ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಕಡೆ ಜೆಡಿಎಸ್‌ಗಿಂತ ನೋಟಾ ಮತವೇ ಜಾಸ್ತಿ

Last Updated 10 ಡಿಸೆಂಬರ್ 2019, 1:58 IST
ಅಕ್ಷರ ಗಾತ್ರ

ಬೆಂಗಳೂರು:ಉಪಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಿಸಿದ್ದ 12 ಕ್ಷೇತ್ರಗಳಲ್ಲೂ ನೆಲ ಕಚ್ಚಿದ್ದು, ಮೂರು ಕಡೆ ಪಕ್ಷದ ಅಭ್ಯರ್ಥಿಗಳು ‘ನೋಟಾ’ಕ್ಕಿಂತಲೂ ಕಡಿಮೆ ಮತ ಗಳಿಸಿದ್ದಾರೆ.

ಯಲ್ಲಾಪುರ ಕ್ಷೇತ್ರದಲ್ಲಿ ಚೈತ್ರಾ ಅವರು 1,235 ಮತ ಗಳಿಸಿದ್ದರೆ, ಚಲಾವಣೆಯಾದ ನೋಟಾ 1,444. ರಾಣೆಬೆನ್ನೂರಿನಲ್ಲಿ ಮಲ್ಲಿಕಾರ್ಜುನಪ್ಪ ರುದ್ರಪ್ಪ ಹಲಗೇರಿ 979 ಮತಗಳನ್ನು ಗಳಿಸಿದ್ದರೆ, 1,608 ನೋಟಾ ಮತಗಳು ಚಲಾವಣೆಯಾಗಿವೆ. ಕೆ.ಆರ್‌.ಪುರದಲ್ಲಿ ಸಿ.ಕೃಷ್ಣಮೂರ್ತಿ ಅವರು 2,048 ಮತಗಳನ್ನು ಗಳಿಸಿದ್ದರೆ, ಚಲಾವಣೆಯಾದ ನೋಟಾ ಮತಗಳ ಸಂಖ್ಯೆ 5,184.

ಶಿವಾಜಿನಗರ ಕ್ಷೇತ್ರದಲ್ಲಿ ಚಲಾವಣೆಯಾದ ನೋಟಾ ಮತಗಳಿಗಿಂತ (986) ಸ್ವಲ್ಪ ಹೆಚ್ಚಿನ ಮತಗಳನ್ನು (1,098) ತನ್ವೀರ್‌ ಅಹಮ್ಮದ್‌ ಉಲ್ಲಾ ಗಳಿಸಿಕೊಂಡಿದ್ದಾರೆ.

2ರಲ್ಲಿ ಮಾತ್ರ 2ನೇ ಸ್ಥಾನ: ಜೆಡಿಎಸ್‌ ನಾಲ್ಕು ಕ್ಷೇತ್ರಗಳನ್ನು ತನ್ನ ಪ್ರತಿಷ್ಠೆಯ ಕ್ಷೇತ್ರಗಳನ್ನಾಗಿ ಪರಿಗಣಿಸಿತ್ತು. ಕೆ.ಆರ್.ಪೇಟೆ, ಹುಣಸೂರು ಮತ್ತು ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರಗಳಲ್ಲಿ 2018ರ ಚುನಾವಣೆಯಲ್ಲಿ ಪಕ್ಷದ ಶಾಸಕರು ಗೆದ್ದಿದ್ದರು. ಯಶವಂತಪುರ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ತನ್ನ ಕೈವಶ ಮಾಡಲು ಅದು ಬಹಳ ಪ್ರಯತ್ನ ಪಟ್ಟಿತ್ತು.ಕೆ.ಆರ್‌.ಪೇಟೆ ಮತ್ತು ಯಶವಂತಪುರಗಳಲ್ಲಿ ಮಾತ್ರಪಕ್ಷದ ಅಭ್ಯರ್ಥಿಗಳು 2ನೇ ಸ್ಥಾನ ಪಡೆದಿದ್ದಾರೆ.

‍ಪಕ್ಷೇತರನ ಗೆಲುವಲ್ಲೇ ಖುಷಿ: ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ, ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡರನ್ನು ಬೆಂಬಲಿಸುವುದಾಗಿ ಆರಂಭದಲ್ಲೇ ತಿಳಿಸಿತ್ತು. ಅಲ್ಲಿ ಶರತ್‌ ಗೆಲುವು ಸಾಧಿಸಿರುವುದರಿಂದ ಜೆಡಿಎಸ್‌ ಇದೀಗ ತನ್ನ ಕೊಡುಗೆಯನ್ನೂ ಹೇಳಿಕೊಳ್ಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೆಯಲ್ಲಿ ಜೆಡಿಎಸ್‌ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ದಯನೀಯ ಸೋಲುಫಲಿತಾಂಶ ಬಳಿಕ ಜೆಡಿಎಸ್‌ ಪಕ್ಷವು ‘ಕಿಂಗ್‌ ಮೇಕರ್‌’ ಆಗುವ ಕನಸನ್ನು ಹೊಸಕಿ ಹಾಕಿದ್ದು, ಅಸಮಾಧಾನಗೊಂಡಿರುವ ಪಕ್ಷದ ಹಲವು ಶಾಸಕರನ್ನು ಮುಂದಿನ ದಿನಗಳಲ್ಲಿ ಹಿಡಿದುಟ್ಟುಕೊಳ್ಳುವ ಸವಾಲನ್ನು ಪಕ್ಷದ ವರಿಷ್ಠರು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಠೇವಣಿ ನಷ್ಟ: ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಹಾಗೂ ಜೆಡಿಎಸ್ 8 ಕಡೆಗಳಲ್ಲಿ ಠೇವಣಿ ಕಳೆದುಕೊಂಡಿದೆ. ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ್ ಠೇವಣಿ ಕಳೆದುಕೊಂಡಿದ್ದಾರೆ. ಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ ಜೆಡಿಎಸ್ 12 ಕಡೆಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಮಹಾಲಕ್ಷ್ಮಿ ಲೇಔಟ್ ಸೇರಿದಂತೆ 8 ಕ್ಷೇತ್ರಗಳಲ್ಲಿ ಠೇವಣಿ ಬಂದಿಲ್ಲ.

ಯಶವಂತಪುರ, ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ 2ನೇ ಸ್ಥಾನ, ಚಿಕ್ಕಬಳ್ಳಾಪುರ, ಹುಣಸೂರು ಕ್ಷೇತ್ರಗಳಲ್ಲಿ ಮೂರನೇ ಸ್ಥಾನಕ್ಕೆ ಜೆಡಿಎಸ್ ತೃಪ್ತಿಪಟ್ಟು ಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT