ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಪರೀಕ್ಷೆಗೆ ಬೇರೆ ಜಿಲ್ಲೆಯ 475 ವಿದ್ಯಾರ್ಥಿಗಳು

ಉತ್ತರ ಪ್ರದೇಶದ ಗೋರಖಪುರದಿಂದ ಬರುವ ವಿದ್ಯಾರ್ಥಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ
Last Updated 12 ಜೂನ್ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಪದವಿಪೂರ್ವ ಶಿಕ್ಷಣ ಇಲಾಖೆಯು ಹಲವು ವಿದ್ಯಾರ್ಥಿ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲುಕೊರೊನಾ ವೈರಾಣು ಕಾರಣವಾಗಿದ್ದು,ಬೇರೆ ಜಿಲ್ಲೆಗಳ ಕಾಲೇಜುಗಳಲ್ಲಿ ಓದುತ್ತಿರುವ, ಆದರೆ, ಕಾರಣಾಂತರಗಳಿಂದ ಕಲಬುರ್ಗಿ ಜಿಲ್ಲೆಯಲ್ಲೇ ಉಳಿದುಕೊಂಡಿರುವ 475 ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ಬರೆಯಲು ಅವಕಾಶ ದೊರೆತಿದೆ.

ಅವರ ಪೈಕಿ ಒಬ್ಬ ವಿದ್ಯಾರ್ಥಿಯ ಕಾಲೇಜು ಬೆಂಗಳೂರಿನಲ್ಲಿದ್ದು, ಪ್ರಸ್ತುತ ಉತ್ತರ ಪ್ರದೇಶದ ಗೋರಖಪುರದಲ್ಲಿದ್ದಾರೆ. ಸ್ವಂತ ಜಿಲ್ಲೆ ಕಲಬುರ್ಗಿಯಲ್ಲೇ ಪರೀಕ್ಷೆ ಬರೆಯಲು ಬಯಸಿರುವುದರಿಂದ ಜಿಲ್ಲಾಡಳಿತ ಆ ವಿದ್ಯಾರ್ಥಿ ಜಿಲ್ಲೆಗೆ ಬರಲು ಪಾಸ್‌ ವ್ಯವಸ್ಥೆ ಮಾಡಿದೆ. ಗೋರಖಪುರದಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಬರುವ ವಿದ್ಯಾರ್ಥಿ ಅಲ್ಲಿಂದ ಕಾರ್‌ ಮೂಲಕ ಕಲಬುರ್ಗಿಗೆ ಬಂದು ಪರೀಕ್ಷೆ ಬರೆಯಲಿದ್ದಾರೆ.

ಅದೇ ರೀತಿ ಲಾಕ್‌ಡೌನ್‌ ಆರಂಭವಾದ ಬಳಿಕ ವಿವಿಧ ಕಾರಣಗಳಿಗಾಗಿ ಮಹಾರಾಷ್ಟ್ರಕ್ಕೆ ತೆರಳಿರುವ 6 ವಿದ್ಯಾರ್ಥಿಗಳು ವಾಪಸ್‌ ಜಿಲ್ಲೆಗೆ ಬಂದು ಪರೀಕ್ಷೆ ಬರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ.

ಧಾರವಾಡ, ಬಳ್ಳಾರಿ, ಮೈಸೂರು ಹಾಗೂ ಮೂಡುಬಿದಿರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಲಾಕ್‌ಡೌನ್‌ ಇಲ್ಲದಿದ್ದರೆ ಅಲ್ಲಿಯೇ ಪರೀಕ್ಷೆ ಬರೆಯಬೇಕಿತ್ತು. ಆದರೆ, ಕೊರೊನಾ ವೈರಾಣು ಹರಡುತ್ತಿರುವುದರಿಂದ ವಿದ್ಯಾರ್ಥಿಗಳ ನೆರವಿಗೆ ಬಂದಿರುವ ಇಲಾಖೆ ಅವರು ಇರುವ ಸ್ಥಳದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿದೆ. ಅದಕ್ಕಾಗಿ, ಮುಂಚೆಯೇ ಪದವಿಪೂರ್ವ ಶಿಕ್ಷಣ ಇಲಾಖೆ ಹಾಲ್‌ ಟಿಕೆಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ.

ಬೇರೆ ಜಿಲ್ಲೆಯ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕಲಬುರ್ಗಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿರುವಂತೆ ಜಿಲ್ಲೆಯ ಕಾಲೇಜುಗಳಲ್ಲಿ ಓದುತ್ತಿರುವ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇರೆ ಜಿಲ್ಲೆಯಿಂದ ಬರುವ ಪ್ರತಿಯೊಬ್ಬ ವಿದ್ಯಾರ್ಥಿ ವಿವರವನ್ನು ಪಡೆಯುತ್ತಿದ್ದೇವೆ. ಲಾಕ್‌ಡೌನ್‌ ಕಾರಣಕ್ಕಾಗಿ ಅವರು ಪರೀಕ್ಷೆಯಿಂದ ವಂಚಿತರಾಗಬಾರದು ಎಂಬುದೇ ಇಲಾಖೆಯ ಕಾಳಜಿಯಾಗಿದೆ. ದೈಹಿಕ ಅಂತರ ಕಾಪಾಡುವುದಕ್ಕಾಗಿ ಒಂದು ಕೊಠಡಿಯಲ್ಲಿ ಆರು ಬೆಂಚ್ ಇರಿಸಲಾಗುತ್ತಿದೆ.‌ ಐದು ಜನ ಕುಳಿತುಕೊಳ್ಳುವ ಬೆಂಚ್‌ನಲ್ಲಿ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಒಟ್ಟಾರೆ ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿದೆ’ ಎಂದು ಅವರು ವಿವರಿಸಿದರು.

ಥರ್ಮಲ್ ಸ್ಕ್ರೀನಿಂಗ್ ಸಾಧ್ಯವೇ? ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಲು ನಿಯೋಜಿಸುವ ಸಾಧ್ಯತೆ ಇದೆ. ಆದರೆ, 22 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್‌ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅದರ ಬದಲಾಗಿ ಜ್ವರದಿಂದ ಬಳಲುತ್ತಿರುವ ಶಂಕಿತ ವಿದ್ಯಾರ್ಥಿಗಳನ್ನು ಮಾತ್ರ ಥರ್ಮಲ್ ತಪಾಸಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಉಪನ್ಯಾಸಕರೊಬ್ಬರು ತಿಳಿಸಿದರು.

ಹಳ್ಳಿಯ ವಿದ್ಯಾರ್ಥಿಗಳನ್ನು ಕರೆತರಲು ಉಚಿತ ವಾಹನ

‌ಸಾರಿಗೆ ಸಂಪರ್ಕದಿಂದ ದೂರವೇ ಉಳಿದಿರುವ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು ಪದವಿಪೂರ್ವ ಶಿಕ್ಷಣ ಇಲಾಖೆ ಉಚಿತ ವಾಹನ ಸೇವೆಯನ್ನು ಒದಗಿಸಲಿದೆ. ಇದಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಸ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಮುಂಚೆಯೇ ವಿದ್ಯಾರ್ಥಿಗಳ ಮಾಹಿತಿ ಪಡೆದು ಅಲ್ಲಿಗೆ ವಾಹನಗಳನ್ನು ಕಳಿಸಿಕೊಡಲಾಗುವುದು. ಅಲ್ಲದೇ, ತಮ್ಮ ಪ್ರವೇಶ ಪತ್ರ ತೋರಿಸಿದರೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿಯೂ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ ಎಂದು ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT