ಸೋಮವಾರ, ಮೇ 17, 2021
29 °C
ಕುಂಟು ಕಾಲಿನ ನಡಿಗೆ!

ಕನ್ನಡ ವಿ.ವಿ: ‘ವಿದ್ಯಾರಣ್ಯ’ದಲ್ಲಿ ಮಂಕಾದ ‘ಮಾತೆಂಬ ಜ್ಯೋತಿರ್ಲಿಂಗ’ ಆಶಯ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ವಿದ್ಯೆಯ ಸೃಷ್ಟಿ’ಯೇ ಗುರಿ. ‘ಮಾತೆಂಬುದು ಜ್ಯೋತಿರ್ಲಿಂಗ’ ಧ್ಯೇಯವಾಕ್ಯ. ಭಾಷೆಗಾಗಿಯೇ ಇರುವ ಇಂಥ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯು ಸದ್ಯ ‘ಕುಂಟು ಕಾಲಿನ ನಡಿಗೆ’ಯಾಗಿದೆ.

ಇದು ಕಾಲಿನ ಲೋಪವಷ್ಟೇ ಅಲ್ಲ, ನಡೆಯುವವರ ವೇಗಕ್ಕೂ ಸಂಕೇತ. ಸಂಶೋಧನೆಗೆಂದೇ 1991ರಲ್ಲಿ ವಿಶೇಷ ಕಾಯ್ದೆಯಡಿ ಸ್ಥಾಪನೆಯಾದ ವಿಶ್ವವಿದ್ಯಾಲಯವು ಬೆಳ್ಳಿ ಹಬ್ಬ ಆಚರಿಸಿಕೊಂಡಿದ್ದಾಗಿದೆ!

ಇದನ್ನೂ ಓದಿ: ಅನುದಾನವಿಲ್ಲದೆ ಸೊರಗಿದ ಕನ್ನಡ ಭಾರತಿ

ಹೊಸ ಅನ್ವೇಷಣೆಗಳು ತೆರೆದುಕೊಳ್ಳಬೇಕಾದ ತುಂಬು ಯೌವ್ವನದ ಕಾಲವನ್ನು ಬಾಲ್ಯದ ಸಂಭ್ರಮದ ನೆನಪುಗಳೇ ಆವರಿಸಿವೆ. ಹೊಸ ಸಂಶೋಧನೆಗಳಿಗಿಂತಲೂ ಮಹತ್ವದ ಹಳೆಯ ಕೃತಿಗಳ ಮರುಮುದ್ರಣಗಳೇ ವಿಜೃಂಭಿಸುತ್ತಿವೆ. ವಿಶ್ವವಿದ್ಯಾಲಯದ ಕಾಲುಗಳು ಸೋತಿವೆ. ಇಲ್ಲಿ ‘ಯುಜಿಸಿ ಸಂಬಳ’ ಪಡೆಯುವ ಉತ್ತಮ ಅಧ್ಯಾಪಕರಿದ್ದಾರೆ. ಆದರೆ ಸಂಶೋಧನೆಯ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆಯೂ ಇದೇ ಮಾತನ್ನು ಸುಲಭವಾಗಿ ಹೇಳಲಾಗುವುದಿಲ್ಲ.

ಅಧ್ಯಾಪಕರು ವರ್ಷಕ್ಕೊಂದರಂತೆ, ವಿದ್ವತ್ತಿನ ಕಣ್ಗಾವಲಿನಲ್ಲಿ ನಡೆಸಬೇಕಾದ ‘ವೈಯಕ್ತಿಕ’ ಮತ್ತು ‘ಸಾಂಸ್ಥಿಕ’ ಸಂಶೋಧನೆಗಳಿಗೆ ಕುಂಟು ಕಾಲಿನ ನಡಿಗೆಯೇ ಇಷ್ಟ. ಕೆಲವರಿಗೆ ನಿಂತಲ್ಲೇ ನಡೆಯುವುದು ಇನ್ನೂ ಇಷ್ಟ. ಇನ್ನೂ ಕೆಲವರಿಗೆ ನಡೆಯಲು ಎರಡೇ ಕಾಲು ಸಾಲದೆಂಬಂತೆ, ಖಾಸಗಿ ಪ್ರಕಾಶನಗಳ ಮೂಲಕವೂ ತಮ್ಮ ಪುಸ್ತಕಗಳನ್ನು ತುಂಬು ಖುಷಿಯಿಂದ ಪ್ರಕಟಿಸುತ್ತಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಯುಗದಲ್ಲಿ ಆಮೆ ನಡಿಗೆ

ಹತ್ತಿಪ್ಪತ್ತು ವರ್ಷ ಕೆಲವು ಸಂಶೋಧನೆಗಳನ್ನಷ್ಟೇ ಮಾಡಿದರೂ ಅಧ್ಯಾಪಕರು ಹೇಗೆ ಮುಂದುವರಿಯುತ್ತಿದ್ದಾರೆ? ‘ಸಂಶೋಧನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ’ ಕೆಲವರು ಕುಲಸಚಿವರೂ ಆಗಲು ಹೇಗೆ ಅವಕಾಶ ಸಿಕ್ಕಿತು? ಎಂಬುದಕ್ಕೆ ‘ಸೇವಾ ಹಿರಿತನ’ ಎಂಬ ತಾಂತ್ರಿಕ ಸಮರ್ಥನೆಯೂ ಇದೆ.

ಕುಲಪತಿ ಪ್ರೊ. ಸ.ಚಿ.ರಮೇಶ ಪ್ರಕಾರ, ‘ಸಂಶೋ ಧನೆಯನ್ನು ಎಲ್ಲ ಅಧ್ಯಾಪಕರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಕೆಲವರು ಸಂಶೋಧನೆ ಕಡಿಮೆ ಮಾಡಿರಬಹುದು’.

ಅಂಥವರು ಎಷ್ಟು ಮಂದಿ? ಕ್ರಮವೇನು? ಶಿಸ್ತಾಗಿ ಪ್ರತಿ ವರ್ಷವೂ ಸಂಶೋಧನೆ ನಡೆಸಿ, ಯೋಜನೆ ಪೂರ್ಣ ಗೊಳಿಸಿದವರು ಎಷ್ಟು ಎಂಬ ಪಟ್ಟಿ ವಿಶ್ವವಿದ್ಯಾಲಯದಲ್ಲಿ ಇಲ್ಲ. ಸಂಖ್ಯೆ ಮತ್ತು ಗುಣಮಟ್ಟ ಮೌಲ್ಯಮಾಪನವೂ ನಡೆದಿಲ್ಲ. ಇಲ್ಲಿ ಸಂಶೋಧನೆಗೆ ಇದ್ದ ಏಕೈಕ ಒತ್ತು ಕಡಿಮೆಯಾಗಿ ‘ಬೋಧನೆ’ಯ ಕಡೆಗೂ ತಿರುಗಿದಾಗ, ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶ, ಅನನ್ಯತೆಯೂ ಮಂಕಾಯಿತು.

ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ರೀತಿಯಲ್ಲೇ ಎಂ.ಎ. ಪಿಎಚ್‌.ಡಿ ಸಂಯೋಜಿತ ಕೋರ್ಸ್, ಪಿ.ಎಚ್‌ಡಿ, ಡಿ.ಲಿಟ್‌, ಎಂ.ಫಿಲ್‌, ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸ್ ಆರಂಭಿಸುವುದನ್ನು ‘ಶುದ್ಧ ಸಂಶೋಧಕ ಅಧ್ಯಾಪಕರು’ ವಿರೋಧಿಸಿದ್ದರು. ನಂತರ ಅವರೂ ಪಾಠ ಮಾಡಲೇಬೇಕಾಯಿತು. ಆಗ ಬಂತು ‘ಮಾತೆಂಬುದು ಜ್ಯೋತಿರ್ಲಿಂಗ’ ಎಂಬ ಮಾತಿಗೆ ಮಹತ್ವ. ‘ಸಂಶೋಧನೆಗೆ ಹೊರತಾದ ವರ್ಕ್‌ ಲೋಡ್‌ ತೋರಿಸುವ ಮಾರ್ಗ! ಈಗ ಇದೂ ಕೂಡ ವಿದ್ಯೆಯನ್ನು ಕಲಿಸುವ ವಿಶ್ವವಿದ್ಯಾಲಯವೇ ಆಗಿದೆ.

ಇದನ್ನೂ ಓದಿ: ಬಹುಭಾಷಿಕ ಕರಾವಳಿಯಲ್ಲಿ ಕನ್ನಡದ ನಂಟು

‘ಹಾಗೇನಿಲ್ಲ, ಎಂ.ಎ, ಪಿಎಚ್‌ಡಿ ಸಂಯೋಜಿತ ಕೋರ್ಸ್‌ ಅನ್ನು ಶುರು ಮಾಡಿದ್ದೇ ಸಂಶೋಧನೆಯ ವಿಸ್ತರಣೆಗಾಗಿ’ ಎನ್ನುತ್ತಾರೆ ಪ್ರೊ.ಸ.ಚಿ.ರಮೇಶ್‌. ‘ಆದರೆ ಹಾಗೆ ಸಂಶೋಧನೆ ಮಾಡಿದ ಉತ್ತಮ ಸಂಶೋಧಕರ ಕೃತಿಗಳು ಪ್ರಕಟವಾಗಿಲ್ಲ’ ಎಂಬುದನ್ನೂ ಒಪ್ಪುತ್ತಾರೆ. 

ವಿಪರ್ಯಾಸವೆಂದರೆ, ಹತ್ತಿಪ್ಪತ್ತು ಮಂದಿಗೆ ಬದಲಾಗಿ, ಇತ್ತೀಚಿಗೆ ಪ್ರತಿ ವರ್ಷ ಸುಮಾರು 500 ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಸಂಶೋಧನೆಗೆ ಅವಕಾಶ ಕೊಟ್ಟಿದ್ದರಿಂದ ಹೊರಗಿನ ಸಂಶೋಧನಾ ಅಧ್ಯಯನ ಕೇಂದ್ರಗಳ ಬೋಧಕರೂ ಮಾರ್ಗದರ್ಶಕರಾದರು. ಆದರೂ ಮಾರ್ಗದರ್ಶಕರ ಕೊರತೆ ಬಿತ್ತು. ಅದನ್ನು ನೀಗಿಸಲು ಈ ವರ್ಷ ಯಾರಿಗೂ ಸಂಶೋಧನೆಗೆ ಅವಕಾಶ ವನ್ನೇ ನೀಡಿಲ್ಲ. ಸಂಶೋಧನೆಯೇ ಪ್ರಮುಖವಾದ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಒದಗಿರುವ ದುಸ್ಥಿತಿ.

ಎರಡು ವರ್ಷಗಳ ಹಿಂದೆ, ವಿ.ವಿಗಳ ಕಾಯ್ದೆ 2000ಕ್ಕೆ ತಿದ್ದುಪಡಿ ತಂದು ಕನ್ನಡ ವಿಶ್ವವಿದ್ಯಾಲಯವನ್ನೂ ವಿಲೀನಗೊಳಿಸುವುದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಹಿಂದೆ ಸರಿದಿತ್ತು. ನಂತರ, ಎಂದಿನಂತೆ ವಿಶ್ವವಿದ್ಯಾಲಯದ ಸಂಶೋಧನೆ ‘ಪ್ರಗತಿಯಲ್ಲಿದೆ’.

ಈಗ, ಸ್ಥಗಿತಗೊಂಡಿದ್ದ ಪ್ರಸಾರಾಂಗದ ‘ಪುಸ್ತಕ ಸಂಸ್ಕೃತಿ ಯಾತ್ರೆ’ ಬಸ್‌ ಬದಲಿಗೆ ಹೊಸ ಬಸ್‌ ಬರಲಿದೆ. ಇದುವರೆಗಿನ ಮಹತ್ವದ ಪ್ರಕಟಣೆಗಳ ಇಂಗ್ಲಿಷ್‌ ಅನುವಾದ ಕೃತಿಗಳನ್ನು ಹೊರತರುವ ಯೋಜನೆ ರೂಪುಗೊಳ್ಳುತ್ತಿದೆ. ಇದೂ ಮತ್ತೆ ಹಿಮ್ಮುಖ ಚಲನೆಯೇ. ಕನ್ನಡದಲ್ಲೂ ಹೊಸ ಕೃತಿಗಳ ಪ್ರಕಟಣೆ ಸಿದ್ಧತೆ ನಡೆದಿದೆ. ಅದರಲ್ಲೂ ಮತ್ತೆ ಮರುಮುದ್ರಣದ ಕೃತಿಗಳು! ಹಾಗಾದರೆ, ‘ವಿದ್ಯೆಯ ಸೃಷ್ಟಿ’ ಎಂದರೇನು?

ಸಾಲುಮಂಟಪದಿಂದ ವಿದ್ಯಾರಣ್ಯದವರೆಗೆ..

ಚಂದ್ರಶೇಖರ ಕಂಬಾರರ ನೇತೃತ್ವದಲ್ಲಿ ವಿಶ್ವವಿದ್ಯಾಲಯವು ಮೊದಲಿಗೆ ಹಂಪಿಯ ವಿರೂಪಾಕ್ಷೇಶ್ವರ ಗುಡಿ ಎದುರಿನ ಮಂಟಪಗಳಲ್ಲಿ ಕೆಲಸವನ್ನು ಆರಂಭಿಸಿತ್ತು. ತುಂಗಭದ್ರೆ ಉಕ್ಕಿ ಹರಿದು ಗ್ರಂಥಾ ಲಯ ಸೇರಿ ಬಹುತೇಕ ನೀರುಪಾಲಾದ ಬಳಿಕ, ಅಳಿದುಳಿದ ಸಾಮಗ್ರಿಗಳೊಂದಿಗೆ ರಾತ್ರೋರಾತ್ರಿ ವಿದ್ಯಾರಣ್ಯಕ್ಕೆ ಬಂದು ನೆಲೆಗೊಂಡಿತ್ತು. ಕನ್ನಡ ಸಂಶೋಧನೆಯ ಕಾರ್ಯ ಆರಂಭವಾಗಿದ್ದು ಹೀಗೆ.

ಆ ಕಾಲಘಟ್ಟದ ಕನಸುಗಳು ಈಡೇರಿವೆಯೇ? ಎಷ್ಟು? ಹೇಗೆ? ಹೊಸ ಕಾಲಘಟ್ಟದಲ್ಲಿ ವಿಶ್ವವಿದ್ಯಾಲಯದ ಕನಸುಗಳು ಹೇಗಿರಬೇಕು ಎಂಬುದರ ಬಗ್ಗೆ, ಎರಡು ವರ್ಷದ ಹಿಂದೆ ನಡೆದ ಬೆಳ್ಳಿ ಹಬ್ಬದ ಸಂದರ್ಭದಲ್ಲೂ ಗಟ್ಟಿ ಚರ್ಚೆಗಳು ಮೂಡಿದ್ದು ಕಡಿಮೆ.  

ಕನ್ನಡ ವಿ.ವಿ ಏನಾಗಬೇಕು?

ಈ ಪ್ರಶ್ನೆಗೆ ಸುಲಭರೂಪಿಯೂ, ಸಂಕೀ ರ್ಣವೂ ಆದ ಉತ್ತರಗಳಿವೆ. ಇಲ್ಲಿ ಈ ಮೊದಲು ಸಂಶೋಧ ನೆಗೆ ಇದ್ದ ತೇಜಸ್ಸು ಮರಳಿ ಬರಬೇಕು ಎಂಬುದು ವಿಶ್ವವಿದ್ಯಾಲಯದ ಮೇಲೆ ಸಿಟ್ಟು, ಪ್ರೀತಿ ಅಸ ಮಾಧಾನವುಳ್ಳ ಎಲ್ಲರ ಆಗ್ರಹ. ಅದಕ್ಕೆ ಎಲ್ಲ ಅಧ್ಯಾಪಕರೂ ಯಾವ ಕಾರಣಗಳನ್ನೂ ನೀಡದೇ ಸಂಶೋಧನೆಗಳತ್ತ ನಡೆಯಬೇಕು. ಅಲ್ಪ ತೃಪ್ತಿಯಿಂದ ಹೊರಬಂದು ಮಹತ್ವಾಕಾಂಕ್ಷೆಯ ಕೈಹಿಡಿಯಬೇಕು. ಹಾಗೆ ನಡೆಯದವರ ವಿರುದ್ಧ ವಿಶ್ವವಿದ್ಯಾಲಯ ಕಠಿಣ ಕ್ರಮಗಳನ್ನು ಜರುಗಿಸಬೇಕು.

‘ಇದುವರೆಗೆ ವಿಶ್ವವಿದ್ಯಾಲಯದಲ್ಲಿ ಆಗಿರುವುದೇ ದೊಡ್ಡದು’ ಎಂಬುದನ್ನಷ್ಟೇ ನೆಚ್ಚಿಕೊಂಡು ಕೂರದೇ ‘ಮಾತೆಂಬುದು ಜ್ಯೋತಿರ್ಲಿಂಗ’ ಆಶಯದ ಘನತೆಯನ್ನು ಎತ್ತಿಹಿಡಿಯುವ ಕೆಲಸವಾಗಬೇಕು. ನಾಡಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು.

‘ಕನ್ನಡ’ವನ್ನು ವಿಶ್ವಕ್ಕೆ ಪರಿಚಯಿಸುವ, ವಿಶ್ವದ ಎಲ್ಲ ಜ್ಞಾನವನ್ನೂ ಕನ್ನಡಕ್ಕೆ ತರುವ ನಿಟ್ಟಿನಲ್ಲಿ ದೇಶ–ವಿದೇಶದ ಪ್ರಮುಖ ವಿಶ್ವವಿದ್ಯಾಲಯಗಳೊಂದಿಗೆ ಸಂವಾದ ಏರ್ಪಡಬೇಕು. ಇದುವರೆಗೆ ಜರ್ಮನಿಯೊಂದಿಗೆ ಅಂಥ ಸಂವಾದ ಏರ್ಪಟ್ಟಿದೆ. 

ನಾಡಿನ ಜನ ಸಾಮಾನ್ಯರು ಹಾಗೂ ವಿದ್ವಾಂಸ ವಲಯದ ನಿರೀಕ್ಷೆಗೆ ತಕ್ಕಂತೆ ‘ಹೊಸ ಬೇಡಿಕೆ’ಯನ್ನು ಸೃಷ್ಟಿಸಿಕೊಳ್ಳಬೇಕು. ‘ವಿದ್ಯೆಯ ಸೃಷ್ಟಿ’ಯನ್ನು ಇನ್ನಷ್ಟು ಖಚಿತವಾಗಿ ನಿರ್ವಚಿಸಿಕೊಂಡು ಹೆಜ್ಜೆ ಇಡಬೇಕು.

ಮರೆಯಾದ ಆದರ್ಶ...

ಎರಡನೇ ಕುಲಪತಿಯಾಗಿ ಪ್ರೊ.ಎಂ.ಎಂ.ಕಲಬುರ್ಗಿ ಅವರು ಬರುವಾಗ ಒಂದು ಸೂಟ್‌ಕೇಸ್‌ ಜೊತೆಗೆ ಬಂದಿದ್ದರು. ನಿವೃತ್ತರಾಗಿ ಹೋಗುವಾಗ, ‘ಇಲ್ಲಿನ ದೂಳನ್ನೂ ಒಯ್ಯಬಾರದು’ ಎಂದು ವಿಶ್ವವಿದ್ಯಾಲಯದ ಮೆಟ್ಟಿಲ ಮೇಲೆ ತಮ್ಮ ಬೂಟು ಕೊಡವಿದ್ದರು. 

ಕಲಬುರ್ಗಿಯವರ ಶಿಷ್ಯೆ, ಏಳನೇ ಕುಲಪತಿಯಾಗಿದ್ದ ಪ್ರೊ.ಮಲ್ಲಿಕಾ ಘಂಟಿಯವರು ಹೋಗುವಾಗ ಕುಲಪತಿ ನಿವಾಸದಲ್ಲಿದ್ದ ವಾಷಿಂಗ್‌ ಮೆಷಿನ್‌ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ತಮ್ಮೊಂದಿಗೆ ಒಯ್ದ ಆರೋಪಕ್ಕೆ ಗುರಿಯಾಗಿದ್ದಾರೆ. ಮಾತ್ರವಲ್ಲ, ಇ -ಟೆಂಡರ್‌ ಕರೆಯದೇ ಕೋಟ್ಯಂತರ ರೂಪಾಯಿ ಮೌಲ್ಯದ ಕಾಮಗಾರಿಗಳಿಗೆ ಅನುಮೋದನೆ ನೀಡಿದರು ಎಂಬ ಆರೋಪದ ತನಿಖೆ ನಡೆದಿದೆ.

25 ವರ್ಷ: 1440 ಪುಸ್ತಕ

ಎರಡೂವರೆ ದಶಕಗಳ ಅವಧಿಯಲ್ಲಿ ವಿಶ್ವವಿದ್ಯಾಲಯ 1,440 ಪುಸ್ತಕಗಳನ್ನು ಪ್ರಕಟಿಸಿದೆ. ಸ್ಥಾಪನೆಯಾದ ಬಳಿಕ, 1992ರಲ್ಲಿ 5 ಪುಸ್ತಕಗಳು ಪ್ರಕಟವಾಗಿದ್ದವು. ಸುದೀರ್ಧ ಅವಧಿಯಲ್ಲಿ ಮೂರು ಬಾರಿ ಮಾತ್ರ ನೂರಕ್ಕೂ ಹೆಚ್ಚು ಕೃತಿಗಳನ್ನು ವಿಶ್ವವಿದ್ಯಾಲಯ ಪ್ರಕಟಿಸಿದೆ. ಉಳಿದಂತೆ ಎಲ್ಲ ವರ್ಷಗಳಲ್ಲೂ ಎರಡಂಕಿ ಪುಸ್ತಕಗಳನ್ನಷ್ಟೇ ಪ್ರಕಟಿಸಿದೆ. ಯುಜಿಸಿ ಅನುದಾನವೇ ದೊರಕದ ಕಾಲಘಟ್ಟದ 1993ರಲ್ಲಿ 20 ಪುಸ್ತಕಗಳು, ಬೆಳ್ಳಿ ಹಬ್ಬ ಆಚರಣೆಗೂ ಮುನ್ನ, 2016ರಲ್ಲಿ ಕೇವಲ 9 ಪುಸ್ತಕಗಳು ಪ್ರಕಟವಾಗಿವೆ! 

2019ರ ಸೆಪ್ಟೆಂಬರ್‌ವರೆಗೆ 28 ಪುಸ್ತಕಗಳು ಪ್ರಕಟವಾಗಿವೆ. ಅಂದ ಹಾಗೆ, ವಿಶ್ವವಿದ್ಯಾಲಯದಲ್ಲಿ 17 ವಿಭಾಗಗಳು ಹಾಗೂ 59 ಪ್ರಾಧ್ಯಾಪಕರಿದ್ದಾರೆ. 11 ಅಧ್ಯಯನ ಪೀಠಗಳಿವೆ. 4 ಅಧ್ಯಯನ ಕೇಂದ್ರ, 2 ವಿಸ್ತರಣಾ ಕೇಂದ್ರಗಳಿವೆ. ವಿಶ್ವವಿದ್ಯಾಲಯದ ಮಾನ್ಯತೆ ಪಡೆದ 20 ಸಂಶೋಧನಾ ಕೇಂದ್ರಗಳಿವೆ.

ಇನ್ನಷ್ಟು...

ಆ ದಿನಗಳು ಈಗ ನೆನಪು...

ವಿಷಯ ತಜ್ಞರ ಕೊರತೆ: ಪ್ರಗತಿ ಕುಂಠಿತ

ಏಕೀಕರಣ ಆಶಯದ ಕೇಂದ್ರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು