ಶನಿವಾರ, ಜೂನ್ 6, 2020
27 °C
ಬಡಗುತಿಟ್ಟಿನ ಮೇರು ಕಲಾವಿದ ವೆಂಕಟೇಶರಾವ್ ನಿಧನ: ಅಪಾರ ಅಭಿಮಾನಿಗಳ ಕಂಬನಿ

‘ಜಳವಳ್ಳಿ’ಯೆಂಬ ಯಕ್ಷಗಾನದ ಹೆಗ್ಗುರುತು

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಲವಳ್ಳಿ ವೆಂಕಟೇಶ ರಾವ್ ಎಂಬ ಹೆಸರನ್ನು ಕೇಳಿದ ಕೂಡಲೇ ಶನಿ, ರಾವಣ, ಭೀಮ, ಈಶ್ವರ ಸುದರ್ಶನ... ಹೀಗೆ ಹತ್ತಾರು ಅದ್ಧೂರಿ ಪಾತ್ರಗಳು ಯಕ್ಷಗಾನ ಪ್ರಿಯರ ಕಣ್ಣ ಮುಂದೆ ಹಾದುಹೋಗುತ್ತವೆ. 64 ವರ್ಷಗಳ ಸುದೀರ್ಘ ರಂಗಪ್ರಯಾಣದಲ್ಲಿ ಅವರು ಹಾಕಿದ ಪ್ರತಿ ಹೆಜ್ಜೆಯೂ ಹೆಗ್ಗುರುತಾಗಿವೆ ಎನ್ನುತ್ತಾರೆ ಕಲಾಭಿಮಾನಿಗಳು.

ಹೊನ್ನಾವರ ತಾಲ್ಲೂಕಿನ ಜಲವಳ್ಳಿಯಲ್ಲಿ ಬೊಮ್ಮ ಮಡಿವಾಳ ಮತ್ತು ಶ್ರೀದೇವಿ ದಂಪತಿಯ ‍ಪುತ್ರನಾಗಿ 1933ರ ಜನವರಿ 1ರಂದು ಜನಿಸಿದ ಅವರು, ತಮ್ಮ 16ನೇ ವಯಸ್ಸಿಗೇ ಪಾತ್ರಧಾರಿಯಾದರು. ಶಾಲೆಯ ವಿದ್ಯಾಭ್ಯಾಸ ಕೇವಲ ಎರಡನೇ ತರಗತಿಯಾದರೂ ಯಕ್ಷಗಾನ ರಂಗದಲ್ಲಿ ಅವರು ಅದೆಷ್ಟೋ ತಲೆಮಾರಿಗೆ ಮಾರ್ಗದರ್ಶಕರಾದರು. ಅವರ ಆಂಗಿಕ ಮತ್ತು ವಾಚಿಕಾ ಶೈಲಿಗಳು ‘ಜಲವಳ್ಳಿ’ ಮಾದರಿಯೆಂದೇ ಪ್ರಸಿದ್ಧವಾದವು.

ಪ್ರಸಿದ್ಧ ಪ್ರಸಂಗಗಳಾದ ‘ಶನೀಶ್ವರ ಮಹಾತ್ಮೆ’ಯ ಶನಿ, ‘ಕಾರ್ತವೀರ್ಯ’ದ ರಾವಣ, ‘ಗದಾಯುದ್ಧ’ದ ಭೀಮ, ‘ಭಸ್ಮಾಸುರ ಮೋಹಿನಿ’ಯ ಈಶ್ವರ, ‘ನಾಗಶ್ರೀ’ಯ ಸುದರ್ಶನನ ಪಾತ್ರಗಳಲ್ಲಿ ಅವರು ಜನಮಾನಸದಲ್ಲಿ ಅಚ್ಚೊತ್ತಿದರು. ಉತ್ತರಕನ್ನಡದ ಬಡಗು ತಿಟ್ಟಿನಲ್ಲಿ ಹೆಚ್ಚು ತೊಡಗಿಸಿಕೊಂಡರೂ ದಕ್ಷಿಣಕನ್ನಡದ ತೆಂಕು ತಿಟ್ಟಿನಲ್ಲೂ ಪಾತ್ರಗಳನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದರು. ಆ ಮೂಲಕ ಎರಡೂ ಶೈಲಿಗಳಲ್ಲಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡರು. 

ಪಾತ್ರಗಳಲ್ಲಿ ತಲ್ಲೀನರಾದರೂ ಸದಾ ಭಾಷಾ ಶುದ್ಧಿ, ವ್ಯಾಕರಣ ಬದ್ಧ ಮಾತುಗಳಿಗೂ ಜಲವಳ್ಳಿಯವರು ಪ್ರಸಿದ್ಧರಾಗಿದ್ದರು. ಅವರ ಕಲಾ ಪೋಷಣೆಯನ್ನು ಗುರುತಿಸಿದ ರಾಜ್ಯ ಸರ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ– ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ. ಅವರ ಅಭಿಮಾನಿಗಳೂ ಅದೆಷ್ಟೋ ಸನ್ಮಾನಗಳನ್ನು ಮಾಡಿ ಅಭಿಮಾನ ಮೆರೆದಿದ್ದಾರೆ. ಅವರ ಸಾಧನೆಗೆ ‘ಯಕ್ಷರತ್ನ ಶ್ರೀ ಜಲವಳ್ಳಿ ವೆಂಕಟೇಶ್ ರಾವ್’ ಎಂಬ ಅಭಿನಂದನಾ ಗ್ರಂಥ ಕೂಡ ಸಮರ್ಪಣೆಯಾಗಿದೆ.

ಅವರ ಮೂವರು ಪುತ್ರರ ಪೈಕಿ ವಿದ್ಯಾಧರ ಜಲವಳ್ಳಿ ಕೂಡ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರು. ‘ಕಲಾಧರ ಯಕ್ಷ ಬಳಗ’ ಎಂಬ ಡೇರೆ ಮೇಳದ ಮೂಲಕ ಯಕ್ಷ ಸೇವೆಯಲ್ಲಿ ತೊಡಗಿಕೊಂಡು ಕಲಾ ಶೈಲಿಯನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಿದ್ದಾರೆ. 

ವೆಂಕಟೇಶ ರಾವ್ ಅವರು ಆರು ದಶಕಗಳ ಕಲಾಸೇವೆಯ ಬಳಿಕ ತಮ್ಮ ಹುಟ್ಟೂರು ಜಲವಳ್ಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಅವರ ನಿಧನದಿಂದ ಯಕ್ಷಗಾನ ರಂಗದ ಮಹತ್ವದ ಕೊಂಡಿಯೊಂದು ಕಳಚಿದೆ ಎಂಬ ಬೇಸರ ಕಲಾಪೋಷಕರದ್ದಾಗಿದೆ. ಶಿರಸಿಯ ಟಿಎಸ್‌ಎಸ್‌ ಆಸ್ಪತ್ರೆಯಲ್ಲಿ ಮಂಗಳವಾರ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಅಭಿಮಾನಿಗಳು ಧಾವಿಸಿ ಕಂಬನಿ ಮಿಡಿದರು.

‘ಸರಳ, ಸೌಜನ್ಯಯುತ ಕಲಾವಿದ’: ‘ಜಲವಳ್ಳಿ ಅವರ ನಿಧನ ಯಕ್ಷಗಾನಕ್ಕೆ ತುಂಬಲಾರದ ನಷ್ಟ. ಅವರೊಂದು ಪರಂಪರೆಯಲ್ಲಿ ಬೆಳೆದವರು. ಉತ್ತರ ಕನ್ನಡದ ಎಲ್ಲ ಕಲಾವಿದರೊಂದಿಗೆ ಆತ್ಮೀಯರಾಗಿದ್ದರು. ನಮ್ಮ ಮಂಡಳಿಯಲ್ಲೂ ಅವರು ಕೆಲಸ ಮಾಡಿದ್ದರು’ ಎಂದು ಕೆರೆಮನೆಯ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಶಿವಾನಂದ ಹೆಗಡೆ ನೆನಪಿಸಿಕೊಂಡರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಅತ್ಯಂತ ಸರಳ, ಸೌಜನ್ಯಯುತ ಕಲಾವಿದರಾಗಿದ್ದ ಅವರ ಜತೆ ನಮಗೆ ಒಳ್ಳೆಯ ಸಂಬಂಧವಿತ್ತು. ತೆಂಕುತಿಟ್ಟಿನಲ್ಲಿ ಕೆಲವೇ ವೇಷಗಳನ್ನು ಮಾಡಿದ್ದರೂ ಅಲ್ಲಿ ಕೂಡ ಪ್ರಸಿದ್ಧರಾದರು. ಖಳನಾಯಕನ ಪಾತ್ರಗಳಿಗೆ ಅವರು ಕಳೆ ತುಂಬಿದ್ದರು’ ಎಂದು ಸ್ಮರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು