ಗುರುವಾರ , ಸೆಪ್ಟೆಂಬರ್ 23, 2021
24 °C

'ಮಾಸ್ಟರ್‌’ಗೆ ಬದುಕು ಕಟ್ಟಿಕೊಟ್ಟ ಕೋಟೆನಾಡು

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಬದುಕಿನಲ್ಲಿ ಸೋತು, ಸುಣ್ಣವಾಗಿ ಆತ್ಮಹತ್ಯೆಗೆ ಸಿದ್ಧನಾಗಿದ್ದವನಿಗೆ ಬದುಕುವ ಭರವಸೆ ನೀಡಿದ್ದೇ ಈ ಕೋಟೆನಾಡಿನ ನೆಲ. ಅಷ್ಟೇ ಅಲ್ಲ, ಬದುಕನ್ನೇ ಕಟ್ಟಿಕೊಟ್ಟ ಕರ್ಮ ಭೂಮಿ ಈ ಮದಕರಿನಾಯಕನ ನೆಲೆ ಚಿತ್ರದುರ್ಗ...

ಅದು ಡಿಸೆಂಬರ್ 1, 2014. ಚಿತ್ರದುರ್ಗದ ಎಸ್‌ಜೆಎಂ ಡೆಂಟಲ್‌ ಕಾಲೇಜು ಸಭಾಂಗಣ ‘ಜಮುರಾ ನಾಟಕೋತ್ಸವ’ಕ್ಕೆ ಸಜ್ಜಾಗಿತ್ತು. ಜಮುರಾ ಕಲಾ ತಂಡದವರು ‘ಷರೀಫಾ’ ನಾಟಕ ಪ್ರದರ್ಶಿಸಲು ಅಣಿಯಾಗುತ್ತಿದ್ದರು. ಆರಂಭದಲ್ಲಿ ಸಭಾ ಕಾರ್ಯಕ್ರಮ.

ಪ್ರತಿ ವರ್ಷ ನಾಟಕೋತ್ಸವದಲ್ಲಿ ಒಬ್ಬ ಖ್ಯಾತ ರಂಗಕರ್ಮಿಯನ್ನು ಆಹ್ವಾನಿಸಿ, ಗೌರವಿಸುವುದು ಸಂಪ್ರದಾಯ. ಅದರಂತೆ, ಆ ವರ್ಷದ ನಾಟಕೋತ್ಸವಕ್ಕೆ ಆಯ್ಕೆ ಮಾಡಿದ್ದು ನಟರತ್ನಾಕರ ಮಾಸ್ಟರ್‌ ಕೆ. ಹಿರಣ್ಣಯ್ಯ ಅವರನ್ನು. ಆದರೆ, ಅನಾರೋಗ್ಯದ ಕಾರಣ, ಹಿರಣ್ಣಯ್ಯ ಅವರು ಕಾರ್ಯಕ್ರಮಕ್ಕೆ ಬರುವುದೇ ಅನುಮಾನವಿತ್ತು. ಆದರ, ಕೋಟೆನಾಡಿನ ಮೇಲಿನ ಪ್ರೀತಿ, ಕಾರ್ಯಕ್ರಮಕ್ಕೆ ಗೈರಾಗಲು ಬಿಡಲಿಲ್ಲ ಎನ್ನಿಸುತ್ತದೆ. ಬೆಚ್ಚನೆಯ ಉಡುಪು ಧರಿಸಿ, ಕುಂಟುತ್ತಲೇ ವೇದಿಕೆ ಏರಿದರು. ಜಮುರಾ ಕಲಾ ತಂಡದ ಅಧ್ಯಕ್ಷರು ಹಾಗೂ ಮುರುಘಾಮಠದ ಪೀಠಾಧ್ಯಕ್ಷರಾಧ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ, ಜಿಲ್ಲೆಯ ಹಿರಿಯ ನಾಟಕಕಾರರು, ರಂಗಕಲಾವಿದರು, ಶಾಸಕರು ವೇದಿಕೆಯಲ್ಲಿದ್ದರು.

ಇದನ್ನೂ ಓದಿ: ಹಿರಿಯ ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ ವಿಧಿವಶ 

ಜಮುರಾ ತಂಡದವರಲ್ಲೊಬ್ಬರು ಪ್ರಶಸ್ತಿ ಪತ್ರ ಓದಿದರು. ಶಿವಮೂರ್ತಿ ಮುರುಘಾ ಶರಣರು, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಹಿರಣ್ಣಯ್ಯ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸುತ್ತಲೇ ಭಾವುಕರಾದರು ‘ಮಾಸ್ಟರ್‌’. ‘ಅನ್ನದಾತರಿಗೆ ನಮಸ್ಕಾರ’ ಎನ್ನುತ್ತಾ ‘ಆರು ದಶಕಗಳ ಹಿಂದೆ, ಈ ನೆಲ, ಈ ಮಾಸ್ಟರ್‌ ಹಿರಣ್ಣಯ್ಯನಿಗೆ ಪುನರ್ಜನ್ಮ ನೀಡಿತು’ ಎಂದು ಗದ್ಗತಿರಾದರು. ‘ಬದುಕಿನಲ್ಲಿ ಸೋತು, ಸುಣ್ಣವಾಗಿ ಆತ್ಮಹತ್ಯೆಗೆ ಸಿದ್ಧನಾಗಿದ್ದವನಿಗೆ ಬದುಕುವ ಭರವಸೆ ನೀಡಿದ್ದೇ ಈ ಕೋಟೆನಾಡಿನ ನೆಲ. ಅಷ್ಟೇ ಅಲ್ಲ, ಬದುಕನ್ನೇ ಕಟ್ಟಿಕೊಟ್ಟ ಕರ್ಮ ಭೂಮಿ ಈ ಮದಕರಿನಾಯಕನ ನೆಲೆ ಚಿತ್ರದುರ್ಗ... ಈ ಮಣ್ಣಿಗೆ ನಾನು ಚಿರಋಣಿ’ ಎಂದರು.

ಇದನ್ನೂ ಓದಿ: ಮಾತೆಂಬುದು ಬರಿ ಮಾತಲ್ಲ, ಅದು ಜ್ಯೋತಿರ್ಲಿಂಗ

ಕೋಟೆನಾಡಿನ ನಂಟನ್ನು ಹೀಗೆ ಭಾವನಾತ್ಮಕವಾಗಿ ಬಿಚ್ಚಿಡುತ್ತಲೇ, 1963ರ ಆ ದಿನಗಳಲ್ಲಿ ತಮ್ಮ ರಂಗಭೂಮಿ ಬದುಕಿಗೆ ನೆರವಾದ ಅನೇಕರನ್ನು ಸ್ಮರಿಸುತ್ತಾ, ಕಣ್ಣೀರಿಟ್ಟರು.

’ನಾನು ಚಿತ್ರದುರ್ಗಕ್ಕೆ ಬಂದಾಗ ನನ್ನ ಬಳಿ ಏನೂ ಇರಲಿಲ್ಲ. ನಾಟಕ ಆಡುವುದಕ್ಕಾಗಿ ಸಂತೆಹೊಂಡದ ಪಕ್ಕದಲ್ಲಿದ್ದ ಎಸ್‌ಎಲ್‌ಎನ್‌ ಚಿತ್ರಮಂದಿರವನ್ನು ನಾಟಕ ಪ್ರದರ್ಶನಕ್ಕಾಗಿ ಮಾಲೀಕರಾದ ಜಯಣ್ಣ, ಶಿವಣ್ಣ, ಷಣ್ಮುಖಿ ಉಚಿತವಾಗಿ ಕೊಟ್ಟರು. ಆ ಥಿಯೇಟರ್‌ನಲ್ಲಿ ಸೀನ್ಸ್ ಇತ್ತು, ಲೈಟಿಂಗ್ ಇತ್ತು. ಕುರ್ಚಿಗಳೇ ಇರಲಿಲ್ಲ. ಅಂಥ ಥಿಯೇಟರ್‌ಗೆ ₹ 5 ಹಣಕೊಟ್ಟು, ಸ್ವಂತ ಕುರ್ಚಿಯಲ್ಲಿ ಕುಳಿತು, ನಾಟಕ ನೋಡಿ ಹೋಗುತ್ತಿದ್ದರು. ಅಂಥ ಹೃದಯವಂತಿಕೆಯ ಜನ ಚಿತ್ರದುರ್ಗದವರು’ ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ಹಿರಣ್ಣಯ್ಯ ಹೆಸರು ಹೇಳದಿದ್ದರೆ ರಂಗಭೂಮಿ ಚರಿತ್ರೆಯೇ ಅಪೂರ್ಣ

‘ನಾನು ಮದ್ಯವ್ಯಸನಿಯಾಗಿದ್ದೆ. ಹಣ ವ್ಯರ್ಥಮಾಡುವುದನ್ನು ಗಮನಿಸಿದ ಬಟ್ಟೆ ಅಂಗಡಿಯ ಚನ್ನಪ್ಪನವರು, ನಾಟಕದ ಕಲೆಕ್ಷನ್‌ ಸಂಗ್ರಹಿಸಿಕೊಟ್ಟರು, ಮುಂದಿನ ಕ್ಯಾಂಪ್‌ಗೆ ಲೈಟಿಂಗ್, ಸೀನ್ಸ್ ಎಲ್ಲ ಹೊಂದಿಸಿಕೊಟ್ಟು, ₹ 63 ಸಾವಿರ ಹಣವನ್ನೂ ಸಂಗ್ರಹಿಸಿಕೊಟ್ಟರು. ಅಲ್ಲಿಂದ ನನ್ನ ಬದುಕು ಮುಂದೆ ಬಂಗಾರವಾಯಿತು. ಈ ಅನುಭವದ ಮಾತುಗಳೆಲ್ಲ ಕೊರಳಿನಿಂದ ಬಂದಿದ್ದಲ್ಲ, ಕರುಳಿನಿಂದ ಬಂದಿದ್ದು’ ಎಂದು ಮತ್ತೆ ಭಾವುಕರಾದರು.

‘ನಾನೀಗ 80ರ ಹತ್ತಿರವಿದ್ದೇನೆ. ಆರೋಗ್ಯ ಕೈಕೊಟ್ಟಿದೆ. ವಿಶ್ವಾಸವಿದೆ. ನಾನು ಆಶಾವಾದಿ. ಪುನಃ ಈ ಊರಿಗೆ ಬಂದು ಅನ್ನದಾತರ ಎದುರು ನಾಟಕ ಪ್ರದರ್ಶಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರಣ್ಣಯ್ಯನವರ ಮಾತು ಕೇಳುತ್ತಿದ್ದ ಸಭಾ ಸದರ ಕಣ್ಣಂಚು ಒದ್ದೆಯಾದವು.

ಇವನ್ನೂ ಓದಿ: 

ಪತ್ನಿ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಮಾತು: ‘ಬದುಕು ಆಕೆ ಕೊಟ್ಟ ಭಿಕ್ಷೆ’

1981ರ ಅಪರೂಪದ ಚಿತ್ರವಿದು: ಧಾರವಾಡದಲ್ಲಿ ಮಾಸ್ಟರ್‌ ಹಿರಣ್ಣಯ್ಯ ಸತ್ಕಾರ ಸಮಾರಂಭ

ಯುಟ್ಯೂಬ್‌ನಲ್ಲಿ ಹಿರಣ್ಣಯ್ಯ ಅವರ ಜನಪ್ರಿಯ ನಾಟಕಗಳನ್ನು ನೋಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು