ಶುಕ್ರವಾರ, ಮಾರ್ಚ್ 5, 2021
16 °C
ವಿಧಾನಸೌಧದಲ್ಲೇ ಶಾಸಕನ ಮೇಲೆ ದಬ್ಬಾಳಿಕೆ

ಕುಸ್ತಿಯ ಕಣವಾದ ವಿಧಾನಸೌಧ l ವಿಧಾನಸಭೆ ವಿಸರ್ಜನೆಗೆ ‘ದೋಸ್ತಿ’ಗಳ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜೀನಾಮೆ ಕೊಡುತ್ತಿರುವ ಶಾಸಕರ ಸಂಖ್ಯೆ ಏರುತ್ತಲೇ ಇದ್ದು ಮೈತ್ರಿ ಸರ್ಕಾರ ಅಲ್ಪಮತದತ್ತ ದಿನೇ ದಿನೇ ಕುಸಿಯತೊಡಗಿದೆ. ಈ ಬೆನ್ನಲ್ಲೇ, ರಾಜೀನಾಮೆ ಕೊಟ್ಟ ಶಾಸಕ ಕೆ.ಸುಧಾಕರ್‌ ಕತ್ತುಪಟ್ಟಿಗೆ ವಿಧಾನಸೌಧದಲ್ಲೇ ಕೈ ಹಾಕಿದ ಸಚಿವರು, ಶಾಸಕರು ಅವರನ್ನು ಎಳೆದೊಯ್ದು ಕೂಡಿಹಾಕಿದ್ದಾರೆ. 

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಂಗಿ ಹರಿದುಕೊಂಡು, ಕಾಗದ ತೂರಿ, ತೋಳು ತಟ್ಟಿದ ಘಟನೆಗಳು ನಡೆದಿದ್ದವು. ಆದರೆ, ಇದೇ ಮೊದಲ ಬಾರಿಗೆ ಶಾಸಕನ ಮೇಲೆ ಅದೇ ಪಕ್ಷದ ಶಾಸಕರು ದಬ್ಬಾಳಿಕೆ ನಡೆಸಿದ ಪ್ರಕರಣವೂ ನಡೆದು ಹೋಗಿದೆ. ಇದರಿಂದಾಗಿ ವಿಧಾನಸೌಧಕ್ಕೆ ಕಪ್ಪುಚುಕ್ಕಿಯೂ ಅಂಟಿಕೊಂಡಂತಾಗಿದೆ.

ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಗುರುವಾರ ಬೆಳಿಗ್ಗೆ ಸಚಿವ ಸಂಪುಟ ಸಭೆ ನಡೆಯಲಿದೆ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ಲೆಕ್ಕಾಚಾರ ದೋಸ್ತಿ ನಾಯಕರ ಮುಂದಿದೆ. ಆದರೆ, ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದಾಗಿ ವಿಧಾನಸಭೆ ವಿಸರ್ಜನೆ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡರೂ ಅದಕ್ಕೆ ರಾಜ್ಯಪಾಲರು ಸಮ್ಮತಿ ಸೂಚಿಸುವುದಿಲ್ಲ. ಹೀಗಾಗಿ, ರಾಜ್ಯಪಾಲರು ಒಂದು ವೇಳೆ ವಿಶ್ವಾಸ ಮತ ಯಾಚಿಸುವಂತೆ ಸೂಚಿಸಿದರೆ, ಇದೇ 12ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ವೇಳೆ ಗೆಲ್ಲುವುದೇ ಆದಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು. ಇಲ್ಲವಾದರೆ, ಸುದೀರ್ಘ ಭಾಷಣ ಮಾಡಿ ವಿಶ್ವಾಸ ಮತ ಯಾಚಿಸದೇ ರಾಜೀನಾಮೆ ಕೊಟ್ಟು ಹೊರನಡೆಯುವ ಚಿಂತನೆ ಮೈತ್ರಿ ನಾಯಕರಲ್ಲಿದೆ.

ಗದ್ದಲದ ಗೂಡು

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಹೊಸಕೋಟೆಯ ಎಂ.ಟಿ.ಬಿ. ನಾಗರಾಜ್ ಅವರು ಸಭಾಧ್ಯಕ್ಷರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು. ಅವರ ಹಿಂದೆಯೇ ರಾಜೀನಾಮೆ ಕೊಟ್ಟು ಹೊರಬಂದ ಸುಧಾಕರ್‌ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್ತಿನ ಸದಸ್ಯ ನಜೀರ್ ಅಹಮದ್‌, ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುತ್ತುವರಿದರು. ಈ ಹಂತದಲ್ಲಿ ಸುಧಾಕರ್ ಅಂಗಿಯ ಕಾಲರ್‌ಗೆ ಕೈ ಹಾಕಿದ ನಜೀರ್ ಅವರು ಅಕ್ಷರಶಃ ಅವರನ್ನು ಮೂರನೇ ಮಹಡಿಗೆ ಎಳೆದೊಯ್ದರು. ಅಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರ ಕೊಠಡಿಯಲ್ಲಿ ಕುಳ್ಳಿರಿಸಿ ದಿಗ್ಬಂಧನ ಹಾಕಿದರು.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಅಲ್ಲಿಗೆ ಕರೆಸಿಕೊಂಡ ನಾಯಕರು, ಸಂಧಾನದ ಯತ್ನ ನಡೆಸಿದರು. ಅಲ್ಲಿಗೆ ದೌಡಾಯಿಸಿದ ಬಿಜೆಪಿ ನಾಯಕರು ಕಚೇರಿ ಮುಂದೆ ಘೋಷಣೆ ಕೂಗಿ, ಧರಣಿ ಆರಂಭಿಸಿದರು. ಇಡೀ ಮೂರನೇ ಮಹಡಿ ಪ್ರಕ್ಷುಬ್ಧವಾಯಿತು. ಈ ಬಗ್ಗೆ ಮಾಹಿತಿ ಪಡೆದ  ರಾಜ್ಯಪಾಲ ವಜುಭಾಯಿ ವಾಲಾ, ನಗರ ಪೊಲೀಸ್ ಕಮಿಷನರ್‌ ಅಲೋಕ್ ಕುಮಾರ್ ಅವರಿಗೆ ಸೂಚನೆ ನೀಡಿ, ಪೊಲೀಸ್ ರಕ್ಷಣೆಯಲ್ಲಿ ಸುಧಾಕರ್ ಅವರನ್ನು ರಾಜಭವನಕ್ಕೆ ಕರೆತರುವಂತೆ ಆದೇಶಿಸಿದರು. ಪೊಲೀಸರ ಮಧ್ಯ ಪ್ರವೇಶದಿಂದ ಇಡೀ ವಿಧಾನಸೌಧ ಗೊಂದಲದ ಗೂಡಾಗಿತ್ತು. 

ರಾಜಭವನವೇ ಗುರಿ

ಶಾಸಕರ ರಾಜೀನಾಮೆ ಪರ್ವ ಬಿರುಸುಗೊಂಡಿದ್ದು, ರಾಜ್ಯ ರಾಜಕೀಯ ದೋಷಾರೋಪ ಹಾಗೂ ಪ್ರತಿಭಟನೆಗಳ ಪೈಪೋಟಿಗೆ ಬುಧವಾರ ಸಾಕ್ಷಿಯಾಯಿತು.

ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿ ಧರಣಿ ನಡೆಸಿದರು. ಬಳಿಕ, ನಿಯೋಗದೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿಗೆ ಸೂಚಿಸಬೇಕು. ಕೊಡದೇ ಇದ್ದರೆ ಸರ್ಕಾರ ವಜಾ ಮಾಡಬೇಕು ಎಂದು ಕೋರಿದರು. 

ಇದರ ಬೆನ್ನಲ್ಲೇ, ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡುತ್ತಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ದೂರಿದ ಕಾಂಗ್ರೆಸ್– ಜೆಡಿಎಸ್‌ ನಾಯಕರು ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು.

ಪ್ರತಿಭಟನೆಯಲ್ಲಿ ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್‌, ಪರಮೇಶ್ವರ, ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು.

ರಾಜ್ಯಪಾಲರು ಏನು ಮಾಡಬಹುದು

* ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿರುವುದರಿಂದ ವಿಶ್ವಾಸ ಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಸೂಚಿಸಬಹುದು.

* ವಿಧಾನಸೌಧದಲ್ಲೇ ಶಾಸಕರ ಮೇಲೆ ಹಲ್ಲೆ ನಡೆದಿದ್ದನ್ನು ಪರಿಗಣಿಸಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಧಾನಸಭೆ ಅಮಾನತ್ತಿನಲ್ಲಿಡಬಹುದು ಅಥವಾ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು.

ಎಚ್‌ಡಿಕೆ ಮುಂದೆ ಎರಡು ಆಯ್ಕೆ

* ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವ ಆಯ್ಕೆ ಮುಖ್ಯಮಂತ್ರಿ ಮುಂದೆ ಇದೆ.

* ವಿಶ್ವಾಸಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಿದರೆ ಅಧಿವೇಶನದಲ್ಲಿ ಸುದೀರ್ಘ
ಭಾಷಣ ಮಾಡಿ ವಿಶ್ವಾಸಮತ ಯಾಚಿಸಬಹುದು ಅಥವಾ ಯಾಚಿಸದೇ ರಾಜೀನಾಮೆ ನೀಡಬಹುದು.

ಮುಂಬೈನಲ್ಲಿ ಡಿಕೆಶಿ ‘ಸಾಹಸ’

10ಕ್ಕೂ ಹೆಚ್ಚು ಶಾಸಕರನ್ನು ಕರೆತರಲು ಮುಂಬೈಗೆ ತೆರಳಿದ್ದ ಡಿ.ಕೆ. ಶಿವಕುಮಾರ್, ಏಳುಗಂಟೆ ಹೋಟೆಲ್ ಮುಂದೆಯೇ ಹರ ‘ಸಾಹಸ’ ನಡೆಸಿದರು. ಜೆಡಿಎಸ್‌ನ ಜಿ.ಟಿ. ದೇವೇಗೌಡ, ಕೆ.ಎಂ. ಶಿವಲಿಂಗೇಗೌಡ ಹಾಗೂ ಸಿ.ಎನ್. ಬಾಲಕೃಷ್ಣ ಅವರ ಜತೆಗಿದ್ದರು.

ಪೊಲೀಸರು ಹೋಟೆಲ್‌ ಒಳಗೆ ಬಿಡಲಿಲ್ಲ. ಶಿವಕುಮಾರ್ ಹಟ ಬಿಡಲಿಲ್ಲ. ಕೊನೆಗೆ ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು, ಅವರನ್ನೆಲ್ಲ ವಾಪಸ್ ಕಳುಹಿಸಿದರು.

ರಾಜೀನಾಮೆ ಕೊಟ್ಟವರು

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಎಂ.ಟಿ.ಬಿ. ನಾಗರಾಜ್‌ ಹಾಗೂ ಕೆ. ಸುಧಾಕರ್ ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ಕೊಟ್ಟಿದ್ದಾರೆ. ಇದರಿಂದ ಮೈತ್ರಿ ಬಲ 101ಕ್ಕೆ ಇಳಿದಿದೆ. ಅಧಿವೇಶನ ಆರಂಭವಾಗುವುದಕ್ಕೆ ಮುನ್ನವೇ, ಇನ್ನಷ್ಟು ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

* ಸುಧಾಕರ್‌ ಕತ್ತಿನ ಪಟ್ಟು ಹಿಡಿದು ಎಳೆದಾಡಿ ಜಾರ್ಜ್‌ ಕೊಠಡಿಯಲ್ಲಿ ಕೂಡಿ ಹಾಕಿ ಗೂಂಡಾಗಿರಿ ಮಾಡಿದ್ದಾರೆ. ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿ ಮರುಕಳಿಸಿದೆ

ಬಿ.ಎಸ್‌.ಯಡಿಯೂರಪ್ಪ, ವಿರೋಧಪಕ್ಷದ ನಾಯಕ, ವಿಧಾನಸಭೆ

* ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ರೌಡಿಗಳಂತೆ ವರ್ತಿಸಿದ್ದಾರೆ. ಲಜ್ಜೆಗೆಟ್ಟ ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಆಮಿಷ ಒಡ್ಡಿ ರಾಜೀನಾಮೆ ಕೊಡಿಸುತ್ತಿದ್ದಾರೆ

ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕ

* ಬಿಜೆಪಿಯು ಪ್ರಜಾಪ್ರಭುತ್ವದ ಎಲ್ಲೆಗಳನ್ನೂ ಮೀರಿ ವರ್ತಿಸಿದೆ. ನಾಗರಿಕ ಸಂಹಿತೆಯನ್ನು ಮೀರಿರುವುದು ಸ್ಪಷ್ಟ ಮತ್ತು ಖಂಡನೀಯ

ಎಚ್‌.ಡಿ.ಕುಮಾರಸ್ವಾಮಿ , ಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು