ಮಂಗಳವಾರ, ಆಗಸ್ಟ್ 20, 2019
24 °C

‘ನಾಟಿಕೋಳಿ ತಿನ್ನಿ ಪರವಾಗಿಲ್ಲ, ಅಮ್ಮನಿಗೆ ನಾನು ಹೇಳ್ತೀನಿ’ ಎಚ್‌ಡಿಕೆಗೆ ಸ್ಪೀಕರ್

Published:
Updated:

ಬೆಂಗಳೂರು: ಸದನದಲ್ಲಿ ಸಚಿವ ಕೃಷ್ಣಭೈರೇಗೌಡ ಐಎಂಎ ಹಗರಣದ ವಿಚಾರ ಪ್ರಸ್ತಾಪಿಸಿದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಇದಕ್ಕೆ ‘ಬಿರಿಯಾನಿ ತಿಂದವರು ಉತ್ತರ ಕೊಡಬೇಕು’ ಎಂದು ಕಟಕಿಯಾಡಿದರು.

ಸ್ವಯಂಪ್ರೇರಿತರಾಗಿ ಉತ್ತರ ನೀಡಲು ಎದ್ದು ನಿಂತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಸಿ.ಟಿ.ರವಿ ಅವರು ಬಿರಿಯಾನಿ ತಿಂದವರು ಎಂದು ಪರೋಕ್ಷವಾಗಿ ನನ್ನನ್ನೇ ಉಲ್ಲೇಖಿಸಿದ್ದು’ ಎನ್ನುತ್ತಾ ವಿವರಣೆ ನೀಡಲು ಆರಂಭಿಸಿದರು.

‘ಮಾನ್ಯ ಸಭಾಧ್ಯಕ್ಷರೇ, ನಾನು ಬಿರಿಯಾನಿ ತಿಂದಿಲ್ಲ. ಎರಡನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಯಾದ ನಂತರ ಮಾಂಸಾಹಾರ ಸೇವನೆ ಬಿಟ್ಟಿದ್ದೇನೆ. ಅಂದು ಅಲ್ಲಿ ಖರ್ಜೂರವೊಂದನ್ನು ಬಾಯಿಗೆ ಹಾಕಿಕೊಂಡಿದ್ದೆ ಅಷ್ಟೇ’’ ಎಂದು ಸ್ಪಷ್ಟನೆ ನೀಡಿದರು.

ಮುಖ್ಯಮಂತ್ರಿ ಪ್ರತಿಕ್ರಿಯೆ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್‌ ಕುಮಾರ್, ‘ಆಪರೇಷನ್ ಆಯ್ತು ಅಂತ ಬಿರಿಯಾನಿ ತಿನ್ನೋದು ಬಿಡಬೇಡಿ. ನಾಟಿಕೋಳಿ–ಫಿಶ್ ತಗೊಳಿ. ನಾನು ನಿಮ್ಮ ಅಮ್ಮನ ಜೊತೆಗೆ ಮಾತಾಡ್ತೀನಿ’ ಎಂದು ತಮಾಷೆ ಮಾಡಿದರು. ಸದನ ನಗೆಗಡಲಲ್ಲಿ ತೇಲಿತು.

‘ಏನ್ರೀ ಈಶ್ವರಪ್ಪ ಇಷ್ಟೊಂದು ನಗ್ತಾ ಇದ್ದೀರಿ’ ಏಂದು ರಮೇಶ್‌ ಕುಮಾರ್ ಈಶ್ವರಪ್ಪ ಅವರನ್ನು ಪ್ರಶ್ನಿಸಿದರು. ‘ಸತ್ಯ ಹೇಳಿದ್ರಿ, ಅದಕ್ಕೇ ನಗ್ತಿದ್ದೀನಿ’ ಅಂತ ಈಶ್ವರಪ್ಪ ಇನ್ನಷ್ಟು ನಗು ತುಳುಕಿಸಿದರು.

ಮುಂಜಾನೆಯಿಂದ ಕಾವೇರಿದ ವಾತಾವರಣದಲ್ಲಿಯೇ ಚರ್ಚೆಯಲ್ಲಿ ಮುಳುಗಿದ್ದ ಸದಸ್ಯರಿಗೆ ಬಿರಿಯಾನಿ ಪ್ರಸಂಗ ತುಸು ಬಿಡುವು ನೀಡಿದ್ದು ಸುಳ್ಳಲ್ಲ.

Post Comments (+)