ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ ನೆಲ ಸಂಪತ್ತಿನ ಗಣಿ!

Last Updated 31 ಮೇ 2019, 7:14 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಾಗವನ್ನು ಕಾನೂನು ಇಲಾಖೆ ನೀಡಿದ್ದ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಜೆಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟೆಡ್‌ (ಜಿಂದಾಲ್‌) ಕಂಪನಿಗೆ ಕ್ರಯ ಪತ್ರ ಮಾಡಿಕೊಡುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂ‍ಪುಟ ಸಭೆ ಅನುಮೋದನೆ ನೀಡಿದೆ.

ಸಂಪುಟ ಸಭೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಲ್ಲಿಸಿದ ಪ್ರಸ್ತಾವದಲ್ಲಿರುವ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಟಿಪ್ಪಣಿಯಲ್ಲಿರುವ ಅಂಶಗಳ ಆಧಾರದಲ್ಲಿ ಕೆಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದರೂ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.

ಸಂಡೂರು ತಾಲ್ಲೂಕಿನ ತೋರಣಗಲ್‌ ಮತ್ತು ಕುರೇಕುಪ್ಪ ಗ್ರಾಮಗಳಲ್ಲಿ 2000.58 ಎಕರೆ ಭೂಮಿಯನ್ನು ಎಕರೆಗೆ ₹ 1,22,200, ತೋರಣಗಲ್‌, ಮುಸಿನಾಯಕನಹಳ್ಳಿ ಮತ್ತು ಎರಬನಹಳ್ಳಿ ಗ್ರಾಮಗಳಲ್ಲಿ 1666.73 ಎಕರೆ ಜಮೀನಿಗೆ ₹ 1,50,635 ಬೆಲೆ ನಿಗದಿಪಡಿಸಿ ಕ್ರಯ ಪತ್ರ ಮಾಡಿಕೊಡುವ ಪ್ರಸ್ತಾವಕ್ಕೆ ಇದೇ 27ರಂದು ಒಪ್ಪಿಗೆ ನೀಡಲಾಗಿದೆ.

1666.73 ಎಕರೆ ಜಮೀನು ಮಾರಾಟ ಮಾಡುವಾಗ ಕುಡಿತಿನಿ ವಿದ್ಯುತ್ ಸ್ಥಾವರಕ್ಕಾಗಿ ಕೆಪಿಸಿಎಲ್‌ಗೂ 944 ಎಕರೆ ಪರ್ಯಾಯ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಪರ್ಯಾಯ ಭೂಮಿಯ ಸ್ವಾಧೀನ ವೆಚ್ಚ ಜಿಂದಾಲ್‌ಗೆ ಹಂಚಿಕೆಯಾದ ಭೂಮಿಯ ವೆಚ್ಚಕ್ಕಿಂತ ಹೆಚ್ಚಾದರೆ, ಆ ಮೊತ್ತವನ್ನು ಸೇಲ್‌ ಡೀಡ್‌ ಕರಾರು ಪತ್ರ (2007ರ ಅ. 24) ಅನ್ವಯ ಸರ್ಕಾರಕ್ಕೆ (ಕೆಐಎಡಿಬಿ) ಜಿಂದಾಲ್ ಭರಿಸಬೇಕು ಎಂದು ಷರತ್ತು ವಿಧಿಸಿ ಸಂಪುಟ ಅನುಮೋದನೆ ನೀಡಿದೆ.

ಕಾನೂನು ಇಲಾಖೆ ಆಕ್ಷೇಪ: ‘2000.58 ಎಕರೆ ಜಮೀನು ಹೆಚ್ಚು ವಿಸ್ತೀರ್ಣದಿಂದ ಕೂಡಿದ್ದು, ಖನಿಜ ಸಂಪತ್ತು (ಕಬ್ಬಿಣದ ಅದಿರು) ಹೊಂದಿದೆ. ಮಾರಾಟದ ನಿಜವಾದ ಬೆಲೆ ನಿಗದಿಪಡಿ‌ಸಿ, ಈ ಮೊತ್ತವನ್ನು ಭೋಗ್ಯದಾರರು ಠೇವಣಿ ಮಾಡುವವರೆಗೆ ಸೇಲ್‌ ಡೀಡ್‌ ಜಾರಿಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು’ ಎಂದು 2017 ಡಿ. 12ರಂದು ಕಾನೂನು ಇಲಾಖೆ ಸ್ಪಷ್ಟವಾಗಿ ಹೇಳಿದೆ.

ಆದರೆ, ‘ಇಲ್ಲಿ ಖನಿಜ ಸಂಪತ್ತು ಇಲ್ಲ. ಅಲ್ಲಿ ಸಮಗ್ರ ಉಕ್ಕಿನ ಕಾರ್ಖಾನೆಯನ್ನು ಜಿಂದಾಲ್‌ ಸ್ಥಾಪಿಸಿದೆ’ ಎಂದು ವಾಣಿಜ್ಯ ಇಲಾಖೆ ತನ್ನ ಟಿಪ್ಪಣಿಯಲ್ಲಿ ಪ್ರತಿಪಾದಿಸಿದೆ. ಅಷ್ಟೇ ಅಲ್ಲ, 2018ರ ಮಾರ್ಚ್‌ 3ರಂದು ರಾಜ್ಯ ಅಡ್ವೊಕೇಟ್‌ ಜನರಲ್‌, ‘ಮಾರಾಟ ಬೆಲೆ ನಿಗದಿ‍ಪಡಿಸಿ, ಸಚಿವ ಸಂಪುಟದ ಅನುಮೋದನೆ ‍ಪಡೆದ ನಂತರ ಗುತ್ತಿಗೆ ಕೊಟ್ಟವರ ಪರವಾಗಿ ಸೇಲ್‌ ಡೀಡ್‌ ಜಾರಿಗೊಳಿಸಬಹುದು’ ಎಂದು ಅಭಿಪ್ರಾಯ ನೀಡಿದ್ದಾರೆ ಎಂದೂ ಇಲಾಖೆ ಹೇಳಿದೆ.

2005ರಂದು ನಡೆದ ಸಂಪುಟ ಸಭೆಯಲ್ಲಿ ಸೌತ್‌ ವೆಸ್ಟ್‌ ಐರನ್‌ ಸ್ಟೀಲ್‌ ಕಂಪನಿಗೆ ತೋರಣಗಲ್‌ನಲ್ಲಿ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಪ್ರತಿ ಎಕರೆಗೆ ₹ 90,000ದಂತೆ 2,000.58 ಎಕರೆ ಭೂಮಿ ಹಂಚಿಕೆ ಮಾಡಿ ಅನುಮೋದನೆ ನೀಡಲಾಗಿತ್ತು. ಬಳಿಕ ಈ ಜಾಗವನ್ನು ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಗೆ ವರ್ಗಾಯಿಸುವ ಪ್ರಸ್ತಾವನೆಗೆ 2006ರ ಜೂನ್‌ 12ರಂದು ಮಂಜೂರಾತಿ ನೀಡಲಾಗಿತ್ತು. ಈ ಕಂಪನಿಗೆ ಆರು ವರ್ಷಗಳ ಲೀಸ್‌ ಕಂ ಸೇಲ್‌ ಆಧಾರದಲ್ಲಿ ನೀಡಲಾಗಿತ್ತು.

ಕಂಪನಿಗೆ ಘಟಕದ ವಿಸ್ತರಣಾ ಯೋಜನೆಗೆ ತೋರಣಗಲ್‌, ಮುಸಿನಾಯಕನಹಳ್ಳಿ ಮತ್ತು ಎರಬನಹಳ್ಳಿ ಗ್ರಾಮಗಳಲ್ಲಿ 10 ವರ್ಷ ಅವಧಿಗೆ ಲೀಸ್‌ ಕಂ ಸೇಲ್‌ ಆಧಾರದಲ್ಲಿ 2007ರಲ್ಲಿ ಸರ್ಕಾರ ಜಮೀನು ನೀಡಿತ್ತು. ಆಗ ತಾತ್ಕಾಲಿಕವಾಗಿ ಎಕರೆಗೆ ₹ 1,22,199 ಬೆಲೆ ನಿಗದಿಪಡಿಸಲಾಗಿತ್ತು. ಸೇಲ್‌ ಕಂ ಡೀಡ್‌ ಅವಧಿ ಮುಕ್ತಾಯಗೊಂಡಿತ್ತು. ಹೀಗಾಗಿ ಕ್ರಯ ಪತ್ರ ಮಾಡಿಕೊಡುವಂತೆ ಜಿಂದಾಲ್‌ ಕಂಪನಿ ಕೋರಿಕೆ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT