ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ ಚಲೋ: ಡಿ.ಕೆ ಸಹೋದರರ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ

Last Updated 13 ಜನವರಿ 2020, 9:48 IST
ಅಕ್ಷರ ಗಾತ್ರ
ADVERTISEMENT
""

ರಾಮನಗರ: ಯೇಸು ಪ್ರತಿಮೆ ನಿರ್ಮಾಣಕ್ಕೆ ಸಹಕರಿಸುವುದನ್ನು ಬಿಡದೇ ಹೋದಲ್ಲಿ ಡಿ.ಕೆ. ಸಹೋದರರ ವಿನಾಶ ಖಚಿತ ಎಂದು ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ್ಯ ವಿಭಾಗದ ಪ್ರಮುಖರಾದ ಕಲ್ಲಡ್ಕ‌ ಪ್ರಭಾಕರ ಭಟ್ ಎಚ್ಚರಿಸಿದರು.

ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ‌ ನೇತೃತ್ವದಲ್ಲಿ ಸೋಮವಾರ ನಡೆದ ಕನಕಪುರ ಚಲೋ ಜಾಥಾ‌ ಹಾಗೂ ಆಗ್ರಹ ಸಮಾವೇಶದಲ್ಲಿ ಅವರು ಮಾತನಾಡಿದರು. ಯೇಸು ಪ್ರತಿಮೆ ಕಟ್ಟಿ ಮತಾಂತರಕ್ಕೆ ಮುಂದಾದವರಿಗೆ ಡಿ.ಕೆ‌. ಸಹೋದರರು ಸಹಕಾರ ನೀಡುತ್ತಿದ್ದಾರೆ. ಆದರೆ ಬಂಡೆ ಒಡೆದಂತೆ ಹಿಂದೂ ಧರ್ಮ ಒಡೆಯಲು ಬಿಡುವುದಿಲ್ಲ‌. ಧರ್ಮಕ್ಕಾಗಿ ಬಲಿದಾನಕ್ಕೆ ಸಿದ್ಧರಿದ್ದೇವೆ. ನಿಮ್ಮ ಬಲಿದಾನವನ್ನೂ ಮಾಡುತ್ತೇವೆ ಎಂದು ಎಚ್ಚರಿಸಿದರು.

'ನಿಮಗೆ ನಿಮ್ಮ ತಂದೆ ತಾಯಿ ಶಿವ, ಸುರೇಶ ಎಂಬ ಹೆಸರಿಟ್ಟಿದ್ದಾರೆ. ನಿಮ್ಮ ಮಕ್ಕಳು ಕೃಷ್ಣ, ಮಾಧವ ಆಗಬೇಕೇ ಹೊರತು ಮಹಮ್ಮದ್ ಅಲ್ಲ‌. ಮಕ್ಕಳು, ಮೊಮ್ಮಕ್ಕಳು ಕೂತು ತಿಂದರೂ‌ ಕರಗದಷ್ಟು ಆಸ್ತಿ ಮಾಡಿದ್ದೀರಿ. ಅದರಲ್ಲಿ ಸರ್ಕಾರ ಹಿಡಿದದ್ದು ಅತ್ಯಲ್ಪ. ಇನ್ನಾದರೂ ಧರ್ಮ ವಿರೋಧಿ ಬುದ್ದಿ ಬಿಡಿ' ಎಂದು ಕಿಡಿಕಾರಿದರು.

'ಹಿಂದಿನ ಸರ್ಕಾರದಲ್ಲಿ ಮಂತ್ರಿ ಆಗಿದ್ದವರು ಇಂದು ಕಂತ್ರಿ ಆಗಿದ್ದಾರೆ. ಮುಂದೆ ಮುನೇಶ್ವರದ ಪಾದತಲದಲ್ಲಿ ನಿಮ್ಮ ತಲೆ ಇಡುವ ದಿನ ಬರುತ್ತದೆ. ಇಂದು ನಿಮ್ಮದೇ ಕ್ಷೇತ್ರದಲ್ಲಿ ನಿಮ್ಮ ಜನರೇ ಧ್ವನಿ ಎತ್ತಿರುವುದು ಅದಕ್ಕೆ ಸಾಕ್ಷಿ'. 'ಸಿದ್ದರಾಮಯ್ಯ ಜೊತೆಗೂಡಿ ನಮ್ಮ ಶಾಲೆಯ ಮಕ್ಕಳ ಅನ್ನಕ್ಕೆ ಕಲ್ಲು ಹಾಕಿದವರು ನೀವು‌. ಮಂಗಳೂರು ಗಲಭೆಯಲ್ಲಿ ಬಿದ್ದ ಕಲ್ಲುಗಳೂ ನಿಮ್ಮವೇ ಇರಬೇಕು' ಎಂದು ಲೇವಡಿ ಮಾಡಿದರು.

'ಮದರ್ ಥೆರೆಸಾ ಸೇವೆ ನೆಪದಲ್ಲಿ ದೇಶದ ಬಹಳಷ್ಟು ಮಂದಿಯನ್ನು ಕ್ತೈಸ್ತ ಧರ್ಮಕ್ಕೆ ಮತಾಂತರ ಮಾಡಿದರು. ಇಂದು ಇಂಗ್ಲೆಂಡ್, ಅಮೆರಿಕಾದ ಮಿಶನರಿಗಳು ದೇಶದಲ್ಲಿ ಆ ಕೆಲಸ ಮುಂದುವರಿಸಿವೆ. ದೇಶದ ಜನರನ್ನೆಲ್ಲ ಕ್ರಿಸ್ತನ ಶಿಷ್ಯರನ್ನಾಗಿ ಮಾಡುವುದೇ ಅವರ ಉದ್ದೇಶ'. ಬೆಟ್ಟದಲ್ಲಿ ಯೇಸು ಪ್ರತಿಮೆ ಬದಲಿಗೆ ಮುನೇಶ್ವರನ ದೇಗುಲ ಕಟ್ಟುವ ನಿರ್ಧಾರಕ್ಕೆ ಬಂದಿದ್ದೇವೆ. ಪ್ರತಿಮೆಗೆ ನೀಡಲಾದ ಜಾಗ ಹಿಂಪಡೆವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು.

ಹಿಂದೂ ಜಾಗರಣ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಸಿಂಗ್ ವೇದಿಕೆಯಲ್ಲಿ ಇದ್ದರು‌. ನಂತರ ಕನಕಪುರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಐಯ್ಯಪ್ಪ ದೇಗುಲದ ಆವರಣದಿಂದ ಚನ್ನಬಸಪ್ಪ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರೂ ಸೇರಿದಂತೆ ಸಾವಿರಾರು ಮಂದಿ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT