ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ ವಿರುದ್ಧ ಈಗೇಕೆ ಹೋರಾಟ? ಗಣಿ ಪ್ರದೇಶ ಪಡೆಯಲು ತಂತ್ರವೇ?

ಪ್ರಶ್ನೆಗಳನ್ನು ಹುಟ್ಟಿ ಹಾಕಿದ ಶಾಸಕ ಆನಂದ್‌ಸಿಂಗ್‌ ರಾಜೀನಾಮೆ
Last Updated 2 ಜುಲೈ 2019, 20:24 IST
ಅಕ್ಷರ ಗಾತ್ರ

ಬಳ್ಳಾರಿ: 2018ರ ಮೇ ತಿಂಗಳಲ್ಲಿ ಶಾಸಕರಾದ ಬಳಿಕ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ದನಿ ಎತ್ತದೇ ಮಗುಮ್ಮಾಗಿದ್ದ, ಜನರಿಂದ ದೂರವೇ ಉಳಿದಿದ್ದ ಆನಂದ್‌ಸಿಂಗ್‌ ಅವರ ರಾಜೀನಾಮೆ ಪ್ರಕರಣವು, ಅವರ ನಡೆಯ ಹಿಂದಿನ ನಿಜವಾದ ಆಶಯವೇನು ಎಂಬ ಬಗ್ಗೆ ಎಲ್ಲೆಡೆ ಕುತೂಹಲ ಮೂಡಿಸಿದೆ.

ಆಗ ಕಾರ್ಯಕರ್ತರ ವಿರೋಧವನ್ನು ಲೆಕ್ಕಿಸದೇ ಸಿಂಗ್‌ ಅವರನ್ನು ಬಿಜೆಪಿಯಿಂದ ಸೆಳೆದುಕೊಂಡ ಕಾಂಗ್ರೆಸ್‌ ಈಗ ಅವರಿಂದಲೇ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.

ಅವರದ್ದು ಅವಕಾಶವಾದಿ ರಾಜಕೀಯವೇ? ಗಣಿಗಾರಿಕೆ ಉದ್ದಿಮೆಯ ತಂತ್ರಗಾರಿಕೆಯೇ? ಚುನಾವಣೆಯ ಸಂದರ್ಭದಲ್ಲಿ ತೊರೆದಿದ್ದ ಬಿಜೆಪಿಯ ಸಖ್ಯವನ್ನು ಮತ್ತೆ ಬಯಸಿದ್ದಾರೆಯೇ? ಜಿಂದಾಲ್‌ ಜೊತೆಗೆ ಇರಬಹುದಾದ ಹಳೇ ವೈಷಮ್ಯ ಸಾಧನೆಯೇ ಅವರ ಉದ್ದೇಶವೇ? ಮೈತ್ರಿ ಸರ್ಕಾರದ ಗಮನ ಸೆಳೆದು ಸಚಿವರಾಗುವ ಪ್ರಯತ್ನವೇ? ಇದಕ್ಕೆ ಜಿಂದಾಲ್‌ ಒಂದು ನೆಪವೇ?

ಇಂಥ ಪ್ರಶ್ನೆಗಳ ನಡುವೆಯೇ, ‘ಅವರ ಇದುವರೆಗಿನ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಜಿಂದಾಲ್‌ ವಿರುದ್ಧ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ’ ಎಂಬ ಜನಾಭಿಪ್ರಾಯವೂ ಆಕ್ರೋಶದ ರೂಪದಲ್ಲಿ ವ್ಯಕ್ತವಾಗಿದೆ.

ಜಿಂದಾಲ್‌ಗೆ ಭೂಮಿ ನೀಡಿ ಅತಂತ್ರರಾದವರ ಪರವಾಗಿ ತೋರಣಗಲ್‌ನಲ್ಲಿ ಧರಣಿ, ಪ್ರತಿಭಟನೆ ನಡೆಸುತ್ತಿರುವ ಜನ,‘ಜಿಂದಾಲ್‌ಗೆ 3,667 ಎಕರೆ ಜಮೀನು ಮಾರಾಟ ಮಾಡುವ ನಿರ್ಧಾರವನ್ನು ವಿರೋಧಿಸಿಯೇ ರಾಜೀನಾಮೆ ನೀಡಿರುವೆ’ ಎಂದು ಸಿಂಗ್ ಹೇಳಿಕೆಯನ್ನು ಒಪ್ಪುತ್ತಿಲ್ಲ. ಸಿಂಗ್‌ ಮತ್ತು ಅನಿಲ್‌ಲಾಡ್‌ ಅವರ ಜಂಟಿ ವಿರೋಧವನ್ನು ‘ಕೇವಲ ರಾಜಕೀಯ’ ಎಂದು ಟೀಕಿಸುತ್ತಿದ್ದಾರೆ.

ಇದೇ ವೇಳೆ, ಓವರ್‌ಲೋಡ್‌ ಮೂಲಕ ಅಕ್ರಮವಾಗಿ ಜಿಂದಾಲ್‌ ಸಂಸ್ಥೆಗೆ ಅದಿರು ಮಾರಾಟ ಮಾಡಿರುವ ಆರೋಪವೂ ಸಿಂಗ್‌ ಮೇಲಿದೆ. ಹೀಗಾಗಿ, ಜಿಂದಾಲ್‌ಗೆ ಅದಿರು ಮಾರಾಟ ಮಾಡುವ ಸಂದರ್ಭದಲ್ಲಿ ವ್ಯಕ್ತವಾಗದ ವಿರೋಧವು ಈಗ ಏಕೆ ಎಂಬ ಪ್ರಶ್ನೆಯು ಸಹಜವಾಗಿಯೇ ಮೂಡುತ್ತದೆ. ಆಗ ಇಲ್ಲಿನ ಭೂಸಂಪತ್ತಿನ ಬಗ್ಗೆ ಇಲ್ಲದ ಇಷ್ಟೊಂದು ಕಾಳಜಿ ಈಗ ಏಕೆ? ಜಿಂದಾಲ್‌ ಕಾರ್ಖಾನೆ ಸ್ಥಾಪನೆಯಾದಂದಿನಿಂದ ಸಂತ್ರಸ್ತರಾದ ಜನರ ಪರವಾಗಿ ಸಿಂಗ್‌ ಇಲ್ಲಿಯವರೆಗೆ ಎಷ್ಟು ಬಾರಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ?

ನಿಯಮ ಮೀರಿ ಅಕ್ರಮ ಗಣಿಗಾರಿಕೆ ನಡೆಸಿದ ಪರಿಣಾಮವಾಗಿಯೇ ಗಣಿ ಗುತ್ತಿಗೆ ಪ್ರದೇಶಗಳನ್ನು ಕಳೆದುಕೊಂಡವರ ಸಾಲಿನಲ್ಲಿ ಆನಂದ್‌ಸಿಂಗ್‌ ಕೂಡ ಇದ್ದಾರೆ.ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಿಸಿರುವ ಆರೋಪದ ಮೇರೆಗೆ ಸಿಂಗ್‌ ಜೈಲುವಾಸವನ್ನೂ ಅನುಭವಿಸಿದ್ದಾರೆ.

ಇತ್ತೀಚೆಗೆ ಅನಿಲ್‌ಲಾಡ್‌ ಜೊತೆಗೆ ನಗರದಲ್ಲಿ ಆನಂದ್‌ಸಿಂಗ್‌ ಸುದ್ದಿಗೋಷ್ಠಿ ನಡೆಸಿದ ವೇಳೆ, ‘ಜಿಂದಾಲ್‌ನ ಡಾಂಬರು ಉತ್ಪಾದನೆ ಘಟಕದ ವಿರುದ್ಧ ಪ್ರತಿಭಟನೆ ನಡೆಸಿದಾಗ ಸ್ಥಳೀಯರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು. ಆಗ ನೀವು ಎಲ್ಲಿ ಹೋಗಿದ್ದಿರಿ’ ಎಂದು ಸುದ್ದಿಗಾರರು ಪ್ರಶ್ನಿಸಿದ್ದರು. ‘ಆಗ ನಾನೂ ಊರಲ್ಲಿ ಇರಲಿಲ್ಲ’ ಎಂದು ಸಿಂಗ್‌ ಉತ್ತರಿಸಿ ಕೈತೊಳೆದುಕೊಂಡರು.

ಶಾಸಕರಾಗಿದ್ದಾಗ ಜಿಲ್ಲೆಯ ಸಂಪತ್ತಿನ ರಕ್ಷಣೆ ಬಗ್ಗೆ ದನಿ ಎತ್ತದ ಸಿಂಗ್‌, ರಾಜೀನಾಮೆ ನೀಡಿ, ಜಿಂದಾಲ್‌ ವಿರುದ್ಧ ಹೇಗೆ ಜನ ಚಳವಳಿಯನ್ನು ರೂಪಿಸಬಲ್ಲರು ಎಂಬ ಪ್ರಶ್ನೆಯನ್ನು ಚಳವಳಿ ನಡೆಸುತ್ತಿರುವ ಜನರೇ ಕೇಳುತ್ತಿದ್ದಾರೆ.

ಭಿನ್ನದನಿಗಳ ವಿವಾದ
ಜಿಂದಾಲ್‌ಗೆ ಭೂಮಿ ಮಾರಾಟ ಎಂಬುದು ಜಿಲ್ಲೆಯಲ್ಲಿ ಈಗ ಹಲವು ಭಿನ್ನದನಿಗಳ ವಿವಾದ.

ಕಾಂಗ್ರೆಸ್‌ನ ಆರು ಶಾಸಕರ ಪೈಕಿ ಆನಂದ್‌ಸಿಂಗ್‌ ಅವರದ್ದು ಒಂಟಿ ವಿರೋಧ. ಅವರಿಗೆ ಮಾಜಿ ಶಾಸಕ ಅನಿಲ್‌ಲಾಡ್‌ ಜೊತೆಯಾಗಿದ್ದಾರೆ.

ಸಂಡೂರಿನವರೇ ಆದ ವೈದ್ಯಕೀಯ ಸಚಿವ ಈ.ತುಕಾರಾಂ, ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಹಡಗಲಿಯ ಪಿ.ಟಿ.ಪರಮೇಶ್ವರನಾಯ್ಕ, ಹಗರಿಬೊಮ್ಮನಹಳ್ಳಿಯ ಎಲ್‌.ಬಿ.ಪಿ ಭೀಮಾನಾಯ್ಕ ಅವರು ಇದುವರೆಗೂ ಜಿಂದಾಲ್‌ ವಿರುದ್ಧ ದನಿ ಎತ್ತಿಲ್ಲ.

ಶಾಸಕರ ನಡುವಿನ ಈ ಭಿನ್ನದನಿಯೂ, ಜಿಂದಾಲ್‌ ವಿರುದ್ಧದ ಹೋರಾಟ ಬಿರುಸಾಗದಂತೆ ತಡೆದಿದೆ. ಆದರೆ ಜನರ ಹೋರಾಟ ತೀವ್ರಗೊಂಡಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT