ಭಾನುವಾರ, ಸೆಪ್ಟೆಂಬರ್ 22, 2019
23 °C
‘ಪಕ್ಷ ವಿರೋಧಿ ಚಟುವಟಿಕೆ'

ಸಿದ್ದರಾಮಯ್ಯರನ್ನು ಕಾಂಗ್ರೆಸ್ ಯಾವಾಗ ಉಚ್ಛಾಟಿಸುತ್ತದೋ ಗೊತ್ತಿಲ್ಲ: ಈಶ್ವರಪ್ಪ

Published:
Updated:
Prajavani

ಕಲಬುರ್ಗಿ: ‘ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದಲೇ ಸಿದ್ದರಾಮಯ್ಯ ಜೆಡಿಎಸ್‌ನಿಂದ ಉಚ್ಛಾಟನೆಗೊಂಡಿದ್ದಾರೆ. ಇಲ್ಲಿ (ಕಾಂಗ್ರೆಸ್‌ನಲ್ಲಿ)ಯೂ ಅದನ್ನು ಮುಂದುವರಿಸಿದರೆ ಯಾವಾಗ ಉಚ್ಛಾಟನೆ ಆಗುತ್ತಾರೋ ಗೊತ್ತಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ತಾವು ಜೆಡಿಎಸ್‌ನಿಂದ ಹೊರಬಂದಿಲ್ಲ, ಎಚ್.ಡಿ.ದೇವೇಗೌಡರೇ ಹೊರಹಾಕಿದ್ದಾರೆ ಎಂದು ಹೇಳಿದ್ದಾರೆ. ಇಲ್ಲೂ ಕೂಡ ಅವರನ್ನು ಯಾವಾಗ ಹೊರಹಾಕುತ್ತಾರೋ ಗೊತ್ತಿಲ್ಲ’ ಎಂದು ಪುನರುಚ್ಚರಿಸಿದರು.

‘ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನದ ಹುಚ್ಚು ಹಿಡಿದಿದೆ. ಹೀಗಾಗಿ ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಗುಂಪಿನ ಸದಸ್ಯರು ಕೂಗಿ ಕೂಗಿ ಹೇಳುತ್ತಿದ್ದಾರೆ. ಇದರಿಂದಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಅಸಹಾಯಕರಾಗಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ಹಿಡಿದಿರುವ ಹುಚ್ಚಿಗೆ ವೇಣುಗೋಪಾಲ್‌, ಖರ್ಗೆ ಅವರು ಔಷಧಿ ಕೊಡಬೇಕು. ಇಲ್ಲವೇ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಎಚ್ಚರಿಕೆ ಹಾಗೂ ನೋಟಿಸ್ ನೀಡಬೇಕು. ಇದೂ ಆಗದಿದ್ದರೆ ಸಿದ್ದರಾಮಯ್ಯ ಅವರಿಗೆ ಹಿಡಿದಿರುವ ಹುಚ್ಚು ಸರಿಯಾಗಿದೆ ಎಂದು ಒಪ್ಪಿಕೊಳ್ಳಬೇಕು’ ಎಂದರು.

Post Comments (+)