ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ ಬಂಡೂರಿ ಯೋಜನೆ: ಕಾನೂನು ತಜ್ಞರ ಸಲಹೆ ಪಡೆಯಲು ಜನಪ್ರತಿನಿಧಿಗಳ ತೀರ್ಮಾನ

ಸರ್ವಪಕ್ಷಗಳ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಧಾರ * ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ನಡೆದ ಸಭೆ
Last Updated 5 ಜನವರಿ 2020, 9:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಕುರಿತು ಚರ್ಚಿಸಲು ನಗರದಲ್ಲಿ ಮೊದಲ ಬಾರಿಗೆ ನಡೆದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಸರ್ವಪಕ್ಷಗಳ ಜನಪ್ರತಿನಿಧಿಗಳ ಸಭೆಯಲ್ಲಿ ಈಗಿನ ಸಮಸ್ಯೆ ಪರಿಹರಿಸಲು ಕಾನೂನು ತಜ್ಞರ ಸಲಹೆ ಪಡೆಯಲು ತೀರ್ಮಾನಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಬಿಜೆಪಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಅರವಿಂದ ಬೆಲ್ಲದ, ಜೆಡಿಎಸ್‌ನ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಪಾಲ್ಗೊಂಡಿದ್ದರು.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊರಟ್ಟಿ ‘ಮಹದಾಯಿ ವಿಷಯದಲ್ಲಿ ಹಿಂದೆ ಏನಾಯಿತು ಎನ್ನುವುದರ ಬಗ್ಗೆ ಪರಸ್ಪರ ದೂರುವುದನ್ನು ಬಿಟ್ಟು ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗಿದೆ. ಅಂತರ ರಾಜ್ಯಗಳ ನದಿ ವಿವಾದವಾಗಿರುವ ಕಾರಣ ಮತ್ತೊಂದು ಸಮಸ್ಯೆಗೆ ಕಾರಣವಾಗದಂತೆ ಮುಂದಿನ ಹೆಜ್ಜೆ ಇಡಬೇಕಾಗಿದೆ’ ಎಂದರು.

‘ಉತ್ತರ ಕರ್ನಾಟಕದ ಜನರ ಹಿತಾಸಕ್ತಿ ಕಾಪಾಡಲು ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಒಂದಾಗಿ ಸಭೆ ಮಾಡುವ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಈಗ ಮೊದಲ ಪ್ರಯತ್ನವಾಗಿದೆ. ಕಾನೂನು ತಜ್ಞರ ಸಲಹೆ ಪಡೆದ ಬಳಿಕ ಎಲ್ಲ ಜನಪ್ರತಿನಿಧಿಗಳು ಸೇರಿ ಮತ್ತೊಮ್ಮೆ ಸಭೆ ನಡೆಸುತ್ತೇವೆ’ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ ‘ನಾವು ನಮ್ಮ ಜನರ ಹಿತಾಸಕ್ತಿಗೆ ಹೋರಾಟ ಮಾಡುವಂತೆ ಗೋವಾ ಕೂಡ ತನ್ನ ಹೋರಾಟ ಮಾಡುತ್ತಿದೆ. ಆದ್ದರಿಂದ ಅತ್ಯಂತ ಜಾಣ್ಮೆಯಿಂದ ಮಹದಾಯಿ ವಿವಾದವನ್ನು ಪರಿಹರಿಸಬೇಕಾಗಿದೆ. ಇದಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದ್ದು, ಪ್ರಯತ್ನ ಮುಂದುವರಿಯುತ್ತದೆ. ಜನಪ್ರತಿನಿಧಿಗಳು ಪರಸ್ಪರ ದೂರದೇ ಅಭಿವೃದ್ಧಿಯ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ’ ಎಂದರು.

ಬಹುತೇಕ ಜನಪ್ರತಿನಿಧಿಗಳು ಗೈರು

ಮಹದಾಯಿ ನದಿ ವ್ಯಾಪ್ತಿಯ ಧಾರವಾಡ, ಗದಗ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಶಾಸಕರು, ಸಚಿವರು, ಸಂಸದರು ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಖುದ್ದು ಹೊರಟ್ಟಿ ಅವರೇ ಮನವಿ ಮಾಡಿ, ಪತ್ರಗಳನ್ನು ಕಳುಹಿಸಿದ್ದರು. ಆದರೂ, ಬಹುತೇಕ ಜನಪ್ರತಿನಿಧಿಗಳು ಗೈರಾಗಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ ‘ಬಹಳಷ್ಟು ಜನಪ್ರತಿನಿಧಿಗಳಿಗೆ ಬೇರೆ ಬೇರೆ ಕಾರಣದಿಂದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಅವರು ನನಗೆ ಫೋನ್‌ ಮಾಡಿ, ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಬದಾಮಿ ಶಾಸಕ ಸಿದ್ದರಾಮಯ್ಯ ಕೂಡ ಸಭೆಗೆ ಒಪ್ಪಿಗೆ ಪತ್ರ ಕಳುಹಿಸಿದ್ದಾರೆ. ಮುಂದಿನ ಸಭೆಯಲ್ಲಿ ಎಲ್ಲರೂ ಭಾಗವಹಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT