ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದ ನೀರಿನಲ್ಲೂ ‘ಬೇಳೆ’ ಬೇಯಿಸಿದ ರಾಜಕೀಯದ ಪಕ್ಷಗಳು

Last Updated 15 ಆಗಸ್ಟ್ 2019, 10:19 IST
ಅಕ್ಷರ ಗಾತ್ರ

ಈ ವರ್ಷ ರಾಜ್ಯ ಕಂಡ ಮಳೆ–ಪ್ರವಾಹ ಒಂದಿಡೀ ತಲೆಮಾರಿಗೆ ದುಃಸ್ವಪ್ನ. ‘ಶತ್ರುಗಳಿಗೂ ಇಂಥ ಪರಿಸ್ಥಿತಿ ಬರಬಾರದು’ ಎನ್ನುವ ಸಂತ್ರಸ್ತರ ನಿಟ್ಟುಸಿರು ಅವರು ಅನುಭವಿಸಿದ್ದ ನೋವನ್ನು ಹಿಡಿದಿಟ್ಟಿತ್ತು. ಇಡೀ ರಾಜ್ಯ ಅವರ ಪರಿಸ್ಥಿತಿ ಕಂಡು ಮರುಗಿತ್ತು. ಆದರೆ ನಮ್ಮ ರಾಜಕಾರಿಣಿಗಳು ಮಾತ್ರ ಇದಕ್ಕೆ ಹೊರತಾಗಿದ್ದರು.

ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರವಾಹದ ರಾಡಿಯನ್ನೇ ಪರಸ್ಪರ ಎರಚಿಕೊಂಡಿದ್ದರು. ಇವರ ಕೆಸರೆರಚಾಟ ರಾಜ್ಯದ ಜನರಿಗೆ ಅಸಹ್ಯ ಹುಟ್ಟಿಸಿತ್ತು. ಪ್ರವಾಹದಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಜನರ ಪರ ನಿಲ್ಲದೆ ರಾಜಕೀಯ ಬೇಳೆ ಬೇಯಿಸಿಕೊಂಡ ಇವರ ಟ್ವೀಟ್‌ಗಳ ಸ್ಯಾಂಪಲ್‌ಗಳು ಇಲ್ಲಿವೆ ನೋಡಿ.

ಜೆಡಿಎಸ್‌

‘ಅತೃಪ್ತ ಆತ್ಮಗಳ' ಸರ್ಕಾರ

ರಾಜ್ಯದಾದ್ಯಂತ ಬರ ಹಾಗೂ ಕೆಲವೆಡೆ ನೆರೆಯ ಪರಿಸ್ಥಿತಿ ಇದೆ. ಆದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಒಂದು ವಾರವಾದರೂ ಮಂತ್ರಿಮಂಡಲ ರಚಿಸದೇ ಕಾಲಹರಣ ಮಾಡುತ್ತಿದ್ದಾರೆ.ರಾಜ್ಯದ ಜನಸಾಮಾನ್ಯರ ಪಾಲಿಗೆ ಇದು ಒಂಥರಾ 'ಅತೃಪ್ತ ಆತ್ಮಗಳ' ಸರ್ಕಾರವಾಗಿದೆ.

ರೋಮ್‌ನ ಪಿಟೀಲು ದೊರೆಗೆ ಯಡಿಯೂರಪ್ಪ ಹೋಲಿಕೆ

ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ, ಹಾಗೆಯೇ ಉತ್ತರ ಕರ್ನಾಟಕ ಭಾರೀ ಮಳೆಯಿಂದ ಜರ್ಜರಿತವಾಗಿರುವಾಗ ಯಡಿಯೂರಪ್ಪನವರು ದೆಹಲಿಗೆ ಹೋಗಿ ಕುಳಿತಿದ್ದಾರೆ. ಕರ್ನಾಟಕದಲ್ಲಿ ‌ಸಮಸ್ಯೆ ಹೇಳಿಕೊಳ್ಳೋಕೆ ಮಂತ್ರಿಮಂಡಲವೂ ಇಲ್ಲ. ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ.

‘ಜೆಡಿಎಸ್‌ ಕಾರ್ಯಕರ್ತರು ನೆರವಾಗಿ’

ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿಂದ ಜನರು ನರಳುತ್ತಿದ್ದಾರೆ.ಇದುವರೆಗೂ ಸರ್ಕಾರ ಗಂಜಿ ಕೇಂದ್ರಗಳನ್ನು ಸ್ಥಾಪಿಸಿಲ್ಲ, ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಿಲ್ಲ. ಮುಖ್ಯಮಂತ್ರಿ ಇಲ್ಲ, ಮಂತ್ರಿಗಳೂ ಇಲ್ಲ.ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಕೋರಲಾಗಿದೆ.

‘ಬಡ ಜನರಿಗೆ ಗಂಜಿ ಕೇಂದ್ರ ಸ್ಥಾಪಿಸದವರು’

‘ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ! ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ!’

ಕಾಂಗ್ರೆಸ್‌

‘ಅಕ್ರಮ ವರ್ಗಾವಣೆ ದಂಧೆಯಿಂದ ಪುರುಸೊತ್ತು ಸಿಕ್ಕಿಲ್ಲವೇ?’

‘ಏಕವ್ಯಕ್ತಿ ಸರ್ಕಾರದ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೇ,ಅಕ್ರಮ ವರ್ಗಾವಣೆ ದಂಧೆಯಿಂದ ತಮಗೆ ಪುರುಸೊತ್ತು ಸಿಕ್ಕಿಲ್ಲವೇ?ಕೆಲವೆಡೆ ಅನಾವೃಷ್ಟಿ ಕೆಲವೆಡೆ ಅತಿವೃಷ್ಟಿ, ಜಲಪ್ರಳಯದಿಂದ 5 ಜಿಲ್ಲೆಗಳು ಮುಳುಗಿವೆ. ರೈತರು ಕಂಗಾಲಾಗಿದ್ದಾರೆ ಜನಜೀವನ ಅಸ್ತವ್ಯಸ್ತವಾಗಿದೆ.
ನಿಮ್ಮಂತೆಯೇ ಆಡಳಿತ ಯಂತ್ರವೂ ನಿಷ್ಕ್ರಿಯ; ಈ ದುರಂತಗಳಿಂದ ಜನತೆ ಪಾರಾಗುವುದು ಹೇಗೆ?

‘ರಾಜ್ಯ ಸರ್ಕಾರ ಶವವಾಗಿ ತೇಲಲಿದೆ’

‘ಕರ್ನಾಟಕ ನೀರಿನಲ್ಲಿ ಮುಳುಗಿದೆ.ಮತದಾರರು ಕಣ್ಣೀರಿನಲ್ಲಿ ಮುಳುಗಿದ್ದಾರೆ.ಬಿಜೆಪಿ ಆರೆಸ್ಸೆಸ್ ನವರು ಅಧಿಕಾರ ಹಂಚಿಕೆಯ ಕಿತ್ತಾಟದಲ್ಲಿ ಮುಳುಗಿದ್ದಾರೆ.ಮಾಧ್ಯಮದವರು ಕಾಶ್ಮೀರದಲ್ಲಿ ಮುಳುಗಿದ್ದಾರೆ.ಏಕವ್ಯಕ್ತಿಯ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.
ಕಾಯುತ್ತಿರಿ, ರಾಜ್ಯ ಸರ್ಕಾರ ಶವವಾಗಿ ತೇಲಲಿದೆ’

‘ನಾನೇ ಕಣ್ರಪ್ಪ ಸಿಎಂ’

ನಾನೇ ಕಣ್ರಪ್ಪ ಸಿಎಂ

ಮುಂಜಾಗ್ರತಾ ಕ್ರಮ ಜರುಗಿಸಲಿಲ್ಲ
ಈಗಲೂ ತ್ವರಿತಗತಿಯಲ್ಲಿ ಏನೂ ಮಾಡ್ಲಿಲ್ಲ
ಕೇಂದ್ರಕ್ಕೂ ವರದಿ ಕಳಿಸ್ಲಿಲ್ಲ
ಅಲ್ಲಿಂದಾನು ಏನೂ ಬರ್ಲಿಲ್ಲ

ಕಳೆದುಕೊಂಡ್ರಿ
ಮನೆ, ಬೆಳೆ, ಪ್ರಾಣ

ಏಕವ್ಯಕ್ತಿ ಸರ್ಕಾರ ನಂದು
ವರ್ಗಾವಣೆ ದಂದೇಲಿ ಮುಳುಗಿದ್ದೆ
ಹೈಕಮಾಂಡ್ ಆರೆಸ್ಸೆಸ್ ತೃಪ್ತಿಪಡಿಸುವದರಲ್ಲಿ ಬ್ಯೂಸಿಇದ್ದೆ

ನಾನೇ ಕಣ್ರಪ್ಪ ಸಿಎಂ

‘ದೇಶಪ್ರೇಮವನ್ನು ತೋರಿಸಬೇಕಾಗಿರುವ ಸಂದರ್ಭ ಇದು’

ಕುದುರೆ ವ್ಯಾಪಾರಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಬಿ.ಎಸ್‌.ಯಡಿಯೂರಪ್ಪನವರೇ ಕೇಂದ್ರ ಸರ್ಕಾರದ ಬಳಿ ಪರಿಹಾರ ಧನವನ್ನು ಕೇಳದೇ ಬೇಜಾಬ್ದಾರಿತನದಿಂದ ವರ್ತಿಸುವ ನಿಮ್ಮ ಪಕ್ಷದವರು ದೇಶಪ್ರೇಮವನ್ನು ತೋರಿಸಬೇಕಾಗಿರುವ ಸಂದರ್ಭ ಇದಾಗಿದೆ ಎಂಬುದನ್ನು ಮರೆಯದಿರಿ.

‘ಮೋದಿ ಬಳಿ ನೆರವು ಕೋರಲು ಸಿಎಂಗೆ ಭಯವೇ?’

‘ಅವರಿಗೆ ಸಾಧ್ಯವಾಗುತ್ತಿಲ್ಲವೇ?
ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರನ್ನು ಕೇಳಲು ನಿಮಗೆ ಭಯವೇ?ಕೂಡಲೇ ಸರ್ವ ಪಕ್ಷದ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ.
ಕೇಂದ್ರ ಸರ್ಕಾರವನ್ನು ನಾವು ಕೇಳುತ್ತೇವೆ’

ಬಿಜೆಪಿ

ಜೆಡಿಎಸ್‌ಗೆ ತಿರುಗೇಟು

‘ರಾಜ್ಯವು ಪ್ರವಾಹಕ್ಕೆ ಸಿಲುಕಿದ್ದಾಗ 5 ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದ ಸಿಎಂ ಅವರ ಪಕ್ಷವು ಇಂದು ಬೋಧನೆಯಲ್ಲಿ ತೊಡಗಿದೆ. ಆಹಾರವನ್ನು ಎಸೆಯುವ ಮೂಲಕಪ್ರವಾಹ ಪೀಡಿತರನ್ನು ಅವಮಾನಿಸುವ ಮೂಲಕ ಹಿಂಸಾನಂದವನ್ನು ಪಡುವ ಪಕ್ಷದವರಿಂದ ನಾವು ಕಲಿಯಬೇಕಾಗಿಲ್ಲ.
ಇತರರ ವಿರುದ್ಧ ಆರೋಪ ಮಾಡಲು ನಿಮಗೆ ನೈತಿಕ ಹಕ್ಕು ಇಲ್ಲ’

‘ಜೆಡಿಸ್‌ನಿಂದ ಸುಳ್ಳುಸುದ್ದಿ’

ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರಸಗೊಬ್ಬರಕ್ಕಾಗಿ ಆಗ್ರಹಿಸಿದ್ದ ರೈತನ ಮೇಲೆ ಗುಂಡು ಹಾರಿಸಲಾಗಿತ್ತು. ಅದೇ ತೀತಿ ನೆರವು ಕೋರಲು ಬಂದ ನೆರೆ ಸಂತ್ರಸ್ತರ ಮೇಲೆ ಲಾಠಿ ಚಾರ್ಚ್‌ ಮಾಡಲಾಗಿದೆ ಎಂದು ಜೆಡಿಎಸ್‌ ಟ್ವೀಟ್‌ ಮಾಡಿತ್ತು. ಅದಕ್ಕೆ ಬಿಜೆಪಿ ಟ್ವಿಟರ್‌ ಮೂಲಕವೇ ತಿರುಗೇಟು ನೀಡಿದೆ.

‘ಸುಳ್ಳು ಸುದ್ದಿ !!
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ಪೊಲೀಸರು ಜನ ದಟ್ಟಣೆಯನ್ನು ನಿಯಂತ್ರಿಸುತ್ತಿದ್ದರು ಅಷ್ಟೇ.
ಇಂತಹ ಸುಳ್ಳು ಸುದ್ದಿಯನ್ನು ಹರಡುವ ಬದಲು ನಮ್ಮ ಜನರನ್ನು ರಕ್ಷಿಸಲು ಪ್ರವಾಹ ಪೀಡಿತ ಪ್ರದೇಶಗಳತ್ತ ಒಂದು ಹೆಜ್ಜೆ ಇಡುವಂತೆ ನಿಮ್ಮ 5ಸ್ಟಾರ್‌ ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಸಲಹೆ ನೀಡುವಂತೆ ಸೂಚಿಸುತ್ತೇವೆ’

‘ಸಿದ್ದರಾಮಯ್ಯಗೆ ಬಿರಿಯಾನಿ ಪಾರ್ಟಿಗೆ ಹೋಗಲು ಸಮಯ ಇದೆ’

ಬಾದಾಮಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಟ್ವಿಟರ್‌ ಬೋಧಕ ಸಿದ್ದರಾಮಯ್ಯ ಅವರಿಗೆ ಸಮಯವಿಲ್ಲ. ಆದರೆ, ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯನ ಮನೆಯಲ್ಲಿ ನಡೆದ ಬಿರಿಯಾನಿ ಪಾರ್ಟಿಗೆ ಹೋಗಲು ಸಮಯವಿದೆ.
ಬಿರಿಯಾನಿ ತಿನ್ನುವುದು ಮುಗಿದಿದ್ದರೆ ನಿಮ್ಮ ಕ್ಷೇತ್ರಕ್ಕೆ ಭೇಟಿ ನೀಡಲು ಸ್ವಲ್ಪ ಪ್ರಯತ್ನ ಮಾಡಿ. ನಿಮಗೆ ಮತ ನೀಡಿದ ಜನರ ಮನವಿಯನ್ನು ಆಲಿಸಿ’

‘ನಿಮ್ಮಲ್ಲಿ ನೈತಿಕತೆ ಕಾಣೆಯಾಗಿವೆ’

ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರ ಕರ್ನಾಟಕದ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು.

ಮಾತ್ರವಲ್ಲದೆ‘2009ರಲ್ಲಿ ನೆರೆ ಉಂಟಾಗಿ ಕರ್ನಾಟಕ ಆಂಧ್ರಪ್ರದೇಶ ಸಂಕಷ್ಟಕ್ಕೆ ಸಿಲುಕಿದ್ದಾಗ ಆಗಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು 2 ದಿನಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿ ₹2000 ಕೋಟಿ ಬಿಡುಗಡೆ ಮಾಡಿದ್ದರು.ಈಗಿನ ಜಲಪ್ರಳಯ 10 ಪಟ್ಟು ಹೆಚ್ಚು ಭೀಕರ, ಪ್ರಧಾನ ಮಂತ್ರಿಗಳೆಲ್ಲಿ? ರಾಜ್ಯ ಸರ್ಕಾರದ ಬೇಡಿಕೆ ₹6000 ಕೋಟಿ ಬಿಡುಗಡೆ ಯಾಕಿಲ್ಲ?’ ಎಂದೂ ಟ್ವಿಟರ್‌ನಲ್ಲಿ ಪ್ರಶ್ನಿಸಿತ್ತು.

ಅವುಗಳಿಗೆ ಬಿಜೆಪಿ ಪ್ರತಿಕ್ರಿಯಿಸಿದೆ.

‘ನಿಮ್ಮ ಪಕ್ಷ ಬಿರಿಯಾನಿ ಪಾರ್ಟಿಯಲ್ಲಿ ನಿರತವಾಗಿರುವ ಅದೇ ಹೊತ್ತಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರವಾಹ ಸಂತ್ರಸ್ತರನ್ನು ರಕ್ಷಿಸುವ ಹಾಗೂಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ನಿರತವಾಗಿದೆ.
ನಿಜವಾಗಿಯೂ ಕಾಂಗ್ರೆಸ್‌ ಶಾಸಕರು ಕಣ್ಮುಚ್ಚಿ ಕುಳಿತು ಜನರ ಸಂಕಷ್ಟಗಳನ್ನು ಗೇಲಿ ಮಾಡುತ್ತಿದ್ದಾರೆ.
ನಿಮ್ಮಲ್ಲಿ ನೈತಿಕತೆ ಮತ್ತು ಸಿದ್ಧಾಂತಗಳು ಕಾಣೆಯಾಗಿವೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT