪರಮೇಶ್ವರ ಹಾಗೂ ಜಾಲಪ್ಪ ಸೋದರಳಿಯ ನಾಗರಾಜ್‌ ಅವರಿಗೆ ಐ.ಟಿ ನೋಟಿಸ್‌ ಜಾರಿಗೊಳಿಸಿದೆ.

ಮೂರು ದಿನಗಳ ನಿರಂತರ ಶೋಧದ ಬಳಿಕ ಐ.ಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನೀಟ್‌
ಮೂಲಕ ಅಖಿಲ ಭಾರತ ಕೋಟಾದಡಿ ಹಂಚಿಕೆಯಾಗುತ್ತಿದ್ದ ಸೀಟುಗಳನ್ನು ಡ್ರಾಪೌಟ್‌ ಮೂಲಕ ಆಡಳಿತ ಮಂಡಳಿ ಸೀಟುಗಳಾಗಿ ಪರಿವರ್ತಿಸಿ ಮಾರಲಾಗಿತ್ತು. ಹೀಗೆ, 185 ಸೀಟುಗಳನ್ನು ಭಾರಿ ಹಣಕ್ಕೆ ಮಾರಾಟ ಮಾಡಿದ ಆರೋಪವಿದೆ.

ಎಂಬಿಬಿಎಸ್‌, ಪಿ.ಜಿ ಸೀಟುಗಳನ್ನು ₹ 50ಲಕ್ಷದಿಂದ ₹ 65 ಲಕ್ಷದವರೆಗೂ ಮಾರಲಾಗಿತ್ತು. ಇದರಿಂದ ಬಂದ ಹಣವನ್ನು ರಿಯಲ್‌ ಎಸ್ಟೇಟ್‌ ಹಾಗೂ ಹೊಟೇಲ್‌ ಉದ್ಯಮದಲ್ಲಿ ತೊಡಗಿಸಲಾಗಿತ್ತು. ಅಲ್ಲದೆ, ಸೀಟು ಮಾರಾಟದ ಹಣವನ್ನು ಉದ್ಯೋಗಿಗಳ ಹೆಸರಿನ ಬೇನಾಮಿ ಖಾತೆಗೆ ವರ್ಗಾಯಿಸಿ ದುರ್ಬಳಕೆ ಮಾಡಲಾಗಿತ್ತು ಎಂದು ಐ.ಟಿ ತನಿಖೆ ಹೇಳಿದೆ.

ತುಮಕೂರಿಗೆ ಬಾರದ ಪರಮೇಶ್ವರ

ತುಮಕೂರು: ಗುರುವಾರದಿಂದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಐ.ಟಿ ಅಧಿಕಾರಿಗಳು ಶನಿವಾರ ಪರಮೇಶ್ವರ ಅವರ ನಿರೀಕ್ಷೆಯಲ್ಲಿದ್ದರು.

ಅವರು ಬಾರದ ಕಾರಣ ಕಾಲೇಜಿನ ಒಂದು ಕೊಠಡಿಯ ಬಾಗಿಲು ತೆರೆದಿರಲಿಲ್ಲ. ಬೆಳಿಗ್ಗೆ 11ಕ್ಕೆ ಪರಮೇಶ್ವರ ಬರುವರು. ಆನಂತರ ಕೊಠಡಿ ಬಾಗಿಲು ತೆರೆಯಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ರಮೇಶ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪರಮೇಶ್ವರ ಸ್ಥಳಕ್ಕೆ ಬರಲಿಲ್ಲ.

ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಐ.ಟಿ ಅಧಿಕಾರಿಗಳಿದ್ದ ಕೊಠಡಿಗೆ ಮತ್ತು ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ಮಧ್ಯಾಹ್ನ 3.30ರ ವೇಳೆಗೆ ಐ.ಟಿ ಅಧಿಕಾರಿಗಳು ದಾಖಲೆಗಳು ತುಂಬಿದ ಬ್ಯಾಗ್‌ನೊಂದಿಗೆ ತೆರಳಿದರು.

ನಾಗರಾಜ್‌ ಸುದೀರ್ಘ ವಿಚಾರಣೆ

ಕೋಲಾರ/ಚಿಕ್ಕಬಳ್ಳಾಪುರ: ಕಾಂಗ್ರೆಸ್ ಮುಖಂಡ ಆರ್‌.ಎಲ್‌.ಜಾಲಪ್ಪ ಅವರ ಸೋದರಳಿಯ ಹಾಗೂ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಅವರನ್ನು ಶುಕ್ರವಾರ ರಾತ್ರಿ ಚಿಕ್ಕಬಳ್ಳಾಪುರದಿಂದ ನಗರಕ್ಕೆ ಕರೆತಂದಿದ್ದ ಐ.ಟಿ ಅಧಿಕಾರಿಗಳು ತಡರಾತ್ರಿಯವರೆಗೂ ವಿಚಾರಣೆ ನಡೆಸಿದರು.

30 ಮಂದಿ ಅಧಿಕಾರಿಗಳ ತಂಡವು ನಾಗರಾಜ್‌ ಅವರನ್ನು ವೈದ್ಯಕೀಯ ಕಾಲೇಜು ಹಾಗೂ ಅತಿಥಿಗೃಹಕ್ಕೆ ಕರೆದೊಯ್ದು ಮೂರ್ನಾಲ್ಕು ವರ್ಷಗಳ ಪ್ರವೇಶಾತಿ ಪ್ರಕ್ರಿಯೆ, ಶುಲ್ಕ ಸಂಗ್ರಹಣೆ, ಸೀಟು ಹಂಚಿಕೆ ಬಗ್ಗೆ ವಿಚಾರಣೆ ನಡೆಸಿತು. ದಾಖಲೆಪತ್ರಗಳನ್ನು ವಶಕ್ಕೆ ಪಡೆದರು.

ಪ್ರವೇಶಾತಿ ಹಾಗೂ ಶುಲ್ಕ ಪಾವತಿ ಸಂಬಂಧ ಸಂಸ್ಥೆಯ ಕೆಲ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.

ಸಂಸ್ಥೆಯ ಕುಲಸಚಿವ ಡಾ.ಕೆ.ಎನ್.ವಿ.ಪ್ರಸಾದ್, ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಲಕ್ಷ್ಮಯ್ಯ ಅವರ ವಿಚಾರಣೆಯನ್ನೂ ನಡೆಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೇವರಾಜ ಅರಸು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯಲ್ಲಿ ಈ ಹಿಂದೆ ಸದಸ್ಯರಾಗಿದ್ದ ಬಗ್ಗೆಯೂ ಮಾಹಿತಿ ಕಲೆ ಹಾಕಿದರು. ಚಿಕ್ಕಬಳ್ಳಾಪುರದಲ್ಲೂ ಶೋಧ ನಡೆಯಿತು.

ಅಧಿಕಾರಿಗಳಿಂದ ಹಲ್ಲೆ ಆರೋಪ

‘ವಿಚಾರಣೆ ವೇಳೆ ಅಧಿಕಾರಿಗಳು ವೈದ್ಯಕೀಯ ಕಾಲೇಜಿನ ಕ್ಯಾಷಿಯರ್‌ ನಾರಾಯಣಸ್ವಾಮಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂಬ ಆರೋಪ ಕೇಳಿಬಂದಿದೆ.
3 ದಿನಗಳಿಂದ ನಾರಾಯಣಸ್ವಾಮಿ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಅವರ ಮೊಬೈಲ್ ವಶಕ್ಕೆ ಪಡೆಯಲು ಯತ್ನಿಸಿದ್ದರು. ಆದರೆ, ಮೊಬೈಲ್‌ ಕೊಡಲು ನಿರಾಕರಿಸಿದ ನಾರಾಯಣಸ್ವಾಮಿ ಸಿಮ್‌ ಕಾರ್ಡ್‌ ಕಿತ್ತೆಸೆದಿದ್ದರು. ತನಿಖೆಗೆ ಸಹಕರಿಸದಿದ್ದರಿಂದ ಅಸಮಾಧಾನಗೊಂಡ ಅಧಿಕಾರಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

‘ಐ.ಟಿ ಪ್ರಶ್ನೆಗಳಿಗೆ ಉತ್ತರಿಸುವೆ’

‘ಆದಾಯ ತೆರಿಗೆ(ಐ.ಟಿ) ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಕರೆದಿದ್ದು, ಅವರ ಎಲ್ಲ ಪ್ರಶ್ನೆಗೆ ಸಮರ್ಪಕ ಉತ್ತರ ಹಾಗೂ ಸೂಕ್ತ ದಾಖಲೆಗಳನ್ನು ನೀಡಲಿದ್ದೇನೆ’ ಎಂದು ಕಾಂಗ್ರೆಸ್ ಶಾಸಕ ಜಿ. ಪರಮೇಶ್ವರ ಹೇಳಿದರು. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘₹3500 ಕೋಟಿ ಕಿಕ್ ಬ್ಯಾಕ್ ತೆಗೆದುಕೊಂಡಿದ್ದೇನೆ, ಶೋಧದ ವೇಳೆ ₹400 ಕೋಟಿ ಸಿಕ್ಕಿದೆ ಎಂದು ಕೆಲ ಮಾಧ್ಯಮಗಳು ಪ್ರಕಟಿಸಿವೆ. ಅದು ಆಧಾರರಹಿತ’ ಎಂದರು. ‘ವೈದ್ಯಕೀಯ ಸೀಟು ಹಂಚಿಕೆ ನೀಟ್ ಮೂಲಕ ಆಗಿದೆ. ನಾನು 30 ವರ್ಷ ಕಾಲೇಜು ಆಡಳಿತ ಮಂಡಳಿಯ ಸದಸ್ಯನಾಗಿದ್ದೆ. ಆದರೆ, ರಾಜಕೀಯದಲ್ಲಿ ಸಕ್ರಿಯನಾಗಿದ್ದರಿಂದ ಕಾಲೇಜಿನ ವಿಷಯದಲ್ಲಿ ಭಾಗಿಯಾಗಿರಲಿಲ್ಲ. ನನ್ನ ಅಣ್ಣನ ನಿಧನದ ನಂತರ ಜವಾಬ್ದಾರಿ ನನ್ನ ಮೇಲೆ ಬಂದಿದೆ. ಅಣ್ಣನ ಮಗ ಆನಂದ್‌ ಆಡಳಿತ ಮಂಡಳಿಯ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ದಾಖಲಾತಿ ವಿಷಯದಲ್ಲಿ ನನ್ನ ಹೊಣೆಗಾರಿಕೆ ಇಲ್ಲ’ ಎಂದು ಹೇಳಿದರು. ‘ಐ.ಟಿ. ಶೋಧ ಕಾರ್ಯಾಚರಣೆಗೆ ರಾಜಕೀಯ ಲೇಪ ಬಳಿಯುವುದಿಲ್ಲ. ಅಧಿಕಾರಿಗಳ ವಿವರಣೆಗೆ ಉತ್ತರಿಸುವುದು ನನ್ನ ಕೆಲಸ. ವಿದ್ಯಾರ್ಥಿಗಳ ದೂರು ಆಧರಿಸಿ ಪರಿಶೀಲಿಸಿದ್ದೇವೆ ಅಧಿಕಾರಿಗಳು ತಿಳಿಸಿದ್ದಾರೆ’ ಎಂದರು.

***

ಎಲ್ಲ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದ ಆಪ್ತಸಹಾಯಕ ರಮೇಶ್ ಆತ್ಮಹತ್ಯೆ ಆಘಾತ ತಂದಿದೆ. ಐ.ಟಿ ದಾಳಿ ಬಳಿಕ, ನಿನಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದೆ.

– ಜಿ. ಪರಮೇಶ್ವರ, ಕಾಂಗ್ರೆಸ್ ಶಾಸಕ

***

ಐ.ಟಿ ಅಧಿಕಾರಿಗಳ ಕಿರುಕುಳ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಐ.ಟಿ ಕಿರುಕುಳದಿಂದ ಸಾವಿಗೀಡಾಗಿದ್ದಾರೆ‌

– ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

***

ಐ.ಟಿ ಅಧಿಕಾರಿಗಳು ಭೀತಿ ಸೃಷ್ಟಿಸಿದ್ದಾರೆ. ಈ ಹಿಂದೆ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಂತೆ ಈಗ ರಮೇಶ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು

– ದಿನೇಶ್ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು