ಸೋಮವಾರ, ಜುಲೈ 4, 2022
21 °C
ಮದ್ದೂರು- ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಅಂತ್ಯಕ್ರಿಯೆ ನೆರವೇರಿಸುವಂತೆ ಗ್ರಾಮಸ್ಥರ ಒತ್ತಾಯ

ಹುತಾತ್ಮ ಯೋಧನಿಗೆ ಸ್ವಂತ ಜಮೀನು ಇಲ್ಲ: ಸರ್ಕಾರಿ ಭೂಮಿಯಲ್ಲಿ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ವೇಳೆ ಹುತಾತ್ಮರಾದ ಜಿಲ್ಲೆಯ ಯೋಧ ಎಚ್‌.ಗುರು ಅವರ ಕುಟುಂಬಕ್ಕೆ ಸ್ವಂತ ಜಮೀನು ಇಲ್ಲದ ಕಾರಣ ಸರ್ಕಾರಿ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಗುಡಿಗೆರೆ ಎಳನೀರು ಮಾರುಕಟ್ಟೆ ಎದುರು ಇರುವ ಬಿಸಿಎಂ ಹಾಸ್ಟೆಲ್ ಹಿಂಭಾಗದ ಸರ್ಕಾರಿ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದ್ದು, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಆದರೆ ಮದ್ದೂರು- ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಅಂತ್ಯಕ್ರಿಯೆ ನೆರವೇರಿಸುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಬಂದಿ‌ದ್ದ ಗುರು ಕಳೆದ ಭಾನುವಾರವಷ್ಟೇ ಕರ್ತವ್ಯಕ್ಕೆ ತೆರಳಿದ್ದರು.

ಅವರು ಸಿಆರ್‌ಪಿಎಫ್‌ಗೆ ಸೇರಿ 9 ವರ್ಷವಾಗಿತ್ತು. ಹೆಚ್ಚಿನ ಅವಧಿ ಜಾರ್ಖಂಡ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರನ್ನು ಈಚೆಗೆ ಜಮ್ಮು- ಕಾಶ್ಮೀರಕ್ಕೆ ನಿಯೋಜಿಸಲಾಗಿತ್ತು. ಅದಕ್ಕೂ ಮೊದಲು ಜಮ್ಮುವಿನಲ್ಲಿ ಮೂರು ತಿಂಗಳು ತರಬೇತಿ ಪಡೆದಿದ್ದರು. ತರಬೇತಿ ಮುಗಿದ ಬಳಿಕ ತಮ್ಮ ಊರು ಗುಡಿಗೆರೆಗೆ(ಮದ್ದೂರು ತಾಲ್ಲೂಕು) ಬಂದಿದ್ದರು.

ಹೊನ್ನಯ್ಯ- ಚಿಕ್ಕಹೊಳ್ಳಮ್ಮ ದಂಪತಿಯ ಹಿರಿಯ ಪುತ್ರರಾಗಿರುವ ಗುರು ಅವರಿಗೆ ಕನಕಪುರ ತಾಲ್ಲೂಕು ಸಾಸಲಾಪುರ ಗ್ರಾಮದ ಕಲಾವತಿ ಅವರೊಂದಿಗೆ 8 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಮದುವೆಯ ನಂತರ ಪತ್ನಿಯನ್ನು ಸಾಸಲಾಪುರದಲ್ಲೇ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದರು.

ಗುರು ಅವರ ತಮ್ಮ ಆನಂದ್‌ ಗೃಹ ರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರು ತಂದೆ ಹೊನ್ನಯ್ಯ ಅವರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

**
ಗುರು ಕೊಂದವರನ್ನು ಬ್ಲಾಸ್ಟ್ ಮಾಡಿ, ದೇಶ ಕಾಯುವವರನ್ನು ಏಕೆ ಕೊಲ್ಲುತ್ತಾರೆ? ಕೊಲೆಗಾರರನ್ನು ಬಿಡಬೇಡಿ.

- ಕಲಾವತಿ, ಹುತಾತ್ಮ ಯೋಧ ಗುರು ಪತ್ನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು