ಮಂಗಳವಾರ, ಜನವರಿ 28, 2020
19 °C
ಹಿಂದೂ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಕ್ಕೆ ಸಿದ್ಧತೆ

ಕ್ರಿಶ್ಚಿಯನ್, ಮುಸ್ಲಿಮರಿಗೂ ಉಚಿತ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದೂ ಸಮಾಜದವರಿಗೆ ಮಾತ್ರ ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ಸಾಮೂಹಿಕ ಉಚಿತ ವಿವಾಹ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್, ಮುಸ್ಲಿಮರಿಗೂ ಅವರ ಧಾರ್ಮಿಕ ಸಂಸ್ಥೆಗಳ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ‘ಸಪ್ತಪದಿ’– ಸಾಮೂಹಿಕ ವಿವಾಹ ಕಾರ್ಯಕ್ರಮದ ಲೋಗೊ ಹಾಗೂ ಕರಪತ್ರಗಳನ್ನು ಬಿಡುಗಡೆಮಾಡಿ ಮಾತನಾಡಿದರು.

ದೇವಾಲಯಗಳ ಹಣವನ್ನು ಬಳಕೆಮಾಡಿಕೊಂಡು ಹಿಂದೂಗಳಿಗೆ ಮಾತ್ರ ವಿವಾಹ ಏರ್ಪಡಿಸಲಾಗಿದೆ. ಅದೇ ರೀತಿಯಲ್ಲಿ ಇತರ ಧರ್ಮದವರು ತಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ಇರುವ ಹಣವನ್ನು ಬಳಸಿಕೊಂಡು ಸಾಮೂಹಿಕ ವಿವಾಹ ನಡೆಸಲು ಮುಂದಾದರೆ ಅದಕ್ಕೆ ಅಗತ್ಯವಾದ ಅನುಮತಿ ನೀಡಿ, ಎಲ್ಲಾ ರೀತಿಯ ಸಹಕಾರ ಕೊಡಲಾಗುವುದು ಎಂದರು.

‘ಅದ್ಧೂರಿಯಾಗಿ ವಿವಾಹ ಮಾಡಿಕೊಂಡು ಸಾಕಷ್ಟು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಸಾಲಕ್ಕೆ ಸಿಲುಕಿ ನೆಮ್ಮದಿ ಹಾಳುಮಾಡಿಕೊಂಡಿದ್ದಾರೆ. ಮದುವೆ ಮಾಡುವುದು, ಮಾಡಿಕೊಳ್ಳುವುದು ದೊಡ್ಡ ಸಮಸ್ಯೆ ಎಂಬುದನ್ನು ದೂರಮಾಡುವುದು, ದುಂದು ವೆಚ್ಚ ತಡೆಯುವ ಸಲುವಾಗಿ ಹಿಂದೂ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಇದು ಮುಂದಿನ ವರ್ಷಗಳಲ್ಲೂ ಮುಂದುವರಿಯಲಿದೆ’ ಎಂದು ವಿವರಿಸಿದರು.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು.

₹55 ಸಾವಿರ ಪ್ರೋತ್ಸಾಹ ಧನ

ವರನಿಗೆ ಪಂಚೆ, ಶರ್ಟ್, ಶಲ್ಯಕ್ಕಾಗಿ ₹5 ಸಾವಿರ, ವಧುವಿಗೆ ಧಾರೆ ಸೀರೆ, ರವಿಕೆ ಕಣಕ್ಕಾಗಿ ₹10 ಸಾವಿರ ಹಾಗೂ ಚಿನ್ನದ ತಾಳಿ, ಎರಡು ಗುಂಡು (8 ಗ್ರಾಂ ತೂಕ) ತೆಗೆದುಕೊಳ್ಳಲು ₹ 40 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ವಧು– ವರರಿಗೆ ಒಟ್ಟು ₹ 55 ಸಾವಿರ ನೀಡಿದಂತಾಗುತ್ತದೆ.

 
‌***

ಬಾಲ್ಯ ವಿವಾಹ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ
–ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು